ಸ್ವಾಮಿನಾಥನ್ ವರದಿ ಜಾರಿಗೆ ಒತ್ತಾಯ : ಪ್ರತಿಭಟನೆ

ತುಮಕೂರು:

      60 ವರ್ಷ ತುಂಬಿದ ರೈತರಿಗೆ ಕನಿಷ್ಠ ಪಿಂಚಣಿ, ಕೃಷಿ ಭೂಮಿಯಲ್ಲಿ ಅಂರ್ತಜಲ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ ತುಮಕೂರು ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

      ರೈತರ ಹಕ್ಕೋತ್ತಾಯ ದಿನದ ಅಂಗವಾಗಿ ಟೌನ್‍ಹಾಲ್‍ನಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿ ಅವರಿಗೆ ಮನವಿ ಸಲ್ಲಿಸ ಲಾಯಿತು.

      ಈ ವೇಳೆ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಸಂಚಾಲಕ ಗಿರೀಶ್, ತೀವ್ರ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಯಲ್ಲಿ ತೆಂಗು ಮತ್ತು ಅಡಿಕೆ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದು, ನಷ್ಟಕ್ಕೆ ಒಳಗಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು, ರೈತರಿಗೆ ವೈಜ್ಞಾನಿಕವಾಗಿ ಫಸಲ್ ಭೀಮಾ ಯೋಜನೆಯನ್ನು ಜಾರಿ ಮಾಡ ಬೇಕೆಂದು ಒತ್ತಾಯಿಸಿದರು.

      ಜಿಲ್ಲೆಯ ನೀರಾವರಿ ಯೋಜನೆಗಳಾದ ಹೇಮಾವತಿ, ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು, ಜಿಲ್ಲೆಗೆ ನೀರಾವರಿಯೋಜನೆ ಮತ್ತು ಸಮರ್ಪಕ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದ್ದು, ರೈತ ಕಾರ್ಮಿಕರಿಗೆ ಕೂಲಿಯನ್ನು ಹೆಚ್ಚಳ ಮಾಡಬೇಕೆಂದು ಹೇಳಿದರು.ಕಾರ್ಮಿಕ ಇಲಾಖೆಯಲ್ಲಿ ರೈತರು ಕಟ್ಟಡ ಕೆಲಸ ಮಾಡುವಂತಿಲ್ಲ ಎಂದು ಅಧಿಕಾರಿಗಳು ರೈತರಿಗೆ ಸೌಲಭ್ಯ ಸಿಗದಂತೆ ಮಾಡಿದ್ದಾರೆ, ವ್ಯವಸಾಯದ ಅವಧಿ ನಂತರ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ರೈತರಿಗೆ ಅಗತ್ಯ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

     ಜಿಲ್ಲೆಯ 11 ತಾಲ್ಲೂಕುಗಳು ಬರಪೀಡಿತವಾಗಿದ್ದು, ಮಧುಗಿರಿ, ಪಾವಗಡ, ಶಿರಾ, ಕೊರಟಗೆರ ತಾಲ್ಲೂಕುಗಳಲ್ಲಿ ಶೇಂಗಾ ಬೆಳೆಗಾರರು ಹೆಚ್ಚಾಗಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಬರ ಪರಿಹಾರ ಅನುದಾನ ಹಾಗೂ ಶೇಂಗಾ ಬೆಳೆಗಾರರಿಗೆ ವಿಶೇಷ ಅನುದಾನವನ್ನು ನೀಡುವ ಮೂಲಕ ರೈತರ ಹಿತವನ್ನು ಕಾಪಾಡಬೇಕಿದೆ, ಗ್ರಾಮೀಣಾ ಉದ್ಯೋಗಾ ಖಾತ್ರಿ ಯೋಜನೆಯಡಿ ದಿನಕ್ಕೆ 600 ರೂ ಕೂಲಿ ನೀಡಬೇಕು ಎಂದು ಆಗ್ರಹಿಸಿದರು.

      ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕರಾದ ಅಶ್ವತ್ಥನಾರಾಯಣ, ಶಶಿ ಕಾಂತ್, ದೊಡ್ಡತಿಮ್ಮಯ್ಯ, ಶಿವಾನಂದ್, ಗಂಗಣ್ಣ, ನಾಗರತ್ನಮ್ಮ, ಚಂದ್ರಣ್ಣ, ಮಂಜುನಾಥ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

(Visited 6 times, 1 visits today)

Related posts

Leave a Comment