ತುಮಕೂರು: ತುಮಕೂರಿನ ಜನತೆ ಶಾಂತಿ ಪ್ರಿಯರು, ಸಜ್ಜನಿಕೆಗೆ ಹೆಸರಾದವರು, ದೇಶಪ್ರೇಮಿಗಳು. ಕೊಟ್ಟ ಮಾತಿನಂತೆ ನಮ್ಮ ಸರ್ಕಾರ 5 ಗ್ಯಾರಂಟಿಗಳನ್ನು ಅನುಷ್ಟಾನಕ್ಕೆ ತಂದು ನುಡಿದಂತೆ ನಡೆದಿದೆ. ಜನರ ಆಶಯಕ್ಕೆ ತಕ್ಕಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳ ಸೌಲಭ್ಯವನ್ನು ತಲುಪಿಸುವ ಕೆಲಸ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಎಂದು ಉಪ ಮುಖ್ಯಮಂತ್ರಿಗಳು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಹೇಳಿದರು.
ಅವರು ಇಂದು 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ತುಮಕೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೇರವೇರಿಸಿ, ಬಳಿಕ ಮಾತನಾಡಿದರು.
ತುಮಕೂರು ಜಿಲ್ಲೆಯ ರೇಷ್ಮೆ ಬೆಳೆಗಾರರು ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಗಳಲ್ಲಿ ತಾವು ಬೆಳೆದ ರೇಷ್ಮೆ ಗೂಡುಗಳಿಗೆ ಗರಿಷ್ಠ ಧಾರಣೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 2,974 ಮೆ.ಟನ್ ದ್ವಿತಳಿ ಗೂಡು ಹಾಗೂ 5,008 ಮೆ.ಟನ್ ಒಟ್ಟು ಗೂಡು ಉತ್ಪಾದಿಸಿ ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದರು.
ತುಮಕೂರು-ರಾಯದುರ್ಗ ರೈಲ್ವೆ ಯೋಜನೆಯು ತುಮಕೂರು ಜಿಲ್ಲೆಯ 4 ತಾಲೂಕುಗಳ ಒಟ್ಟು 77 ಗ್ರಾಮಗಳ ಮೂಲಕ 104.02 ಕಿ.ಮೀ ವ್ಯಾಪ್ತಿಯಲ್ಲಿ ಹಾದು ಹೋಗುತ್ತಿದ್ದು, ಒಟ್ಟು ಅವಶ್ಯಕವಾದ 1,396 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಈಗಾಗಲೇ ಶೇಕಡ 99.9ರಷ್ಟು ಜಮೀನನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದ್ದು, ಡಿಸೆಂಬರ್ 2027ರ ಅಂತ್ಯದ ವೇಳೆಗೆ ರೈಲ್ವೆ ಸಂಚಾರ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಮುಂದುವರೆದು, ತುಮಕೂರು-ದಾವಣಗೆರೆ ರೈಲ್ವೆ ಯೋಜನೆಯು ತುಮಕೂರು ಜಿಲ್ಲೆಯ 2 ತಾಲೂಕುಗಳ ಒಟ್ಟು 35 ಗ್ರಾಮಗಳ ಮೂಲಕ 58.69 ಕಿ.