ಮಧುಗಿರಿ:-

      ಪಟ್ಟಣದ ಹೃದಯ ಭಾಗದಲ್ಲಿ ಹರಿಹರ ಸಂಗಮದಂತೆ ಮಧುಗಿರಿಯ ಎರಡು ಕಣ್ಣುಗಳಂತೆ ಐತಿಹಾಸಿಕ ಶ್ರೀ ಮಲ್ಲೇಶ್ವರ ಸ್ವಾಮಿ ಮತ್ತು ಶ್ರೀ ವೆಂಕಟರಮಣ ಸ್ವಾಮಿ ದೇವಾಲಯಗಳಿವೆ. ಮಹಾಶಿವರಾತ್ರಿ ಹಬ್ಬದ ಜಾಗರಣೆ ಪ್ರಯುಕ್ತ ಶ್ರೀ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಾಂಸ್ಕøತಿಕ ಭಜನಾ ಕಾರ್ಯಕ್ರಮಗಳು, ರುದ್ರಾಭಿಷೇಕ ಮತ್ತು ವಿಶೇಷ ಪೂಜೆಗಳನ್ನು ಆಯೋಜಿಸಲಾಗಿದೆ. ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಧ್ಯೆರಾತ್ರಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

     ದೇವಸ್ಥಾನದ ಇತಿಹಾಸ:

      ಜಗತ್ತಿನ ಜೀವನದಲ್ಲಿ ಜನತೆಯ ನಂಬುಗೆಯ ಶಕ್ತಿಯಿಂದ ಭಕ್ತಿಪೂರ್ಣದಿಂದ ವಿವಿಧ ರೂಪದಿಂದ ಪರಮಾತ್ಮನು ತನ್ನ ದರ್ಶನವನ್ನು ಅನೇಕ ಕಡೆ ಪ್ರದರ್ಶನ ಮಾಡಿ ತೋರಿಸಿರುವಂತೆ ವನದೇವತೆಯ ಮಡಿಲೆನಿಸಿದ ಈ ಮಧುಗಿರಿ ಎಂಬ ಸುಗ್ರಾಮದಲ್ಲಿ ಉದ್ಭವಿಸಿ ಜನತೆಯನ್ನು ಮುಗ್ಧಗೊಳಿಸಿರುತ್ತಾನೆ. ಈ ಮೂರ್ತಿಯು ಪ್ರಪಂಚಕ್ಕೆ ಸುಪ್ರಸಿದ್ದವಾದ ಕಾಶೀಲಿಂಗ ಮೂರ್ತಿಯನ್ನು ಹೋಲುತ್ತದೆ ಇಂತಹ ದಿವ್ಯ ಸುಂದರ ಉದ್ಬವ ಮೂರ್ತಿಯ ಸೃಷ್ಠಿಯನ್ನು ಜನವಾಖ್ಯಗಳಿಂದ ಆರಿವಾಗುತ್ತದೆ.

