ಸಿಎಎ ಕಾಯ್ದೆಗಳ ಜಾರಿಯನ್ನು ವಿರೋಧಿಸಿ ಪ್ರತಿಭಟನೆ : ರಾಷ್ಟ್ರಧ್ವಜ ಹಿಡಿದು ಡಿಸಿ ಕಚೇರಿ ಸೇರಿದ ಜನಸ್ತೋಮ!

ತುಮಕೂರು : 

      ನಾಲ್ಕು ದಿಕ್ಕಿನಿಂದಲೂ ರಾಷ್ಟ್ರಧ್ವಜ ಹಿಡಿದು ನಾವು ಭಾರತೀಯರೆಂದು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಕೇಂದ್ರ ಸರ್ಕಾರ ಎನ್‍ಆರ್‍ಸಿ ಮತ್ತು ಸಿಎಎ ಕಾಯ್ದೆಗಳ ಜಾರಿಯನ್ನು ವಿರೋಧಿಸಿ ನಡೆದ ಪ್ರತಿಭಟನಾ ಧರಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ದೇಶದ ಐಕ್ಯತೆಯ ಬಿಂಬಿಸುವ ಘೋಷಣೆಗಳು ಮೊಳಗಿದವು.

      ಧರಣಿಯನ್ನುದ್ದೇಶಿಸಿ ಮಾತನಾಡಿದ ಪರಿಸರವಾದಿ ಸಿ.ಯತಿರಾಜ್ ಇಂದು ದೇಶದಲ್ಲಿ ತರುತ್ತಿರುವ ಕಾಯ್ದೆಗಳು ಜನಪರವಾಗಿರದೆ ಜನರನ್ನು ಒಡೆದುಆಳುವ ನೀತಿಗೆ ಪೂರಕವಾಗಿದೆ. ಸರ್ಕಾರದ ಸಚಿವರೊಬ್ಬರು ನೀಡುತ್ತಿರುವ ಹೇಳಿಕೆಗಳು ತದ್ವಿರುದ್ದವಾಗಿದ್ದು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗಳನ್ನು ಗಮನಿಸಿದರೆ ಬಿಜೆಪಿಯ ದ್ವಂದ್ವವು ತಿಳಿಯುತ್ತದೆ ಎಂದು ಆರೋಪಿಸಿದರು.

      ಜನಪರ ಚಿಂತಕ ಕೆ.ದೊರೈರಾಜು ಮಾತನಾಡಿ, ಒಂದು ಕೋಮಿನ ಜನರಷ್ಟೇ ಅಲ್ಲ, ದೇಶದ ಬುಡಕಟ್ಟು, ಆದಿವಾಸಿಗಳು ಬಡವರು ಸಹ ಸಂಕಟಕ್ಕೆ ಒಳಗಾಗುವಂತಹ ಪರಿಸ್ಥಿತಿಯನ್ನು ದೂಡಿರುವುದನ್ನು ಯಾವುದೇ ಕಾರಣಕ್ಕೂ ನಾವು ಒಪ್ಪುವುದಿಲ್ಲ. ಪ್ರಗತಿಪರ ನಾಗರಿಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟವು ಮಾದರಿಯಾಗಿದ್ದು ಸರ್ಕಾರವು ಅನವಶ್ಯಕವಾಗಿ ನಿಷೇಧಾಜ್ಞೆ ಜಾರಿ ಮಾಡಿ ಹೋರಾಟದ ಹಕ್ಕನ್ನು ಕಸಿದುಕೊಳ್ಳುವುದು ಸಂವಿಧಾನ ವಿರೋಧಿಯಾಗಿದೆ. ಜನರು ಆತಂಕದಲ್ಲಿ ಬದುಕುವಂತೆ ಮಾಡಿ ಅಧಿಕಾರ ಭದ್ರಪಡಿಸಿಕೊಳ್ಳುವವರನ್ನು ಜನತೆ ಹಿಮ್ಮೆಟ್ಟಿಸಬೇಕು ಎಂದರು.