ಮೀ ವ್ಯಾಪ್ತಿಯಲ್ಲಿ ಹಾದು ಹೋಗುತ್ತಿದ್ದು, ಒಟ್ಟು ಅವಶ್ಯಕವಾದ 845 ಎಕರೆ ಜಮೀನಿನ ಪೈಕಿ ಈವರೆಗೂ 816 ಎಕರೆ ಅಂದರೆ ಶೇಕಡ 97ರಷ್ಟು ಜಮೀನನ್ನು ಭೂಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದ್ದು, ಡಿಸೆಂಬರ್ 2027ರ ಅಂತ್ಯದ ವೇಳೆಗೆ ರೈಲ್ವೆ ಸಂಚಾರ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ಕುಡಿಯುವ ನೀರಿಗಾಗಿ ಕೈಗೆತ್ತಿಕೊಂಡಿರುವ ಬಹು ನಿರೀಕ್ಷಿತ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯು ಜಿಲ್ಲೆಯ 8 ತಾಲ್ಲೂಕುಗಳಲ್ಲಿ ಒಟ್ಟು 197 ಗ್ರಾಮಗಳ ಮೂಲಕ 163 ಕಿ.ಮೀ. ವ್ಯಾಪ್ತಿಯಲ್ಲಿ ಹಾದು ಹೋಗುತ್ತಿದ್ದು, ಅವಶ್ಯಕವಾದ 3,118 ಎಕರೆ ಜಮೀನಿನ ಪೈಕಿ ಶೇ.97ರಷ್ಟು ಭೂ ಸ್ವಾಧೀನಪಡಿಸಿಕೊಂಡು ಕೋರಿಕೆ ಸಂಸ್ಥೆಗೆ ಹಸ್ತಾಂತರಿಸಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಹೇಮಾವತಿ ನಾಲಾ ಯೋಜನೆಯು ಜಿಲ್ಲೆಯ ಕೆರೆಗಳಿಗೆ ಅಂತರ್ಜಲ ಉತ್ತೇಜನಕ್ಕಾಗಿ ಹೇಮಾವತಿ ನದಿಯಿಂದ ನೀರನ್ನು ಪಂಪ್ ಮಾಡಿ ಗುರುತ್ವಾಕರ್ಷಣ ಕಾಲುವೆಗಳ ಮೂಲಕ 5 ತಾಲ್ಲೂಕುಗಳ ಒಟ್ಟು 94 ಗ್ರಾಮಗಳಿಗೆ ನೀರೊದಗಿಸಲು ಲಿಂಕ್ ಕೆನಾಲ್ ಯೋಜನೆ ಸೇರಿ ಒಟ್ಟು 515 ಎಕರೆ ಜಮೀನಿನ ಪೈಕಿ ಶೇಕಡ 75ರಷ್ಟು ಜಮೀನನ್ನು ಭೂಸ್ವಾಧೀನಪಡಿಸಿಕೊಂಡು ಭೂ ಕೋರಿಕೆ ಸಂಸ್ಥೆಗೆ ಹಸ್ತಾಂತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ತುಮಕೂರು ಜಿಲ್ಲೆಯ ಕೈಗಾರಿಕಾ ಪ್ರದೇಶಾಭಿವೃದ್ಧಿಗಾಗಿ ಒಟ್ಟು 5 ಹಂತಗಳಲ್ಲಿ ಶಿರಾ ತಾಲ್ಲೂಕು ಸೇರಿದಂತೆ ತುಮಕೂರು ತಾಲ್ಲೂಕಿನ ವಸಂತನರಸಾಪುರ ಕೈಗಾರಿಕಾ ಪ್ರದೇಶ ಹಾಗೂ ಚೆನ್ನೈ-ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆಗಳಿಗಾಗಿ ಒಟ್ಟು 10,151 ಎಕರೆ ಜಮೀನಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಕೈಗಾರಿಕಾ ಪ್ರದೇಶಾಭಿವೃದ್ಧಿಗಾಗಿ ಸ್ವಾಧೀನಗೊಂಡ ಜಮೀನುಗಳಿಗೆ ಈವರೆವಿಗೆ ಒಟ್ಟು 1,168 ಕೋಟಿ ರೂ.ಗಳ ಪರಿಹಾರ ಪಾವತಿಸಲಾಗಿದ್ದು, 6ನೇ ಹಂತದ 4,731 ಎಕರೆ ಜಮೀನಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ಜೆಎಂಸಿ ಕಾರ್ಯ ಪ್ರಗತಿಯಲ್ಲಿದೆ ಎಂದರು.
ನಕಲಿ ದಾಖಲೆಗಳನ್ನು ತಡೆಗಟ್ಟುವುದು ಹಾಗು ಸಾರ್ವಜನಿಕರು ಕಚೇರಿಗೆ ಹೋಗದೆ ಸರಳವಾಗಿ ದಾಖಲೆಗಳ ಪ್ರತಿಗಳನ್ನು ಪಡೆಯಲು ಜಾರಿಗೆ ತಂದಿರುವ ʼಭೂ ಸುರಕ್ಷಾ ಯೋಜನೆʼಯಡಿ ಈವರೆಗೆ 2.17 ಕೋಟಿ ಪುಟಗಳು ಸ್ಕ್ಯಾನ್ ಮಾಡಲಾಗಿದ್ದು, ಈವರೆಗೂ ಸ್ಕ್ಯಾನ್ ಆಗಿರುವ 1,42,268 ಪುಟಗಳ ದಾಖಲೆಗಳನ್ನು ಸಾರ್ವಜನಿಕರಿಗೆ ತಂತ್ರಾಂಶದ ಮೂಲಕವೇ ನೀಡಲಾಗಿದೆ ಎಂದು ತಿಳಿಸಿದರು.