      ಪ್ರಾರಂಭದಲ್ಲಿ ಈ ದೇವಸ್ಥಾನವು ಮೂರು ನಾಲ್ಕು ಬಂಡೆಗಳಿಂದ ನಿರ್ಮಿತವಾಗಿದ್ದು ಅಲ್ಲಿ ಈ ಸ್ವಾಮಿಯು ಉದ್ಭವಾವಿದ್ದನು. ತನ್ನ ಭಕ್ತವರ್ಯನೆಸಿಸಿದ ಮಲ್ಲಶೆಟ್ಟಿ ಎಂಬ ವರ್ತಕನು ರತ್ನಪಡಿ ವ್ಯಾಪಾರಾರ್ಥವಾಗಿ ಈ ಸ್ಥಳದಲ್ಲಿ ತಂಗಿದ್ದಾಗ ನನಗೆ ಒಳ್ಳೆಯ ವ್ಯಾಪಾರವಾಗಿ ಲಾಭಗಳಿಸಿದರೆ ನಿನಗೆ ಶಿವಾಲಯವನ್ನು ಈ ಸ್ಥಳದಲ್ಲಿ ಕಟ್ಟಿಸುವೆನೆಂದು ಮನದಲ್ಲಿ ಅಂದುಕೊಂಡು ನಿದ್ರೆಯಲ್ಲಿರುವಾಗ ಪರಮೇಶ್ವರನು ಸ್ವಪ್ಮದಲ್ಲಿ ದರ್ಶನಕೊಟ್ಟು ‘ಅಯ್ಯಾ ವರ್ತಕನೆ ನೀನು ಈಗ ನಾನು ಉದ್ಭವಿಸಿರುವ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಿ ನನಗೆ ಪೂಜಾದಿಗಳಿಗೆ ಅವಕಾಶಮಾಡಿದರೆ ನಾನು ಇಲ್ಲಿ ಮಲ್ಲೇಶ್ವರನಾಗಿ ನಿತ್ಯದರ್ಶನ ಕೊಡುವೆನೆಂದು ಹೇಳಿದಂತಾಯಿತು. ಬಳಿಕ ಶಿವನಿಚ್ಛೆಯಂತೆ ಮಲ್ಲಶೆಟ್ಟಿಗೆ ವ್ಯಾಪಾರವು ಸುಗಮವಾಗಿ ನಡೆದು ಹಿಂದಿರುಗುವಾಗ ಆತನು ಶ್ರದ್ಧಾ ಭಕ್ತಿಗಳಿಂದ ಅಲ್ಲಿನ ಪ್ರಮುಖರನ್ನು ಕರೆಸಿದನು. ಆಗ ಪ್ರಮುಕರೆಲ್ಲರು ವರ್ತಕನ ಅಭೀಷ್ಠಕ್ಕೆ ಅನುಗುಣವಾಗಿ ನಿರ್ಮಿಸಲು ಸಂತೋಷದಿಂದ ಸಹಕಾರ ನೀಡಿ ಗರ್ಭಗುಡಿಯನ್ನು ಕಟ್ಟಿಸಿದರು. ಈ ಉದ್ಭವ ಮೂರ್ತಿಯ ಕೃಪೆಯಿಂದ ಗ್ರಾಮಸ್ಥರೆಲ್ಲಾ ಸೇವೆ, ಪೂಜೆಪುನಸ್ಕಾರಗಳನ್ನು ದಿನವಹಿ ಮಾಡಿಸುತ್ತಾ ಬಂದರು. ಆಮೇಲೆ ದೇವರ ದಯೆಯಿಂದ ಜನರ ಜೀವನದಲ್ಲಿ ಸಮೃದ್ಧಿ ಕಾಣಿಸಿತು.

      ಮಧುಗಿರಿ ನಾಡಪ್ರಭುಗಳಾಗಿದ್ದ ಮುಮ್ಮಡಿ ಚಿಕ್ಕಪ್ಪಗೌಡರು ಈಗಿರುವ ರೀತಿಯಲ್ಲಿ ದೇವಾಲಯದ ಹಜಾರವನ್ನು ಕಟ್ಟಿಸಿದರು. ಅಂಗಳದ ಬಲಭಾಗಕ್ಕೆ ಉಯ್ಯಾಲೋತ್ಸವ ಮಂಟಪ ಎಂದು ಕರೆಯುವ, ನಯನಮನೋಹರವಾದ ಆಕರ್ಷಣೀಯವಾದ ಶಿಲ್ಪಕಲೆಯುಳ್ಳ ಪೀಠ, ವಿವಿಧೋದ್ದೇಶಗಳಿಗಾಗಿ ನಿರ್ಮಿಸಿರುವುದು ಅಂದಿನವರ ದೂರದೃಷ್ಟಿಯನ್ನು ತೋರಿಸುತ್ತದೆ. ಇದು ಒಂದು ಸಣ್ಣ ರಂಗಮಂಟಪದಂತಿದೆ. ಹಿಂದೆ ರಾಜರುಗಳು ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭಗಳಲ್ಲಿ ಈ ಸ್ಥಳದಲ್ಲಿ ಕುಳಿತು ಜನರೊಡನೆ ಸಂಭಾಷಿಸುತ್ತಿದ್ದರು. ಹರಿಕಥೆ ವಿಚಾರಘೋಷ್ಠಿ, ಪುರಾಣ ಬಗ್ಗೆ ವ್ಯಾಖ್ಯಾನ, ಸಂಗೀತ ಕಾರ್ಯಕ್ರಮಗಳು ಮುಂತಾದವುಗಳಿಗೆ ಉಪಯುಕ್ತವಾದ ವೇದಿಕೆಯಾಗಿದೆ. ಇದರ ಎದುರಗಡೆ ಒಂದು ದೀಪಸ್ತಂಭವಿದೆ.

