ತುಮಕೂರು: ಕೆ.ಎನ್.ರಾಜಣ್ಣನವರನ್ನು ಸಚಿವ ಸಂಪುಟದಿ0ದ ವಜಾಗೊಳಿಸಿರುವುದನ್ನು ಖಂಡಿಸಿ, ಅವರನ್ನು ಮತ್ತೆ ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಕೆ.ಎನ್.ಆರ್ ಹಾಗೂ ಆರ್.ಆರ್. ಅಭಿಮಾನಿ ಬಳಗ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಸಂಘಸ0ಸ್ಥೆಗಳ, ಅಹಿಂದ ವರ್ಗ, ಸಾಹಿತಿಗಳು, ವಿವಿಧ ಸಮಾಜಗಳ ಮುಖಂಡರೊ0ದಿಗೆ ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ಸತ್ಯಾಗ್ರಹ ಇಡೀ ದಿನ ಧರಣಿ ಸತ್ಯಾಗ್ರಹ ನಡೆಸಿದರು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಆಗಮಿಸಿದ್ದ ಮುಖಂಡರು, ಕೆ.ಎನ್.ರಾಜಣ್ಣನವರು ದೇವರಾಜ ಅರಸು ಅವರ ತತ್ವಾದರ್ಶಗಳನ್ನು ತಮ್ಮ ರಾಜಕೀಯ ಬದುಕಿನಲ್ಲಿ ಅಳವಡಿಸಿಕೊಂಡು ಅವರಂತೆಯೇ ಹಿಂದುಳಿದ ವರ್ಗ, ಶೋಷಿತರ ಧ್ವನಿಯಾಗಿ ನೆರವಿಗೆ ನಿಂತವರು. ಕೆ.ಎನ್.ರಾಜಣ್ಣನವರಂತಹ ಪ್ರಭಾವಿ ನಾಯಕರ ವಿರುದ್ಧ ಕ್ರಮ ತೆಗೆದುಕೊಂಡಾಗಲೆಲ್ಲಾ ಕಾಂಗ್ರೆಸ್ ಹೀನಾಯ ಸ್ಥಿತಿ ಅನುಭವಿಸಿತ್ತು. ರಾಜೀವ್ ಗಾಂಧಿ ನೇತೃತ್ವದಲ್ಲಿ ೧೯೮೪ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ೪೦೫ ಸ್ಥಾನಗಳನ್ನು ಗಳಿಸಿತ್ತು. ಆನಂತರದಿ0ದ ಪಕ್ಷ ಕುಸಿತ ಕಂಡಿತು. ಪಕ್ಷದ ಸಂಘಟನಾ ಕೊರತೆ ಹಾಗೂ ನಿಷ್ಠಾವಂತರ ಕಡಿಗಣಿಕೆಯೂ ಇದಕ್ಕೆ ಕಾರಣ. ಮುಖ್ಯಮಂತ್ರಿಯಾಗಿ ಜನಪರ ಕಾರ್ಯಕ್ರಮ ಜಾರಿಗೆ ತಂದು ಜನರ ಮೆಚ್ಚುಗೆಗೆ ಪಾತ್ರರಾದ ದೇವರಾಜ ಅರಸು ಅವರನ್ನೇ ಕಾಂಗ್ರೆಸ್ ಪಕ್ಷ ಕಡೆಗಣಿಸಿತ್ತು. ಅರಸು ಅವರ ದಾರಿಯಲ್ಲಿ ಸಾಗಿರುವ ಕೆ.ಎನ್.ರಾಜಣ್ಣನವರನ್ನೂ ಕಾಂಗ್ರೆಸ್ ಹೈಕಮಾಂಡ್ ಸಂಪುಟದಿ0ದ ವಜಾಗೊಳಿಸಿರುವುದು ವಿಷಾದನೀಯ ಎಂದು ಹೇಳಿದರು.