ʼಹಕ್ಕುಪತ್ರ ವಿತರಣಾ ಅಭಿಯಾನʼದಡಿ ತುಮಕೂರು ಜಿಲ್ಲೆಯಲ್ಲಿ ಕಂದಾಯ ಗ್ರಾಮವಾಗಿ ರಚಿಸಲು ಈವರೆಗೂ ಗುರುತಿಸಲಾಗಿರುವ ದಾಖಲೆ ರಹಿತ 1,312 ಜನವಸತಿ ಪ್ರದೇಶಗಳ ಪೈಕಿ ಈವರೆಗೂ ಸರ್ಕಾರದಿಂದ 945 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹಾಗೂ 848 ಗ್ರಾಮಗಳಿಗೆ ಅಂತಿಮ ಅಧಿಸೂಚನೆಯಾಗಿದೆ. ಉಳಿದ ಗ್ರಾಮಗಳು ವಿವಿಧ ಹಂತಗಳಲ್ಲಿ ಅಧಿಸೂಚನೆ ಹೊರಡಿಸಲು ಬಾಕಿ ಇದ್ದು, ಕಾರ್ಯ ಪ್ರಗತಿಯಲ್ಲಿದೆ ಎಂದರು.
ಈವರೆಗೂ 22,067 ಅರ್ಹ ಫಲಾನುಭವಿಗಳ ಹಕ್ಕುಪತ್ರಗಳನ್ನು ಗಣಕೀಕರಣಗೊಳಿಸಲಾಗಿದ್ದು, ಮೇ 19ರಂದು ನಡೆದ ಕಂದಾಯ ಬೃಹತ್ ಸಮಾವೇಶದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರಿಂದ ಸವಲತ್ತು/ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಗಣಕೀಕೃತ ಹಕ್ಕುಪತ್ರಗಳನ್ನು ವಿತರಿಸಿರುವುದು ಗಿನ್ನಿಸ್ ವರ್ಲ್ಡ್ ಬುಕ್ ರೆಕಾರ್ಡ್‌ನಲ್ಲಿ ದಾಖಲಾಗಿದೆ ಎಂದು ವಿವರಿಸಿದರು.
ಇ-ಪೌತಿ ಆಂದೋಲನವನ್ನು ಸರ್ಕಾರವು ಹೊಸ ತಂತ್ರಾಂಶದ ಮೂಲಕ ಸರಳೀಕರಣಗೊಳಿಸಿ ಅನುಷ್ಠಾನಗೊಳಿಸಿದ್ದು, ಇದರಿಂದ ಸಾರ್ವಜನಿಕರಿಗೆ ಸುಮಾರು ಒಂದು, ಎರಡು ದಶಕಗಳಿಂದ ಅವರ ಪೂರ್ವಿಕರ ಹೆಸರಿನಲ್ಲಿರುವ ಜಮೀನುಗಳನ್ನು ಸರಳವಾಗಿ ಅವರ ವಾರಸುದಾರರಿಗೆ ಖಾತೆ ಮಾಡಬಹುದಾಗಿದೆ. ಈ ಸಂಬಂಧ ಜಿಲ್ಲೆಯಲ್ಲಿ ಆಧಾರ್ ಸೀಡಿಂಗ್ ಅಂಕಿ ಅಂಶಗಳ ಪ್ರಕಾರ ಒಟ್ಟು 5.24ಲಕ್ಷ ಪ್ರಕರಣಗಳನ್ನು ಗುರುತಿಸಿದ್ದು, ಈ ಪೈಕಿ 2,25,078 ಅರ್ಜಿಯನ್ನು ಈಗಾಗಲೇ ವಿಲೇವಾರಿ ಮಾಡಲಾಗಿದೆ ಎಂದ ಅವರು, ಇ-ಪೌತಿ ಆಂದೋಲನದಂತಹ ಸರ್ಕಾರದ ಸೌಲಭ್ಯವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಮಾರ್ಚ್-2026ರ ಅಂತ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು 28,215 ಎಂ.ಎಸ್.ಎಂ.ಇ ಕೈಗಾರಿಕೆಗಳು ನೋಂದಣಿಯಾಗಿರುತ್ತದೆ. ಸದರಿ ಕೈಗಾರಿಕೆಗಳಿಂದ ಒಟ್ಟು 712.23 ಕೋಟಿ ರೂ.ಗಳ ಬಂಡವಾಳ ಹೂಡಿಕೆಯಾಗಿದ್ದು, 2,02,324 ಜನರಿಗೆ ನೇರ ಉದ್ಯೋಗವಕಾಶ ಸೃಷ್ಟಿಯಾಗಿದೆ ಎಂದರು.