      ಈ ಅಂಗಳದಲ್ಲಿ ನಿರ್ಮಿತವಾಗಿರುವ ದೊಡ್ಡ ದೊಡ್ಡ ಕಂಭಗಳೂ, ಬಸವೇಶ್ವರ, ಗಣಪತಿ, ದ್ವಾರಪಾಲಕರ ವಿಗ್ರಹಗಳನ್ನು ಮುಮ್ಮಡಿಪಟ್ಟಣದಿಂದ ತರಿಸಿ ಸ್ಥಾಪಿಸಿದರು, ಅದೂ ಅಲ್ಲದೆ ಇತ್ತೀಚೆಗೆ ವೀರಭದ್ರಸ್ವಾಮಿ, ಶನಿದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದಾರೆ.

      ಮುಮ್ಮಡಿ ಚಿಕ್ಕಪ್ಪಗೌಡರ ಹೆಂಡತಿ ಬಹು ಧರ್ಮಿಷ್ಠಗಳಾಗಿದ್ದು ಶ್ರೀ ಮಲ್ಲೇಶ್ವರನ ಪಕ್ಕದಲ್ಲಿ ಪಾರ್ವತಿದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿದರು. ಇವರ ಹೆಸರು ಪಾರ್ವತಿದೇವಿಯವರ ವಿಗ್ರಹದ ಪೀಠದಲ್ಲಿ ಈ ರೀತಿಯಾಗಿ ಉಲ್ಲೇಖವಾಗಿದೆ. ಒಂದು ಪಕ್ಕಕ್ಕೆ ಗೌರಮ್ಮನವರು ಅದರ ಎದುರಿಗೆ ಅಜಂಮ್ಮನವರು ಬಹುಷಃ ಅಂಜಮ್ಮ ಎಂಬುದಾಗಿರಬಹುದು ಎಂಬುದು ಎಲ್ಲರ ಅಭಿಮತ.

      ಇತ್ತೀಚೆಗೆ ಭಕ್ತಾಗಳ ನೆರವಿನಿಂದ ಅನೇಕ ವಿಗ್ರಹಗಳನ್ನು ನಿರ್ಮಾಣ ಮಾಡಿದ್ದಾರೆ. ಅವುಗಳಲ್ಲಿ ಮುಖ್ಯವಾದುವು 1. ಸಿದ್ದಿಬುದ್ಧಿ ಸಮೇತನಾದ ಗಣಪತಿ, 2. ಶ್ರೀಲಕ್ಷ್ಮೀದೇವಿ, 3.ಭೀಕ್ಷಾಮೂರ್ತಿಯಾದ ಶಿವ, 4. ಪಾರ್ವತಿ ಕಲ್ಯಾಣದ ವಿಗ್ರಹಗಳು, 5. ಕೈಲಾಸದ ಶಂಕರಮೂರ್ತಿ, 6. ಕಿರಾತಾರ್ಜುನೀಯ, 7.ತಾಂಡವ ನೃತ್ಯದ ಮೂರ್ತಿ, 8.ಸರಸ್ವತಿ, 9.ವಲ್ಲೀದೇವ ಸೇನಾಸಮೇತ ಶ್ರೀ ಸುಬ್ರಹ್ಮಣೇಶ್ವರಸ್ವಾಮಿ ಇನ್ನೂ ಅನೇಕ ವಿಗ್ರಹಗಳನ್ನು ಸ್ಥಾಪಿಸಿದ್ದಾರೆ.

