ತುಮಕೂರು:
ತುಮಕೂರು ನಗರವನ್ನು ಕ್ರೀಡಾ ನಗರಿಯನ್ನಾಗಿ ರೂಪಿಸಬೇಕೆನ್ನುವ ನಾಗರಿಕರ ಒತ್ತಾಸೆಗೆ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸುಮಾರು 8 ಕೋಟಿ ವೆಚ್ಚದಲ್ಲಿ ಸಿಂಥಟಿಕ್ ಟ್ರಾಕ್ ನಿರ್ಮಾಣಕ್ಕೆ ಮುಂದಾಗಿರುವುದು ಪುಷ್ಠಿ ನೀಡಿದಂತಿದೆ ಎಂದು ಜಿಲ್ಲಾ ವಕ್ಪ್ ಬೋರ್ಡನ ಮಾಜಿ ಆಡಳಿತಾಧಿಕಾರಿ ನವೀದ್ ಬೇಗ್ ತಿಳಿಸಿದ್ದಾರೆ.
ನಗರದ ಹೊಯ್ಸಳ ಹೊಟೇಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು,ಜಿಲ್ಲಾ ಉಸ್ತುವಾರಿ ಸಚಿವರು,ಕ್ರೀಡಾ ಹಾಗೂ ಯುವಸಬಲೀಕರಣ ಸಚಿವರೂ ಆದ ಡಾ.ಜಿ.ಪರಮೇಶ್ವರ್ ಅವರು, ಮಹಾತ್ಮಗಾಂಧಿ ಕ್ರೀಡಾಂಗಣ ದಲ್ಲಿ ಅಂದಾಜು 8 ಕೋಟಿ ರೂ ವೆಚ್ಚದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಸಿಂಥಟಿಕ್ ಅಥ್ಲೇಟಿಕ್ ಟ್ರಾಕ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನರವೇರಿಸಿರುವುದು ಜಿಲ್ಲೆಯ ಎಲ್ಲಾ ನಾಗರಿಕರು, ಕ್ರೀಡಾಪ್ರೇಮಿಗಳು ಸಂತಸ ಪಡುವ ವಿಚಾರವಾಗಿದೆ.ಇದಕ್ಕಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರುಗಳಿಗೆ ಜಿಲ್ಲೆಯ ನಾಗರಿಕರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಕೆಲ ಸಮಾನ ಮನಸ್ಕರು ಸೇರಿ ತುಮಕೂರು ಜಿಲ್ಲೆಯನ್ನು ಕ್ರೀಡಾ ಜಿಲ್ಲೆಯಾಗಿ ರೂಪಿಸಬೇಕು ಹಾಗೂ ತುಮಕೂರು ನಗರವನ್ನು ಕ್ರೀಡಾನಗರವನ್ನಾಗಿ ಮಾಡಬೇಕೆಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಹಿಂದಿನ ಸಿದ್ದರಾಮಯ್ಯ ಸರಕಾರದಲ್ಲಿ ಎಲ್ಲಾ ಸಚಿವರು,ತುಮಕೂರು ಜಿಲ್ಲೆಯ ಶಾಸಕರಿಗೆ ಮನವಿ ಮಾಡಿ ಒತ್ತಾಯಿಸಿದ ಪರಿಣಾಮ 2017-18ನೇ ಸಾಲಿನ ಬಜೆಟ್‍ನಲ್ಲಿ ಅಂದಿನ ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ತುಮಕೂರು ಜಿಲ್ಲೆಯಲ್ಲಿ ಕ್ರೀಡಾ ಸಾಮಗ್ರಿಗಳ ಕಾರ್ಖಾನೆಯ ಜೊತೆಗೆ,ಅಂತರರಾಷ್ಟ್ರೀಯ ಕ್ರೀಡಾ ನಗರಿಯಾಗಿ ರೂಪಿಸಲು ಸುಮಾರು 2000 ಕೋಟಿ ರೂ ಖರ್ಚು ಮಾಡುವ ಭರವಸೆ ನೀಡಿತ್ತು.ಈ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠಾಧೀಶರು,ಸ್ಥಳೀಯ ಶಾಸಕರು,ಕ್ರೀಡಾಪುಟಗಳನ್ನು ಒಳಗೊಂಡಂತೆ ಸಮಿತಿ ರಚಿಸಿಕೊಂಡು ಸರಕಾರಕ್ಕೆ ಬಜೆಟ್‍ನ ಘೋಷಣೆಯನ್ನು ಜಾರಿಗೆ ತರುವಂತೆ ಒತ್ತಡ ಹೇರಲಾಗಿತ್ತು.