2025-26ನೇ ಸಾಲಿನಲ್ಲಿ ರಾಜ್ಯ ಉನ್ನತ ಮಟ್ಟದ ಸಮಿತಿ ಮತ್ತು ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಒಟ್ಟು 26 ಕೈಗಾರಿಕೆಗಳು ಅನುಮೋದನೆಯಾಗಿದ್ದು, ಅನುಷ್ಠಾನ ಹಂತದಲ್ಲಿರುತ್ತವೆ. ಈ ಕೈಗಾರಿಕೆಯಿಂದ ಜಿಲ್ಲೆಗೆ ಒಟ್ಟು 1185.91 ಕೋಟಿ ರೂ. ಬಂಡವಾಳ ಹೂಡಿಕೆಯಾಗಿದ್ದು, ಸದರಿ ಕೈಗಾರಿಕೆಗಳಿಂದ ಒಟ್ಟು 7,286 ನೇರ ಉದ್ಯೋಗ ಸೃಷ್ಟಿಯಾಗಲಿದೆ. ರಾಜ್ಯ ಸರ್ಕಾರದ ವತಿಯಿಂದ ನಡೆದ Global Investors Meet-2025ರ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ತುಮಕೂರು ಜಿಲ್ಲೆಯಲ್ಲಿ 7 ಬೃಹತ್ ಮತ್ತು ಭಾರಿ ಕೈಗಾರಿಕೆ ಆರಂಭಿಸಲು MOU ಮಾಡಿಕೊಂಡಿರುತ್ತಾರೆ. ಈ ಕೈಗಾರಿಕೆಗಳಿಂದ ಒಟ್ಟು 75,480 ಕೋಟಿ ರೂ. ಬಂಡವಾಳ ಹೂಡಿಕೆ ನಿರೀಕ್ಷಿಸಲಾಗಿದೆ ಹಾಗೂ 29,200 ನೇರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ತುಮಕೂರು ಜಿಲ್ಲೆಯ ಶಿರಾ ಕೈಗಾರಿಕಾ ಪ್ರದೇಶದ 2ನೇ ಹಂತದ ಕೈಗಾರಿಕಾ ಪ್ರದೇಶದ ಅಭಿವೃದ್ಧಿಯ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ವಿಕಸಿತ ಭಾರತ್ ಗ್ರಾಮೀಣ ರೋಜ್ ಗಾರ್ ಅಂಡ್ ಆಜೀವಿಕ ಮಿಷನ್ ಯೋಜನೆಯು ದೇಶಾದ್ಯಂತ ಜುಲೈ 1 ರಿಂದ ಪ್ರಾರಂಭವಾಗಿದ್ದು, ತುಮಕೂರು ಜಿಲ್ಲೆಯಲ್ಲಿಯೂ ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲು ರೂಪುರೇಷೆಯನ್ನು ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ತುಮಕೂರು ಜಿಲ್ಲೆಯಲ್ಲಿ ʼವಿಬಿ ಜಿ ರಾಮ್ ಜಿ ಯೋಜನೆʼಯಡಿ 51,341 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, ಜುಲೈ ಆರಂಭದಿಂದ ಇಲ್ಲಿಯವರೆಗೆ ಸುಮಾರು 85 ಸಾವಿರಕ್ಕೂ ಹೆಚ್ಚಿನ ಮಾನವ ದಿನಗಳನ್ನು ಸೃಜಿಸುವ ಮೂಲಕ ಬರಗಾಲದ ಸಂದರ್ಭದಲ್ಲಿ ಗ್ರಾಮೀಣ ಜನರಿಗೆ ಉದ್ಯೋಗ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 330 ಗ್ರಾಮ ಪಂಚಾಯಿತಿಗಳಿಗೆ ಜುಲೈ-1ರಿಂದ ಒಟ್ಟು 59 ಕೋಟಿ ರೂ.ಗಳ ಕೂಲಿ ಮೊತ್ತ ಬಿಡುಗಡೆಯಾಗಿದ್ದು, ಇದುವರೆಗೂ 2 ಕೋಟಿ ರೂ.ಗಳ ಕೂಲಿ ಮೊತ್ತವನ್ನು ಫಲಾನುಭವಿಗಳಿಗೆ ನೀಡಲಾಗಿದೆ ಎಂದು ವಿವರಿಸಿದರು.