      ದೇವಾಲಯದ ಪ್ರಾಕಾರದಲ್ಲಿ ಪ್ರದಕ್ಷಿಣೆಗೆ ಹೊರಟರೆ ಅನೇಕ ಶಿಲಾ ವಿಗ್ರಹಗಳು ಕಾಣುವುವು. ಇವೆಲ್ಲ ಶಿವನ ಪರಿವಾರ ಮತ್ತು ಶಿವಪಾರ್ವತಿಯರ ಚಿತ್ರಗಳೇ ಆಗಿವೆ. ಶ್ರೀ ಮಲ್ಲೇಶನ ಎಡಭಾಗಕ್ಕೆ ಶ್ರೀ ಕಾಶಿವಿಶ್ವನಾಥನ ವಿಗ್ರಹವೂ ಇದೆ. ಉತ್ತರಾಯಣ ಪುಣ್ಯಕಾಲದಲ್ಲಿ ಶಿವಪಾರ್ವತಿಯರ ದರ್ಶನಮಾಡಿ ಉತ್ತರಬಾಗಿಲಿನಿಂದ ಹೊರಬಂದರೆ ಸ್ವರ್ಗ ಪ್ರಾಪ್ತಿಯಾಗುವುದೆಂದೇ ಜನರ ನಂಬಿಕೆಯಾಗಿದೆ.

      ಈ ದೇವಾಲಯವು ದ್ರಾವಿಡಶೈಲಿಯನ್ನು ಹೋಲುತ್ತದೆ. ಈ ದೇವಾಲಯದ ಎದುರಿಗೆ ಸುಮಾರು 20 ಅಡಿ ಸ್ತಂಭವಿದೆ. ಕಾರ್ತೀಕಮಾಸದ ಪೂರ್ಣಿಮಾ ದಿವಸ ಸ್ತಂಭದ ಮೇಲೆ ದೊಡ್ಡದಾಗಿ ದೀಪವನ್ನು ಹಚ್ಚುತ್ತಾರೆ, (ಈ ದೇವಸ್ಥಾನವನ್ನು 1778 ರಲಲಿ ಸಾಗ್ಗೆರೆ ನಾರಾಯಣವಾಸಿ ಯವರಿಂದಲೂ 1795 ರಲ್ಲಿ ಸರ್ಕಾರದಿಂದಲೂ ರಿಪೇರಿಯಾದಂತೆ ತಿಳಿಸುಬರುತ್ತದೆ) ಪ್ರತಿ ಚೈತ್ರ ಮಾಸದಲ್ಲಿ ಬ್ರಹ್ಮರಥೋತ್ಸವವು ನಡೆಯುತ್ತದೆ. ಈ ಸ್ಥಳವನ್ನು ನೋಡಿ ಜನ ಕೃತಕೃತರಾಗುವ ಸ್ಥಳವಾಗಿದೆ. ಈ ದೇವಾಲಯದ ಪಕ್ಕದಲ್ಲಿರುವ ಶ್ರೀ ವೆಂಕಟರಮಣಸ್ವಾಮಿ ದೇವಾಲಯವು ವಿಜೃಂಭಿಸುತ್ತಿದೆ. ಈ ಎರಡು ದೇವಾಲಯದ ಶಿಖರಗಳು ಮಧುಗಿರಿಯ ಎರಡು ನೇತ್ರಗಳಂತೆ ಎದ್ದುಕಾಣುತ್ತಿರುವುದು ಮಧುಗಿರಿ ಮಹಾಜನರ ಪುಣ್ಯ.

      ವಿಶೇಷ ಸಾಂಸ್ಕøತಿಕ ಕಾರ್ಯಕ್ರಮಗಳು: ಮಾ.4 ರ ಮಧ್ಯಾಹ್ನ 3 ರಿಂದ 4 ರವರೆಗೂ ಲಲಿತ ಸಹಸ್ರನಾಮಗಳು, ದೇವರ ಭಜನಾ ಕಾರ್ಯಕ್ರಮ, ಭಕ್ತಿಗೀತೆಗಳ ಭಜನೆ, ಭರತನಾಟ್ಯ, ಸಂಗೀತ ಕಾರ್ಯಕ್ರಮಗಳು ನಡೆಯಲಿದ್ದು, ರಾತ್ರಿ 12 ರಿಂದ ಬೆಂಗಳೂರಿನ ಪ್ರಶಾಂತ ಭಾರ್ಗವಚಾರ್ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಭಕ್ತರು ಸಕಾಲಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಭಕ್ತ ಮಂಡಳಿ ಕೋರಿದ್ದಾರೆ.

(Visited 251 times, 1 visits today)