ಹುಳಿಯಾರು ಸರ್ಕಾರಿ ಆಸ್ಪತ್ರೆ ಈಗಲಾದರೂ ಮೇಲ್ದರ್ಜೆಗೇರುವುದೇ?

ಹುಳಿಯಾರು:

       ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳ ಗಡಿ ಗ್ರಾಮಗಳ ಲಕ್ಷಾಂತರ ಜನ ಸಾಮಾನ್ಯರಿಗೆ ಸರಿಸುಮಾರು ಐದು ದಶಕಗಳಿಂದ ಆರೋಗ್ಯ ಸೇವೆ ಒದಗಿಸುತ್ತಿರುವ ಹುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರುವುದು ಯಾವಾಗ ಎನ್ನುವ ಪ್ರಶ್ನೆ ಕಳೆದ ದಶಕಗಳಿಂದಲೂ ಕೇವಲ ಪ್ರಶ್ನೆಯಾಗಿಯೆ ಉಳಿದಿದೆ. ಈಗ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿಯವರು ಇತ್ತ ಗಮನ ಹರಿಸಿರುವುದು ಸಾರ್ವಜನಿಕ ವಲಯದಲ್ಲಿ ಆಶಾಭಾವನೆ ಚಿಗುರೊಡೆದಿದೆ.

      ಹೌದು! ಹುಳಿಯಾರು ಪಟ್ಟಣ ರಾಜ್ಯದಲಿಯೇ ಅತೀ ವೇಗವಾಗಿ ಬೆಳೆಯುತ್ತಿರುವ ಹೋಬಳಿ ಕೇಂದ್ರಗಳಲ್ಲಿ ಒಂದಾಗಿದ್ದು ಪ್ರಮುಖ ವ್ಯಾಪಾರ ಕೇಂದ್ರವಾಗಿ ಹೊರಹೊಮ್ಮಿ ಪ್ರದಿದಿನ ಸಾವಿರಾರು ಜನರು ಬಂದು ಹೋಗುವ ಸ್ಥಳವಾಗಿದೆ. ಹಾಗಾಗಿ ಸಹಜವಾಗಿಯೇ ಇಲ್ಲಿನ ಆಸ್ಪತ್ರೆಗೆ ಹಿಂದೆಂದಿಗಿಂತಲೂ ಕಳೆದ ಐದಾರು ವರ್ಷಗಳಿಂದ ಹೋರ ರೋಗಿಗಳು ದಾಖಲಾಗುತ್ತಿರುವ ಕಾರಣ ಇಲ್ಲಿನ ವೈದ್ಯಕೀಯ ಸಿಬ್ಬಂದ್ದಿಗಳ ಮೇಲೆ ಬೀಳುತ್ತಿರುವ ಒತ್ತಡವನ್ನು ಕಂಡ ಜನತೆ ಮೇಲ್ದರ್ಜೆಗೇರುವ ಜರುರತ್ತಿನ ಬಗ್ಗೆ ನಿರೀಯಿಟ್ಟುಕೊಂಡಿದ್ದಾರೆ.

       ಆದರೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೋ ಅಥಾವ ಜನಪ್ರತಿನಿಧಿಗಳ ದಿವ್ಯ ಮೌನವೋ ಏನೋ ಇಲ್ಲಿನ ಆಸ್ಪತ್ರೆ ಮೇಲ್ದರ್ಜೆಗೇರಿಸುವ ಬೇಡಿಕೆ ಇನ್ನೂ ಈಡೇರಿಲ್ಲ. ಹೋಗಲಿ ಇಲ್ಲಿನ ರೋಗಿಗಳ ದಾಖಲಿಗೆ ಅಗತ್ಯವಾದ ಸಮರ್ಪಕ ಸಿಬ್ಬಂಧಿ, ಔಷಧಿ ಸೇರಿದಂತೆ ಕನಿಷ್ಠ ಮೂಲಭೂತ ಸೌಲಭ್ಯವೂ ಸಹ ಇಲ್ಲದಾಗಿದ್ದು ಇಲ್ಲೊಂದು ಸರ್ಕಾರಿ ಆಸ್ಪತ್ರೆ ಇದೆಯೆಂಬುದೇ ಜನರು ಮರೆಯುವಂತ್ತಾಗಿದೆ. ಹಾಗಾಗಿಯೇ ಆಸ್ಪತ್ರೆ ಮೇಲ್ದರ್ಜೆಗೇರಿಸುವಂತೆ ಅನೇಕ ಧರಣಿ, ಪ್ರತಿಭಟನೆಗಳು ಸಹ ನಡೆದಿದೆ. ಆದರೂ ಯಾರೊಬ್ಬರೂ ಸ್ಪಂಧಿಸದೆ ಸಾರ್ವಜನಿಕರದ್ದು ಅರಣ್ಯರೋಧನವಾಗಿದೆ.