      ಸ್ಲಂ ಜನಾಂದೋಲನ ಸಂಚಾಲಕ ಎ. ನರಸಿಂಹಮೂರ್ತಿ ಮಾತನಾಡಿ, ದೇಶದಲ್ಲಿ ಹಲವು ಸಮಸ್ಯೆಗಳು ಜನರನ್ನು ಕಿತ್ತುತಿನ್ನುದ್ದರೂ ಅವುಗಳ ಪರಿಹಾರಕ್ಕೆ ಕೇಂದ್ರ ಸರ್ಕಾರ ಮುಂದಾಗದೆ ಇಂತಹ ಕಾಯ್ದೆಗಳ ಮೂಲಕ ಜನರ ಒಗ್ಗಟ್ಟನ್ನು ಒಡೆಯಲು ಮುಂದಾಗಿರುವುದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.

      ಕರ್ನಾಟಕ ಪ್ರಾಂತ ರೈತ ಸಂಘದ ಸಂಚಾಲಕ ಬಿ.ಉಮೇಶ್ ಮಾತನಾಡಿ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸುಳ್ಳುಗಳ ಭರವಸೆಯನ್ನು ನೀಡಿ ದೇಶದ ಅಭಿವೃದ್ಧಿಯನ್ನು ಹಿಂದಕ್ಕೊಯ್ದು ಸಂವಿಧಾನದ ತಳಹದಿಯ ಸೋದತ್ವಕ್ಕೆ ಧಕ್ಕೆ ತರುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

      ಮಾಜಿ ಶಾಸಕ ಷಫಿ ಅಹಮದ್ ಮಾತನಾಡಿ, ಎಲ್ಲಾ ಜನವಿಭಾಗದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸರ್ಕಾರ ತಪ್ಪು ನೀತಿಯ ವಿರುದ್ಧ ಪ್ರತಿಭಟನೆ ಮಾಡಿರುವುದು ತುಮಕೂರು ದೇಶದಲ್ಲೇ ಮಾದರಿಯಾಗಿದೆ. ಯಾವುದೇ ಕಾರಣಕ್ಕೂ ಶಾಂತಿ ಭಂಗಕ್ಕೆ ಅವಕಾಶ ಕೊಡದಂತೆ ನಡೆದ ಹೋರಾಟವು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ ಎಂದರು.

      ದಲಿತ ಸಂಘಟನೆಯ ಪಿ.ಎನ್. ರಾಮಯ್ಯ, ಮುಸ್ಲೀಮ್ ಸಮುದಾಯ ಮಾತ್ರವಲ್ಲ. ದಲಿತ ಸಮುದಾಯಗಳು ಕಷ್ಟಕ್ಕೆ ಸಿಲುಕಲಿದ್ದು, ಶಾಂತಿ ಸೌಹಾರ್ದತೆಯ ನಾಡಲ್ಲಿ ಅಂಬೇಡ್ಕರ್ ಅವರ ಸಂವಿಧಾನ ಬದ್ಧ ಹಕ್ಕನ್ನು ಕಸಿಯಲು ಬಿಡುವುದಿಲ್ಲ ಎಂದು ಹೇಳಿದರು.
ಮಾಜಿ ಶಾಸಕ ರಫೀಕ್ ಅಹಮದ್ ಮಾತನಾಡಿ, ಇರುವ ಕಾಯ್ದೆಗಳಲ್ಲೇ ನುಸುಳುಕೋರರನ್ನು ತಡೆಯಲು ಅವಕಾಶವಿದ್ದರೂ ನಿರ್ವಹಿಸದೆ ಅಲ್ಪಸಂಖ್ಯಾತರನ್ನು ಧ್ವೇóಷಿಸುವಂತ ಕಾಯ್ದೆ ಜಾರಿಗೆ ತಂದಿರುವುದು ಸರಿಯಲ್ಲ. ಈ ಹೋರಾಟವು ಕೇಂದ್ರ ಸರ್ಕಾರ ಕಾಯ್ದೆಯನ್ನು ವಾಪಸ್ ತೆಗೆದುಕೊಳ್ಳುವವರೆಗೂ ಮುಂದುವರಿಯಬೇಕೆಂದರು.

      ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಮಾತನಾಡಿ, ಕೇಂದ್ರ ಸರ್ಕಾರ ಅಲ್ಪಸಂಖ್ಯಾತರನ್ನು ಅಷ್ಟೇ ಅಲ್ಲ, ನೋಟು ಅಮಾನ್ಯೀಕರಣ, ಅವೈಜ್ಞಾನಿಕ ಜಿಎಸ್‍ಟಿ ಜಾರಿ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಮಾಡುವ ಮೂಲಕ ಜನರಿಗೆ ದ್ರೋಹ ಬಗೆದು ಅವರ ಸಂಘಟಿತರಾಗದಂತೆ ಈ ಕಾಯ್ದೆಯನ್ನು ಜಾರಿ ಮಾಡಿ ತನ್ನ ಗುಪ್ತ ಅಜೆಂಡವನ್ನು ಅನುಷ್ಠಾನಕ್ಕೆ ತಂದಿದೆ. ಆದ್ದರಿಂದ ದುಡಿಯುವ ಜನ ಎಚ್ಚರದಿಂದ ಇರಬೇಕು ಎಂದರು.

      ಕಾಂಗ್ರೆಸ್ ಮುಖಂಡ ನಿರಂಜನ್ ಮಾತನಾಡಿ, ಪಂಕ್ಚರ್ ಹಾಕುವ ಎದೆಗಳಲ್ಲಿ ಇರುವುದು ಪ್ರೀತಿಯೇ ಹೊರತು ಅಕ್ಷರ ಮಾತ್ರವಲ್ಲ ಬಡವರನ್ನು ತುಚ್ಛವಾಗಿ ಕಾಣುವುದನ್ನು ಮತ್ತು ದುರಂಹಕಾರದ ಮಾತುಗಳನ್ನು ಕೇಂದ್ರದಲ್ಲಿರುವವರು ಬದಲಿಸಿಕೊಳ್ಳಬೇಕೆಂದು ಹೇಳಿದರು.

      ಸಾಕೇತ್ ರಾಜನ್ ಮಾತನಾಡಿ, ಮೋದಿ ಶಾರ ಕೈಯಲ್ಲಿ ಜನವಿರೋಧಿ ಕಾಯ್ದೆಯಿದೆ. ನಮ್ಮ ಕೈಗಳಲ್ಲಿ ಅಂಬೇಡ್ಕರ್, ಗಾಂಧಿ, ರಾಷ್ಟ್ರಧ್ವಜ ಇದ್ದು, ಇದನ್ನು ಹಿಮ್ಮೆಟ್ಟಿಸಲು ಸಂವಿಧಾನವಿದೆ ಎಂದರು.

      ಇದೇ ವೇಳೆ ಶಾಸಕ ಗೌರಿಶಂಕರ್, ಮಾಜಿ ಮೇಯರ್ ಅಸ್ಲಾಂ ಪಾಷಾ, ಪಾಲಿಕೆ ಸದಸ್ಯ ನಯಾಜ್ ಅಹಮದ್, ಕಾಂಗ್ರೆಸ್ ಆಧ್ಯಕ್ಷ ರಾಮಕೃಷ್ಣ, ಯುವಮುಖಂಡ ಕುಮಾರ್, ಪಾದ್ರಿ ರೆಫರೆಂಡ್ ಎಲಿಸ್ ದೇವನ್, ಮೌಲ್ವಿ ಉಮರ್ ಅನ್ಸಾರಿ ಮಾತನಾಡಿದರು. ವೇಲ್ಪೇರ್ ಪಾರ್ಟಿಯ ತಾಜುದ್ದೀನ್. ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಕಾರ್ಯಕ್ರಮ ಸಂಯೋಜನೆಯನ್ನು ಜಿಯಾಉರ್ ರೆಹಮಾನ್, ಮುದಸೀರ್, ಶಮೀಲ್, ರಾಯಿಲ್, ಕನ್ನಡ ಸಂಘಟನೆಯ ಅರುಣ್, ಗಣೇಶ್ ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಅಧ್ಯಕ್ಷ ಅತೀಕ್ ಅಹಮದ್ ಕಾರ್ಯದರ್ಶಿ ಅಯಾಜ್ ಉಬೇದುಲ್ಲಾ, ಇನಾಮುಲ್ಲಾ, ಅನೀಫ್ ಉಲ್ಲಾ, ಹಿಂದೂಸ್ತಾನ ಫಯಾಜ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮುಜೀಬ್ ಮಾಡಿದ್ದರು. ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸಿದರು.

(Visited 15 times, 1 visits today)

Related posts