25 ಅರಣ್ಯ ಸಿಬ್ಬಂದಿಗಳಿಂದ ಕಾರ್ಯಾಚರಣೆ : ಚಿರತೆ ಸೆರೆ

ತುಮಕೂರು:

      ತಾಲ್ಲೂಕಿನ ಕಸಬಾ ಹೋಬಳಿ ಆಲನೂರು ಗ್ರಾಮ ಆಚಾರಪಾಳ್ಯ ರಸ್ತೆ, ಹೇಮಾವತಿ ಚಾನಲ್ ಟನಲ್‍ನಲ್ಲಿ ಅಡಗಿದ್ದ ಚಿರತೆಯನ್ನು ಇಂದು ಅರಣ್ಯ ಇಲಾಖೆಯ 25ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ತಿಳಿಸಿದ್ದಾರೆ.

       ಡಾ: ಸನ್ನತ್ ಅವರ ಮುಂದಾಳತ್ವದಲ್ಲಿ ಅರಿವಳಿಕೆ ಚುಚ್ಚುಮದ್ದು ನೀಡಿ ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ. ಸೆರೆ ಹಿಡಿದ ಚಿರತೆಯು ನರಭಕ್ಷಕ ಚಿರತೆಯಾಗಿರುವ ಸಾಧ್ಯತೆ ಹೆಚ್ಚಾಗಿದೆ. ಚಿರತೆಯನ್ನು ಸೆರೆ ಹಿಡಿದ ಸ್ಥಳವು ಮಾನವ ಹತ್ಯೆ ಸಂಭವಿಸಿದ ಸ್ಥಳದಿಂದ ಸುಮಾರು 10 ರಿಂದ 12 ಕಿ.ಮೀ. ದೂರದಲ್ಲಿದ್ದು, ಸಾರ್ವಜನಿಕ ಮಾಹಿತಿ ಹಾಗೂ ಕ್ಯಾಮೆರಾ ಟ್ರಾಪ್‍ಗಳಲ್ಲಿ ಸೆರೆಯಾಗಿರುವ ಛಾಯಾಚಿತ್ರಗಳ ಆಧಾರದ ಮೇಲೆ ಈ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಚಿರತೆಗಳು ಇರುವುದು ತಿಳಿದು ಬಂದಿದೆ.

      ಶಂಕಿತ ನರಭಕ್ಷಕ ಚಿರತೆಗಳನ್ನು ತ್ವರಿತವಾಗಿ ಸೆರೆ ಹಿಡಿಯುವ ಕಾರ್ಯಾಚರಣೆ ಮುಂದುವರೆಸಲಾಗಿದೆ. ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಚಿರತೆ ದಾಳಿ ಬಾಧಿತ ಪ್ರದೇಶಗಳ ಸಾರ್ವಜನಿಕರು ಅತ್ಯಂತ ಜಾಗರೂಕರಾಗಿರಬೇಕು. ತಮ್ಮ ಸಾಕು ಪ್ರಾಣಿ/ಜಾನುವಾರುಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿಕೊಳ್ಳಬೇಕು.

      ವಿಶೇಷವಾಗಿ ಮಕ್ಕಳು ಹಾಗೂ ವೃದ್ಧರ ಬಗ್ಗೆ ಕಾಳಜಿ ವಹಿಸಬೇಕು. ಮುಸ್ಸಂಜೆ ಹಾಗೂ ಬೆಳಗಿನ ಜಾವದಲ್ಲಿ ಹೊಲ, ಗದ್ದೆ, ತೋಟಗಳಿಗೆ ಹೋಗುವಾಗ ಎಚ್ಚರಿಕೆವಹಿಸಬೇಕು.

      ಅದೇ ರೀತಿ ತುಮಕೂರು ವಿಭಾಗ ವ್ಯಾಪ್ತಿ ಬುಕ್ಕಾಪಟ್ಟಣ ವಲಯದ ಜಾನಕಲ್ ಗಸ್ತಿನ ಜಾನಕಲ್ ಗ್ರಾಮದ ಬಳಿ ಜನ-ಜಾನುವಾರುಗಳಿಗೆ ತೊಂದರೆ ನೀಡುತ್ತಿದ್ದ ಚಿರತೆಯನ್ನೂ ಸಹ ಮಾರ್ಚ್ 17ರಂದು ಸೆರೆಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(Visited 9 times, 1 visits today)

Related posts

Leave a Comment