       ಖಾಯಂ ವೈದ್ಯರಿಲ್ಲ: ಇಲ್ಲಿ ಎರಡು ರಾಷ್ಟೀಯ ಹೆದ್ದಾರಿ ಮೂರು ಜಿಲ್ಲೆಗಳ ಆಸ್ಪತ್ರೆಗಳಿದ್ದರೂ ಸಹ ಅಲ್ಲಿನ ವೈದ್ಯರು ಕೇಂದ್ರ ಸ್ಥಾನದಲ್ಲಿರದ ಕಾರಣ ರೋಗಿಗಳ ದಂಡು ಹುಳಿಯಾರು ಆಸ್ಪತ್ರೆ ಕಡೆ ಸಹಜವಾಗಿ ಮುಖಮಾಡುತ್ತಾರೆ. ಇಲ್ಲಿ ಹೆಸರಿಗೆ ವೈದ್ಯರುಗಳಿದ್ದರೂ ಅವರು ಗುತ್ತಿಗೆ ಆಧಾರದ ವೈದ್ಯರಾಗಿದ್ದಾರೆ. ಅಲ್ಲದೆ ರಾತ್ರಿ ವೇಳೆಯಲ್ಲಿ ಇವರು ಲಭ್ಯವಿರುವುದರಿಲ್ಲ. ಪರಿಣಾಮ ಹೊರರೋಗಿಗಳಿಗೆ ಚಿಕಿತ್ಸೆ, ಪ್ರಸೂತಿ, ಶವಪರೀಕ್ಷೆ, ಅಪಘಾತ, ವಿಷ ಸೇವನೆಯ ವ್ಯಕ್ತಿಗಳಿಗೆ ತುರ್ತು ಚಿಕಿತ್ಸೆ ಇಲ್ಲಿ ಅಸಮರ್ಪಕವಾಗಿದೆ.

ಸಿಬ್ಬಂದಿಯ ಸಮಸ್ಯೆ:

       ಒಬ್ಬರು ಎಂಬಿಬಿಎಸ್ ವೈದ್ಯ ಸೇರಿದಂತೆ ಲ್ಯಾಬ್ ಟೆಕ್ನಿಷಿಯನ್, ಸ್ಟಾಪ್ ನರ್ಸ್‍ಗಳು ಹಾಗೂ ಡಿ ಗ್ರೂಫ್ ನೌಕರರು ಸೇರಿದಂತೆ ಸಿಬ್ಬಂಧಿಯ ಕೊರತೆಯ ಸಮಸ್ಯೆ ಎದ್ದು ಕಾಣುತ್ತಿದೆ. ಹಾಗಾಗಿ ಕಫಾ, ಪರೀಕ್ಷೆ, ಮಲೇರಿಯ, ಟೈಫಾಯಿಡ್ ಸೇರಿದಂತೆ ತುರ್ತು ಅಗತ್ಯ ಪರೀಕ್ಷಾ ಸೌಲಭ್ಯ ಇಲ್ಲದಾಗಿದೆ. ಸಿಬ್ಬಂದಿಯ ಕೊರತೆಯಿಂದ ಹೆರಿಗೆಗೆ ಬರುವವರೇ ಇಲ್ಲದಾಗಿದ್ದಾರೆ. ಇನ್ನೂ ಔಷಧಿಗಾಗಿ ವಾರ್ಷಿಕ ಬರುವ ಅನುಧಾನ ತೀರಾ ಕಡಿಮೆಯಿದ್ದು ನಿತ್ಯ ಬರುವ ಸಾವಿರಾರು ಮಂದಿ ರೋಗಿಗಳಿಗೆ ಏನಕ್ಕೂ ಸಾಲದಾಗುತ್ತಿದೆ.

ಗಡಿ ಭಾಗಕ್ಕೆ ಆಧ್ಯತೆ ಬೇಕು:

      ಇಲ್ಲಿನ ಆಸ್ಪತ್ರೆ ಕೇವಲ ಹೋಬಳಿಗೆ ಮಾತ್ರ ಸೀಮಿತವಾಗಿರದೆ ಅಕ್ಕಪಕ್ಕದ 3 ಜಿಲ್ಲೆಗಳ ಗಡಿ ಗ್ರಾಮಗಳ ಆರೋಗ್ಯ ಚಿಕಿತ್ಸೆಗೆ ಆಸರೆಯಾಗಿದೆ. ಅಲ್ಲದೆ ಸುತ್ತ ಮುತ್ತಲ ಯಾವ ಆಸ್ಪತ್ರೆ ಸಿಗದ ಎಕ್ಸ್‍ರೇ, ಕಫಾ ಪರೀಕ್ಷೆ ಹಾಗೂ ಐಸಿಟಿಸಿ ಪರೀಕ್ಷೆ ಸೌಲಭ್ಯ ಇಲ್ಲಿ ಸಿಗುವುದರಿಂದ ಪ್ರತಿದಿನ ನೂರಾರು ರೋಗಿಗಳು ಚಿಕಿತ್ಸೆಗಾಗಿ ಇಲ್ಲಿಗೆ ಆಗಮಿಸುತ್ತಿದ್ದು ಇನ್ನಾದರೂ ಸರ್ಕಾರ ಗಡಿ ಭಾಗದಲ್ಲಿರುವ ಈ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು ಎನ್ನುವುದು ದಶಕಗಳ ಒತ್ತಾಯವಾಗಿದೆ.

ಈಗ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಹುಳಿಯಾರು ಆಸ್ಪತ್ರೆಯ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಹುಳಿಯಾರು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಜೆ.ಸಿ.ಮಾಧುಸ್ವಾಮಿ ಅವರು ಕೈ ಹಾಕಿದ ಕೆಲಸ ಈಡೇರುವವರೆವಿಗೂ ಪಟ್ಟು ಬಿಡದೆ ಮಾಡಿಸುವ ಛಲದಂಕಮಲ್ಲ. ಅಲ್ಲದೆ ತಾಲೂಕಿಗೆ ಹೇಮೆ ಹರಿಸಿ ಚುನಾವಣೆಯಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡ ವಚನಪಾಲಕ. ಹಾಗಾಗಿ ಈ ಬಾರಿ ಹುಳಿಯಾರು ಆಸ್ಪತ್ರೆ ಮೇಲ್ದರ್ಜೆಗೇರುವುದು ನಿಶ್ಚಿತ ಎಂಬುದು ಸಾರ್ವಜನಿಕರ ನಂಬಿಕೆಯಾಗಿದೆ.

 

(Visited 4 times, 1 visits today)

Related posts

Leave a Comment