ಸ್ಮಾರ್ಟಸಿಟಿ ಯೋಜನೆಯ ಕಾಮಗಾರಿಗಳಿಗೆ ಸಾರ್ವಜನಿಕರು ಸಹಕರಿಸಿ : ಜಿ.ಬಿ.ಜೋತಿಗಣೇಶ್

ತುಮಕೂರು : 

       ನಗರದ ಅಭಿವೃದ್ದಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಸ್ಮಾರ್ಟಸಿಟಿ ಯೋಜನೆಯ ಎಲ್ಲಾ ಕಾಮಗಾರಿಗಳು 2022ರ ಮಾರ್ಚ್ ಒಳಗೆ ಪೂರ್ಣಗೊಳ್ಳಬೇಕಾಗಿದ್ದು, ತ್ವರಿತವಾಗಿ ಕಾಮಗಾರಿ ನಡೆಯುವ ವೇಳೆ ಸಣ್ಣಪುಟ್ಟ ತೊಂದರೆಗಳಾದರೆ ಸಾರ್ವಜನಿಕರು ಕಾರ್ಮಿಕರೊಂದಿಗೆ ವ್ಯಾಜ್ಯಕ್ಕೆ ನಿಲ್ಲದೆ ಸಹಕರಿಸುವಂತೆ ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.

        ನಗರದ 26ನೇ ವಾರ್ಡಿನ ಸಿಎಂಸಿ ಕಂಪ್ಯೂಟರ್ ಕಲಿಕಾ ಕೇಂದ್ರದಲ್ಲಿ ನಾಗರಿಕರ ಹಿತರಕ್ಷಣಾ ಸಮಿತಿಯ ಸದಸ್ಯರು ಅಹವಾಲು ಸ್ವೀಕರಿಸಿ ಮಾತನಾಡುತಿದ್ದ ಅವರು,ಸ್ಮಾರ್ಟ್‍ಸಿಟಿ ಯೋಜನೆ ನಾನು ಶಾಸಕನಾಗುವ ಮೊದಲೇ ಆರಂಭವಾಗಿದ್ದ ಯೋಜನೆ,ಆದರೆ ಈ ಹಿಂದಿನವರು ಕೇವಲ 7-8 ವಾರ್ಡುಗಳಿಗೆ ಸಿಮೀತ ಮಾಡಿದ್ದ ಅಭಿವೃದ್ದಿ ಕಾಮಗಾರಿಗಳನ್ನು ಕೆಲ ಬದಲಾವಣೆಗಳೊಂದಿಗೆ ಇಡೀ ನಗರಕ್ಕೆ ದೊರೆಯುವಂತೆ ಮಾಡಿದೆ.ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.ಇದರ ಫಲವಾಗಿ ಸರಕಾರಿ ಜೂನಿಯರ್ ಕಾಲೇಜು, ಎಂಪ್ರೆಸ್ ಮಹಿಳಾ ಪದವಿಪೂರ್ವ ಕಾಲೇಜು, ಶಿರಾಗೇಟ್‍ನ ಸರಕಾರಿ ಶಾಲೆ,ಹಳೆಯ ಮಿಡ್ಲಸ್ಕೂಲ್ ಈ ನಾಲ್ಕು ಶಿಕ್ಷಣ ಸಂಸ್ಥೆಗಳಲ್ಲಿ ಕನಿಷ್ಠ ತಲಾ 5 ಸಾವಿರ ಮಕ್ಕಳು ಕಲಿಯಲು ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.

     ನಗರದ ಹೊರವಲಯದ ರಿಂಗ್ ರಸ್ತೆಯಿಂದ ಬಿ.ಹೆಚ್. ರಸ್ತೆಗೆ ಸಂಪರ್ಕ ಕಲ್ಪಿಸುವ ಮಹಾಲಕ್ಷ್ಮಿ ಬಡಾವಣೆಯ 80 ಅಡಿ ರಸ್ತೆ ಮತ್ತು ಎಸ್.ಆರ್.ಎಸ್ ಕಾಲೇಜಿನಿಂದ, ಆಗ್ನಿಶಾಮಕದಳದ ವರೆಗೆ ಗೋಕಲು ಬಡಾವಣೆಯ ರಸ್ತೆಯ ಅಭಿವೃದ್ದಿಗೆ ಅನುದಾನ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಗುಣಮಟ್ಟದ ರಸ್ತೆಗಳು ನಿರ್ಮಾಣವಾಗಲಿವೆ ಎಂದ ಶಾಸಕರು, ಸ್ಮಾರ್ಟ್‍ಸಿಟಿ ಕಾಮಗಾರಿಗಳಲ್ಲಿ ಹುಡುಕಿದರೆ ನೂರೆಂಟು ತಪ್ಪುಗಳು ಕಾಣಬಹುದು,ಆದರೆ ತಪ್ಪೇನೇ ಹುಡುಕುತ್ತಾ ಹೋದರೆ ನಿಗಧಿತ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ.ಆದ್ದರಿಂದ ಗುಣಮಟ್ಟದಲ್ಲಿ ರಾಜಿಯಾಗದೆ ಸಾಧ್ಯವಾದಷ್ಟು ಬೇಗ ಕಾಮಗಾರಿಗಳು ಪೂರ್ಣಗೊಳ್ಳಲು ಸಹಕರಿಸೋಣ ಎಂದು ಸಲಹೆ ನೀಡಿದರು.

