ಸಿಎಎ, ಎನ್‍ಆರ್‍ಸಿ ವಿರುದ್ಧ ಬೃಹತ್ ಸಮಾವೇಶ!!

ತುಮಕೂರು :

      ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಿ ದೇಶಾದ್ಯಂತ ತೀವ್ರ ಪ್ರತಿಭಟನೆಗಳು ನಡೆಯುತ್ತಿದ್ದು ಎರಡನೇ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಜನ ಬೀದಿಗೆ ಇಳಿದಿದ್ದಾರೆ. ಜನವಿರೋಧಿ ಸಿಎಎ, ಎನ್‍ಅರ್‍ಸಿ ಮತ್ತು ಎನ್‍ಪಿಆರ್‍ಗಳನ್ನು ವಾಪಸ್ ಪಡೆಯುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಜನವಾದಿ ಮಹಿಳಾ ಸಂಘಟನೆಯ ನಾಯಕಿ ಕೆ.ಎಸ್.ವಿಮಲ ಹೇಳಿದ್ದಾರೆ.

      ತುಮಕೂರು ನಗರದ ಟೌನ್‍ಹಾಲ್‍ನಲ್ಲಿ ಪ್ರಗತಿಪರ ಮಹಿಳಾ ಸಂಘಟನೆಗಳ ಒಕ್ಕೂಟದಿಂದ ಸಿಎಎ, ಎನ್‍ಆರ್ಸಿ ಮತ್ತು ಎನ್‍ಪಿಆರ್ ವಿರೋಧಿಸಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಜನರಿಗೆ ಸಿಎಎ, ಎನ್.ಆರ್.ಸಿ ಮತ್ತು ಎನ್.ಪಿ.ಆರ್‍ನ ಎಬಿಸಿಡಿ ಕಲಿಸಲು ಹೊರಟಿದೆ, ನಾವು ಕೇಂದ್ರ ಸರ್ಕಾರಕ್ಕೆ ಎಕ್ಸ್-ವೈ ಕಲಿಸಬೇಕಾದ ತುರ್ತು ಅಗತ್ಯವಿದೆ ಎಂದು ತಿಳಿಸಿದರು.ನಮ್ಮ ಸಂವಿಧಾನವನ್ನು ಭಾರತೀಯರಾದ ನಾವು ಒಪ್ಪಕೊಂಡಿದ್ದು ನಮಗೆ ನಾವೇ ಸಮರ್ಪಿಸಿಕೊಂಡಿದ್ದೇವೆ. ಜಾತಿ, ಧರ್ಮ, ಲಿಂಗ, ಭಾಷೆ, ವರ್ಗದ ತಾರತಮ್ಯವಿಲ್ಲದೆ ಅಂಗೀಕರಿಸಿದ್ದೇವೆ. ಇಂದು ಅಂತಹ ಸಂವಿಧಾನಕ್ಕೆ ಕುತ್ತು ಬಂದಿದೆ. ಸಂವಿಧಾನವನ್ನು ಉಳಿಸಿಕೊಳ್ಳಲು ಇಡೀ ಸಮೂಹ ಬೀದಿಗೆ ಬಿದ್ದಿದೆ. ಎರಡನೇ ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿದ್ದು ಸಂವಿಧಾನ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವವರೆಗೂ ವಿರಮಿಸುವುದಿಲ್ಲ ಎಂದು ಹೇಳಿದರು.

      ನಾವು ಯಾವುದೇ ಬೇಡಿಕೆಗಳನ್ನು ಸರ್ಕಾರದ ವಿರುದ್ಧ ಹೋರಾಡುತ್ತಿಲ್ಲ. ನಮ್ಮ ಪ್ರತಿಭಟನೆ ಸಂವಿಧಾನವನ್ನು ಉಳಿಸಿಕೊಳ್ಳುವುದಕ್ಕಾಗಿ. ಎಕ್ಸ್ ಮತ್ತು ವೈ ಜೀವಿಸಲು ಈ ದೇಶದಲ್ಲಿ ಜಾಗಬೇಕು. ಎಕ್ಸ್ ವೈ ನೆಮ್ಮದಿಯಿಂದ ಬದುಕು ನಡೆಸುತ್ತಿದ್ದಾರೆ. ಆದರೆ ಸರ್ಕಾರ ಜಾರಿಗೆ ತರಲು ಹೊರಟಿರುವ ಕಾಯ್ದೆಗಳು ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುತ್ತವೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸವಾಲು ಹಾಕಿದರು.

      ಮಹಿಳಾ ನಾಯಕಿ ಶೀಮಾ ಮೊಹಸೀನ್ ಮಾತನಾಡಿ ಕೇಂದ್ರ ಸರ್ಕಾರ ಧರ್ಮದ ಆಧಾರದ ಮೇಲೆ ಪೌರತ್ವ ನೋಂದಣಿಗೆ ಮುಂದಾಗಿದೆ. ಇದಕ್ಕೆ ನಮ್ಮ ತೀವ್ರ ವಿರೋಧವಿದೆ ಎಂದರು.ಮಹಿಳಾ ನಾಯಕಿ ಝೈನಬ್ ಮೊಹಮ್ಮದಿ ಮಾತನಾಡಿ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ಭಾರತಿ ಮೊದಲಾದವರು ಮಾತನಾಡಿದರು.

      ಎಐಎಂಎಸ್‍ಎಸ್‍ನ ಎಂ.ವಿ.ಕಲ್ಯಾಣಿ ಕಾರ್ಯಕ್ರಮ ನಿರೂಪಿಸಿದರು. ಆಶ್ವಿನಿ, ಶಮಾ ರಾಷ್ಟ್ರಗೀತೆ ಹಾಡಿದರು.ಅಸ್ಮತ್ ಉನ್ನೀಸಾ ಸಾರೆ ಜಹಾ ಸೆ ಅಚ್ಚ ಹಾಡಿದರು. ತಾಹೇರಾ ಬಾನು ಮನವಿ ಪತ್ರ ಓದಿದರು. ಉಲ್ಫತ್ ವಂದಿಸಿ ಘೋಷಣೆ ಕೂಗಿದರು.

(Visited 5 times, 1 visits today)

Related posts

Leave a Comment