ಬೆಂಗಳೂರು:

       ನಕಲಿ ಉಕ್ಕು ಮತ್ತು ಕಬ್ಬಿಣದ ಕಂಪನಿಯ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ 200 ಕೋಟಿ ರೂಪಾಯಿ ಜಿಎಸ್‌ಟಿ ಕ್ಲೇಮ್‌ ಮಾಡಿಕೊಂಡ ಆರೋಪದ ಮೇಲೆ ಕೇಂದ್ರ ತೆರಿಗೆ ಆಯುಕ್ತಾಲಯದ ಅಧಿಕಾರಿಗಳು ರಾಜ್ಯದಲ್ಲಿ ಮೂವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ. ಇದು ದೇಶದಲ್ಲೇ ಜಿಎಸ್‌ಟಿ ವಂಚನೆಯ ಅತಿದೊಡ್ಡ ಪ್ರಕರಣಗಳಲ್ಲಿ ಒಂದಾಗಿದೆ.

      ಸುಹೇಲ್‌, ಬಾಷಾ ಮತ್ತು ಹಫೀಸ್‌ ಬಂಧಿತ ಆರೋಪಿಗಳು. ಇವರು ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಜಿಎಸ್‌ಟಿ ಕ್ಲೇಮ್‌ ಮಾಡುತ್ತಿದ್ದ ಬಗ್ಗೆ ಮಾಹಿತಿ ದೊರಕಿದ್ದರಿಂದ ದಾಳಿ ನಡೆಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ತೆರಿಗೆ ಆಯುಕ್ತಾಲಯದ ಬೆಂಗಳೂರು ವಲಯದ ಆಯುಕ್ತ ಜಿ.ನಾರಾಯಣಸ್ವಾಮಿ ತಿಳಿಸಿದ್ದಾರೆ.

      ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.12ರಂದು ಬೆಂಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ ಸೇರಿದಂತೆ 25 ಕಡೆ ಶೋಧ ಕಾರ್ಯ ನಡೆಸಲಾಯಿತು. ಆರೋಪಿಗಳು ಕಬ್ಬಿಣ ಮತ್ತು ಉಕ್ಕು ತ್ಯಾಜ್ಯಗಳನ್ನು ಕಾನೂನುಬಾಹಿರವಾಗಿ ಕೆಲವು ಉಕ್ಕು ಮತ್ತು ಕಬ್ಬಿಣ ಕಂಪನಿಗಳಿಗೆ ಸರಬರಾಜು ಮಾಡುತ್ತಿದ್ದರು. ನಕಲಿ ಕಂಪನಿಯ ಹೆಸರಲ್ಲಿ ನಕಲಿ ಬಿಲ್‌ ಸೃಷ್ಟಿಸಿ ಸುಮಾರು 1,200 ಕೋಟಿ ರು.ನಷ್ಟುಅಕ್ರಮ ಎಸಗಿರುವುದು ತನಿಖೆ ವೇಳೆ ಗೊತ್ತಾಗಿದೆ. ವಂಚನೆ ಮೂಲಕ 200 ಕೋಟಿ ರು.ನಷ್ಟುಜಿಎಸ್‌ಟಿ ಕ್ಲೇಮ್‌ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

      6 ಕಂಪನಿಯ ಹೆಸರಲ್ಲಿ ಜಿಎಸ್‌ಟಿ ನೋಂದಣಿ ಮಾಡಿಕೊಂಡಿದ್ದರು. ಕಂಪನಿಗಳ ನಕಲಿ ವಿಳಾಸಗಳನ್ನು ಸೃಷ್ಟಿಸಿರುವುದು ಗೊತ್ತಾಗಿದೆ. ಪ್ರಕರಣದಲ್ಲಿ ಇನ್ನೂ ಹಲವು ವ್ಯಕ್ತಿಗಳು ಭಾಗಿಯಾಗಿರುವ ಶಂಕೆ ಇದ್ದು, ತನಿಖೆ ಮುಂದುವರಿಸಲಾಗಿದೆ. ಶೀಘ್ರದಲ್ಲಿಯೇ ಭಾಗಿಯಾಗಿರುವವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

(Visited 13 times, 1 visits today)