     ತುಮಕೂರು ನಗರದ ಗುಬ್ಬಿ ಗೇಟ್‍ನಿಂದ ಡಾ.ಶ್ರೀಶಿವಕುಮಾರಸ್ವಾಮೀಜಿ ವೃತ್ತದವರೆಗೆ ರಸ್ತೆ ವಿಸ್ತರಣೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಹೊರತು ಪಡಿಸಿ, ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಈ ರಸ್ತೆಗಳು ನಿರ್ಮಾಣಗೊಳ್ಳಲಿವೆ.ಅಲ್ಲದೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಒಂದು ಟ್ರಾಮಾಕೇರ್ ಸೆಂಟರ್,ಸ್ನಾತಕೋತ್ತರ ಕೇಂದ್ರ,ಕಿಡ್ನಿ ಸಂಬಂಧಿತ ಚಿಕಿತ್ಸೆ ಕೇಂದ್ರಗಳು ಸದ್ಯದಲ್ಲಿಯೇ ಕಾರ್ಯಾರಂಭ ಮಾಡಲಿವೆ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದರು.

     ಆರಂಭವಾದ ಎರಡು ವರ್ಷದಲ್ಲಿಯೇ ಮುಗಿಯಬೇಕಾಗಿದ್ದ ಸ್ಮಾರ್ಟ್‍ಸಿಟಿ ಕಾಮಗಾರಿಗಳು ತಾಂತ್ರಿಕ ಕಾರಣಗಳಿಂದಾಗಿ ತಡವಾಗಿರುವುದಲ್ಲದೆ,ಶೇ 100ರಷ್ಟು ತಾಂತ್ರಿಕತೆ ಅನುಗುಣವಾಗಿ ನಡೆದಿಲ್ಲ.ಕಿರಿದಾದ ರಸ್ತೆಗಳನ್ನು ವಿಸ್ತರಿಸಲು ಹೋದಾಗ ಅಲ್ಲಿನ ನಿವಾಸಿಗಳಿಗೆ ಆಗುವ ತೊಂದರೆಯನ್ನು ಮನಗಂಡು,ಸಾದ್ಯವಾದಷ್ಟು ಅವರುಗಳ ಮನವೊಲಿಸಿ,ಕೆಲಸ ನಿರ್ವಹಿಸ ಲಾಗಿದೆ.ಕಳಪೆ ಕಾಮಗಾರಿಗಳಾದ ಸಂದರ್ಭದಲ್ಲಿ ತಮ್ಮ ಗಮನಕ್ಕೆ ತಂದರೆ ತಕ್ಷಣವೇ ಸರಿಪಡಿಸುವ ಕೆಲಸ ಮಾಡುವುದಾಗಿ ಶಾಸಕರು ಭರವಸೆ ನೀಡಿದರು.

      ನಾನು ಯಾರನ್ನು ಪ್ರಶಸ್ತಿ ನೀಡಿ ಎಂದು ಕೇಳಿಲ್ಲ.ಅದರ ಅಗತ್ಯವೂ ನನಗಿಲ್ಲ.ಅಮಾನೀಕೆರೆಗೆ ಕುಡಿಯುವುದಕೋಸ್ಕರ ನೀರು ತುಂಬಿಸುವ ಯೋಜನೆ ನನ್ನದೇ,ಇದರಿಂದ ಪ್ರಯೋಜನ ಪಡೆದ ರೈತರು ತಾವಾಗಿಯೇ ನನಗೆ ಅಭಿನಂದಿಸಿದ್ದಾರೆ.ಇದರ ಬಗ್ಗೆ ಯಾರೇ ಮಾತನಾಡಿದರೂ ನಾನು ತಲೆಕೆಡಿಸಿಕೊಳ್ಳಲ್ಲ.ಜನರೇ ತೀರ್ಮಾನ ಮಾಡುತ್ತಾರೆ ಎಂದರು.

      ಕಾರ್ಯಕ್ರಮಕ್ಕೂ ಮೊದಲು ಪ್ರಾಸ್ತಾವಿಕವಾಗಿ ಮಾತನಾಡಿದ ಗೃಹರಕ್ಷಕದಳದ ಮಾಜಿ ಕಮಾಂಡ್‍ಡೆಂಟ್ ರ್ಯಾಕ್‍ಲೈನ್ ರವಿಕುಮಾರ್,ಜಿ.ಬಿ.ಜೋತಿಗಣೇಶ್ ಶಾಸಕರಾದ ನಂತರ ಪ್ರಚಾರಕ್ಕೆ ಒತ್ತು ನೀಡದೆ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗುತ್ತಿದ್ದಾರೆ.ಶಾಸಕರ ಕಣ್ಣುತಪ್ಪಿ ಕೆಲವು ಕಡೆಗಳಲ್ಲಿ ಕಳಪೆ ಕಾಮಗಾರಿಗಳು ನಡೆದಿರುವುದು ಕಂಡುಬಂದಿದೆ. ನಗರಕ್ಕೆ 24ಘಿ7 ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯಲ್ಲಿ ಅಳವಡಿಸಿರುವ ಪೈಫ್ ಮತ್ತು ಇನ್ನಿತರ ಪರಿಕರಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಈ ಬಗ್ಗೆ ಶಾಸಕರು ಗಮನಹರಿಸಬೇಕೆಂದು ಮನವಿ ಮಾಡಿದರು.

      ವೇದಿಕೆಯಲ್ಲಿ 26ನೇ ವಾರ್ಡಿನ ಪಾಲಿಕೆ ಸದಸ್ಯ ಮಲ್ಲಿಕಾರ್ಜುನಯ್ಯ,ವಾರ್ಡಿನ ಹಿರಿಯರಾದ ಪ್ರೊ.ಡಿ.ಚಂದ್ರಪ್ಪ, ಪ್ರೊ.ವೆಂಕಟೇಶ್,ರಾಮುಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 4 times, 1 visits today)

Related posts

Leave a Comment