ಎನ್.ಆರ್.ಎಲ್.ಎಮ್. ಯೋಜನೆಯಡಿ ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ 10 ತಾಲ್ಲೂಕುಗಳಲ್ಲಿ 14531 ಸ್ವ ಸಹಾಯ ಗುಂಪುಗಳು ಹಾಗೂ 1,42,209 ಸದಸ್ಯರು ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಭಾಗದ ಬಡ ಮತ್ತು ದುರ್ಬಲ ಹೆಣ್ಣು ಮಕ್ಕಳ ಜೀವನೋಪಾಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ವೈಯಕ್ತಿಕವಾಗಿ ಮತ್ತು ಅವಲಂಬಿತ ಕುಟುಂಬಗಳ ಆದಾಯದ ಮಟ್ಟವನ್ನು ಹೆಚ್ಚಿಸಿದೆ ಎಂದ ಅವರು, ಜನರ ಆರೋಗ್ಯದ ಹಿತದೃಷ್ಟಿಯಿಂದ 56 ಕೋಟಿ ರೂ. ವೆಚ್ಚದಲ್ಲಿ ಟ್ರಾಮಾಕೇರ್ ಸೆಂಟರ್, 50 ಲಕ್ಷ ರೂ. ವೆಚ್ಚದಲ್ಲಿ ಅಪೌಷ್ಠಿಕ ಮಕ್ಕಳ ಪುನಶ್ವೇತನ ಕೇಂದ್ರ, 20 ಕೋಟಿ ರೂ. ವೆಚ್ಚದಲ್ಲಿ ನರ್ಸಿಂಗ್ ಕಾಲೇಜ್, 1.38 ಕೋಟಿ ರೂ. ವೆಚ್ಚದಲ್ಲಿ ನೂತನ ಕಣ್ಣಿನ ಶಸ್ತ್ರಚಿಕಿತ್ಸಾಗಾರ ಮತ್ತು ವಾರ್ಡ್, 20 ಕೋಟಿ ರೂ. ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ, 42 ಕೋಟಿ ರೂ. ವೆಚ್ಚದಲ್ಲಿ ಸಿ.ಸಿ.ಬಿ.ಯು ಲೋಕಾರ್ಪಣೆಯಾಗಿ ಈಗಾಗಲೇ ಕಾರ್ಯಾರಂಭಗೊಂಡಿವೆ ಎಂದು ತಿಳಿಸಿದರು.
ಮುಂದುವರೆದು, 100 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಲಾಗಿದ್ದು, 131.90 ಕೋಟಿ ರೂ. ವೆಚ್ಚದಲ್ಲಿ ನೂತನ 300 ಹಾಸಿಗೆಯ ಜಿಲ್ಲಾಸ್ಪತ್ರೆಯ ಹೊಸ ಕಟ್ಟಡವನ್ನು ನಿರ್ಮಿಸಲು ಈಗಾಗಲೇ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದರು.
ಜಿಲ್ಲೆಯ 11 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಯಂ ಪೌರಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿರುವ ವಸತಿ ರಹಿತ ನೌಕರರುಗಳಿಗೆ ಪೌರಕಾರ್ಮಿಕ ಗೃಹಭಾಗ್ಯ ಯೋಜನೆಯಡಿ ಒಟ್ಟು 176 ಮನೆಗಳು ಅನುಮೋದನೆಗೊಂಡಿದೆ. ಪ್ರತಿ ಮನೆಗೆ ಘಟಕ ವೆಚ್ಚ 7.50 ಲಕ್ಷ ರೂ. ಅಂದಾಜಿಸಲಾಗಿದ್ದು, ರಾಜ್ಯ ಸರ್ಕಾರದಿಂದ 6 ಲಕ್ಷ ರೂ.ಗಳನ್ನು ಭರಿಸಲಾಗುತ್ತದೆ. ಪೌರಕಾರ್ಮಿಕ ಗೃಹಭಾಗ್ಯ ಯೋಜನೆಯಡಿ ಈವರೆಗೂ 166 ಮನೆಗಳು ಪೂರ್ಣಗೊಂಡಿದ್ದು, ಉಳಿದ 10 ಮನೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ವಿವರಿಸಿದರು.