ಸರಕಾರದ ಮೇಲೆ ನಿರಂತರ ಒತ್ತಡ ತಂದ ಹಿನ್ನೆಲೆಯಲ್ಲಿ ಸರಕಾರ ಮಹಾತ್ಮಗಾಂಧಿ ಕ್ರೀಡಾಂಗಣದ ಅಭಿವೃದ್ದಿಯ ಜೊತೆಗೆ, ಸಿಂಥಟಿಕ್ ಟ್ರಾಕ್ ನಿರ್ಮಾಣಕ್ಕೆ ಮುಂದಾಗಿದೆ.ಅಲ್ಲದೆ 100 ಎಕರೆ ಜಮೀನು ನೀಡಿದರೆ ಕ್ರೀಡಾ ವಿವಿ ತೆರೆಯುವ ಭರವಸೆ ಯನ್ನು ಸಚಿವರು ನೀಡಿದ್ದು,ಈ ಎಲ್ಲಾ ಅಂಶಗಳು ತುಮಕೂರು ಜಿಲ್ಲೆ ಕ್ರೀಡಾ ಜಿಲ್ಲೆಯಾಗಿ ಗುರುತಿಸಿಕೊಳ್ಳಲು ಸಹಕಾರಿ ಯಾಗಲಿವೆ ಎಂದು ನವೀದ್‍ಬೇಗ್ ಸಂತಸ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಕೇವಲ ಕ್ರೀಡೆ ಬೆಳೆವಣಿಗೆಯಿಂದ ಯಾವುದೇ ಉಪಯೋಗವಿಲ್ಲ.ಒಂದೇ ಸೂರಿನ ಅಡಿಯಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಎಲ್ಲಾ ಕ್ರೀಡೆಗಳ ಅಂಕಣಗಳು, ಅದಕ್ಕೆ ಪೂರಕವಾದ ವಾತಾವರಣ ದೊರೆಯುವಂತೆ ಮಾಡುವುದು ಅತಿ ಮುಖ್ಯ.ಮೊದಲು ಅಗತ್ಯವಿರುವ 100 ಎಕರೆ ಭೂಮಿ ಮಂಜೂರಾತಿಗೆ ನಾವೆಲ್ಲರೂ ಹೋರಾಡಬೇಕಿದೆ.ತುಮಕೂರು ನಗರ ಕ್ರೀಡಾ ನಗರಿಯಾಗಿ ರೂಪಿತವಾದರೆ ಜಿಲ್ಲೆಗೆ ಹಾಗೂ ಸಮ್ಮಿಶ್ರ ಸರಕಾರ ಕೀರ್ತಿಯನ್ನು ತರಲಿದೆ ಎಂದು ನವೀದ್ ಬೇಗ್ ತಿಳಿಸಿದರು.
ಈ ವೇಳೆ ವಕೀಲರಾದ ಇಂತಿಯಾಜ್ ಅಹಮದ್, ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಎನ್.ನಜೀವುಲ್ಲಾ ಖಾನ್, ತಾ.ಪಂ.ಮಾಜಿ ಸದಸ್ಯ ಫಯಾಜ್ ಅಹಮದ್, ಭೂ ನ್ಯಾಯ ಮಂಡಳಿ ಮಾಜಿ ಸದಸ್ಯ ಚಂದ್ರು, ಸಾಫ್ಟವೇರ ಇಂಜಿನಿಯರ್ ಅಯ್ಯೂಬ್‍ಖಾನ್ ಮತ್ತಿತರರು ಉಪಸ್ಥಿತರಿದ್ದರು.