ದೇವರಾಜ ಅರಸು ಅವರು ಹಿಂದುಳಿದ ವರ್ಗ, ಶೋಷಿತ ಸಮುದಾಯದ ಆಶಾಕಿರಣವಾಗಿದ್ದರು, ಅವರು ಕೊಟ್ಟ ಕಾರ್ಯಕ್ರಮಗಳನ್ನು ಈ ವರ್ಗಗಳು ಮರೆಯುವಂತಿಲ್ಲ. ಕೆ.ಎನ್.ಆರ್ ಕಾಂಗ್ರೆಸ್ ಪಕ್ಷದ ಸಂಘಟನೆಯ ಶಕ್ತಿಯಾಗಿದ್ದಾರೆ. ಜಿಲ್ಲೆಯ ಅನೇಕ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣರಾಗಿದ್ದಾರೆ. ಇಂತಹ ನಾಯಕನನ್ನು ಸಚಿವ ಸಂಪುಟದಿ0ದ ವಜಾಗೊಳಿಸಿ ಅಪಮಾನ ಮಾಡಿರುವುದು ಅವರ ಅಪಾರ ಅಭಿಮಾನಿಗಳಿಗೆ ನೋವಾಗಿದೆ. ಕೂಡಲೇ ಅವರಿಗೆ ಮತ್ತೆ ಮಂತ್ರಿ ಸ್ಥಾನ ನೀಡಬೇಕು. ತಳಸಮುದಾಯಗಳನ್ನು ಗುರುತಿಸಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ಅವರು ಎಲ್ಲಾ ಸಮುದಾಯಗಳೂ ಸಹಕಾರ ಕ್ಷೇತ್ರದಲ್ಲಿ ತೊಡಗಿಕೊಂಡು ಆರ್ಥಿಕವಾಗಿ ಶಕ್ತಿ ಬೆಳೆಸಿಕೊಳ್ಳಲು ಕಾರಣಕರ್ತರಾಗಿದ್ದಾರೆ ಎಂದರು.
ವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪುರುಷೋತ್ತಮ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಜಿ.ಜೆ.ರಾಜಣ್ಣ, ಜಿ.ಎನ್.ಮೂರ್ತಿ, ನಾಗೇಶ್‌ಬಾಬು,ನಗರಸಭೆ ಮಾಜಿ ಅಧ್ಯಕ್ಷ ಟಿ.ಪಿ.ಮಂಜುನಾಥ್, ಮುಖಂಡರಾದ ಧನಿಯಾಕುಮಾರ್, ಮಲ್ಲಸಂದ್ರ ಶಿವಣ್ಣ, ನಾರಾಯಣಗೌಡ, ಕಿಡಿಗಣ್ಣಪ್ಪ, ಮುರಳಿಕೃಷ್ಣಪ್ಪ, ಎಂ.ಎಚ್.ನಾಗರಾಜು, ಕೆ.ವಿ.ಕೃಷ್ಣಮೂರ್ತಿ, ಕುಂಕುಮನಹಳ್ಳಿ ಕುಮಾರ್, ಎಂ.ಎನ್.ಕೆ.ರಾಜು, ಟಿ.ಆರ್.ಸುರೇಶ್, ಬಸವರಾಜು, ಶಿವಾನಂದ್, ಡ್ಯಾಗೇರಹಳ್ಳಿ ವಿರೂಪಾಕ್ಷ, ಗುರುರಾಘವೇಂದ್ರ, ಜಿಯಾ, ಶ್ರೀನಿವಾಸ್, ಗುರುಮೂರ್ತಿ, ನವರತ್ನಕುಮಾರ್, ಶಿವಕುಮಾರ್, ರಮೇಶ್, ಗಂಗಾಧರ್, ಶಿವಣ್ಣ, ಜಿ.ಆರ್.ನಾಗರಾಜು, ರಮೇಶ್ ಮೊದಲಾದವರು ಭಾಗವಹಿಸಿದ್ದರು.
(Visited 1 times, 1 visits today)