ತುಮಕೂರು: ಸರ್ಕಾರಿ ಜಮೀನಿಗೆ ಸಂಬ0ಧಿ ಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸುವ ಅಧಿಕಾರಿ-ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶಿರಾ ಶಾಸಕ ಹಾಗೂ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರಿಗೆ ಸೂಚಿಸಿದರು.
ಶಿರಾ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕಂದಾಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಖಾಲಿ ಇರುವ ಸರ್ಕಾರಿ ಜಾಗವನ್ನು ಲೂಟಿ ಮಾಡುತ್ತಿರುವವರನ್ನು ಮಟ್ಟ ಹಾಕಬೇಕು. ಮಧುಗಿರಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಕೆಲವು ಅಧಿಕಾರಿ/ಸಿಬ್ಬಂದಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿರುವ ಬಗ್ಗೆ ನನಗೆ ಮಾಹಿತಿಯಿದ್ದು, ಅಂತಹವರನ್ನು ಪತ್ತೆ ಹಚ್ಚಿ ನೇರವಾಗಿ ಜೈಲಿಗೆ ಕಳುಹಿಸಲು ಕ್ರಮ ವಹಿಸಬೇಕು. ಕರ್ತವ್ಯಲೋಪ ಎಸಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಅವರಿಗೆ ಸೂಚಿಸಿದರು.
ಶೈಕ್ಷಣಿಕ ನಾಡು ಎಂದೇ ಹೆಸರಾಗಿರುವ ಜಿಲ್ಲೆಯ ಶಿರಾ ತಾಲ್ಲೂಕಿಗೆ ಸರ್ಕಾರವು ಹೊಸ ದಾಗಿ ಅಲೆಮಾರಿ ಸಮುದಾಯದ ಶಾಲೆಗೆ ಮಂಜೂರಾತಿ ನೀಡಿರುವುದು ಸಂತಸ ತಂದಿದೆ. ಅಲೆಮಾರಿ ಸಮುದಾಯಕ್ಕೆ ಸಂಬ0ಧಿಸಿದ0ತೆ ಶಿರಾ ತಾಲೂಕಿನಲ್ಲಿ ಈಗಾಗಲೇ ೯ ಶಾಲೆಗಳಿದ್ದು, ಒಟ್ಟು ೨೩೫೦ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದು, ಎಸ್.ಎಸ್.ಎಲ್.ಸಿ. ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಪೈಕಿ ೨೭ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ ಎಂದು ವಿವರಿಸಿದರಲ್ಲದೆ, ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೂ ಪ್ರತ್ಯೇಕ ವಿದ್ಯಾ ರ್ಥಿ ನಿಲಯಗಳನ್ನು ತೆರೆಯಬೇಕು. ಇದರಿಂದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಸರ್ಕಾರಿ ಜಮೀನು ದುರಸ್ತಿ ಮಾಡಲು ನಮೂನೆ ೧-೫ರಲ್ಲಿ ಸಲ್ಲಿಸಿರುವ ಅರ್ಜಿಗಳು ೧ ವರ್ಷದಿಂದ ವಿಲೇವಾರಿಯಾಗದೆ ಬಾಕಿ ಉಳಿದಿವೆ. ಅರ್ಜಿಗಳನ್ನು ವಿಲೇವಾರಿ ಮಾಡದೆ ಬಾಕಿ ಉಳಿಸಿಕೊಂಡ ಕಂದಾಯ ನಿರೀಕ್ಷಕರಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಬೇಕೆಂದು ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಅವರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಶಿರಾ ತಾಲ್ಲೂಕಿನ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸಾಂಕೇತಿಕವಾಗಿ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಯಿತು.
ಸಭೆಯಲ್ಲಿ ಭೂ ದಾಖಲೆಗಳ ಇಲಾಖೆಯ ಉಪನಿರ್ದೇಶಕ ನಿರಂಜನ್, ಶಿರಸ್ತೇದಾರ್ ಎನ್.ಆರ್. ಮೋಹನ್ ಮೂರ್ತಿ, ಚುನಾವಣಾ ಶಿರಸ್ತೇದಾರ್ ನಾಗರಾಜ್, ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ಸೇರಿದಂತೆ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.