ತುಮಕೂರು ಮಹಾನಗರಪಾಲಿಕೆ ಒಳಗೊಂಡಂತೆ ಜಿಲ್ಲೆಯ ಒಟ್ಟು 11 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಸತಿ ನಿವೇಶನ ರಹಿತರಿಗೆ ಶಾಶ್ವತ ಸೂರು ಕಲ್ಪಿಸಿಕೊಡಲು ವಿವಿಧ ಸರ್ವೇ ನಂಬರ್‌ಗಳಲ್ಲಿ ಒಟ್ಟಾರೆ 192 ಎಕರೆ ಪ್ರದೇಶವನ್ನು ಈಗಾಗಲೇ ಗುರುತಿಸಲಾಗಿದ್ದು, ನಗರ ಆಶ್ರಯ ಸಮಿತಿಯ ಮೂಲಕ ನಿವೇಶನ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ತುಮಕೂರು ಜಿಲ್ಲೆ ಐತಿಹಾಸಿಕ, ಪಾರಂಪರಿಕ ನಾಡು. ಅಲ್ಲದೆ, ಕಲೆ, ಸಂಸ್ಕೃತಿಗಳ ಬೀಡೂ ಹೌದು. ಸರ್ಕಾರದ ವತಿಯಿಂದ ಕಳೆದ ಎರಡು ವರ್ಷಗಳು ನಾಡ ಹಬ್ಬ ದಸರಾ ಉತ್ಸವವನ್ನು ಐತಿಹಾಸಿಕ ಮೈಸೂರಿನ ದಸರಾ ಉತ್ಸವಕ್ಕೆ ಸರಿಸಮಾನವಾಗಿ ನಡೆಸಿ ಯಶಸ್ವಿಯಾಗಿದ್ದೇವೆ. ಈ ಯಶಸ್ವಿಯಲ್ಲಿ ತಾವೆಲ್ಲರೂ ಭಾಗಿಗಳು ಎಂದು ಹೇಳಲು ನಾನು ಹೆಮ್ಮೆಪಡುತ್ತೇನೆ. ಜಿಲ್ಲೆ ಹಾಗೂ ನಾಡಿನ ಸಮಸ್ತ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಬಾರಿಯೂ ದಸರಾ ಉತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಈ ದೇಶದ ಸಂಪತ್ತು ಯುವ ಸಮುದಾಯ ಎಂದು ನಂಬಿರುವವನು ನಾನು. ಯುವ ಜನತೆ ಸದೃಢಗೊಳ್ಳಬೇಕು. ಬಲಿಷ್ಠ ಭಾರತದ ನಿರ್ಮಾಣಕ್ಕೆ ಸಜ್ಜುಗೊಳ್ಳಬೇಕು ಎಂಬ ಸ್ವಾಮಿ ವಿವೇಕಾನಂದರ ಮಾತಿನಲ್ಲಿ ವಿಶ್ವಾಸ ಇರಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕರ್ನಾಟಕ ಕ್ರೀಡಾಕೂಟ, ರಾಷ್ಟ್ರ ಮಟ್ಟದ ಅಥ್ಲೆಟಿಕ್ ಯು-20 ಕ್ರೀಡಾಕೂಟ, ಅಂತಾರಾಷ್ಟ್ರೀಯ ಮಟ್ಟದ ಟೆನಿಸ್ ಕ್ರೀಡಾಕೂಟ, ಅಂತರ ಜಿಲ್ಲಾ ಮಟ್ಟದ ಫುಟ್‌ಬಾಲ್ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ ಎಂದರು.
ಕೊರಟಗೆರೆ ತಾಲ್ಲೂಕು ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮತ್ತು ವಿವಿಧ ಕ್ರೀಡಾ ಅಂಕಣಗಳ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಾಗಿದ್ದು, ಮಧುಗಿರಿ ತಾಲ್ಲೂಕಿನ ರಾಜೀವ್ ಗಾಂಧಿ ತಾಲ್ಲೂಕು ಕ್ರೀಡಾಂಗಣದಲ್ಲಿ ವಿವಿಧ ಕ್ರೀಡಾ ಅಂಕಣಗಳ ನಿರ್ಮಾಣ ಹಾಗೂ ಉನ್ನತೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ತಿಪಟೂರು ತಾಲ್ಲೂಕು ಕಲ್ಪತರು ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದ ವಾಣಿಜ್ಯ ಸಂಕೀರ್ಣದಲ್ಲಿ ಕ್ರೀಡೆಯನ್ನು ಉತ್ತೇಜಿಸುವ ಸಲುವಾಗಿ ರಾಜ್ಯದಲ್ಲೇ ಮೊದಲ ಶೂಟಿಂಗ್ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಮುಂದುವರೆದು, ಶಿರಾ ತಾಲ್ಲೂಕಿನ ವಿವೇಕಾನಂದ ತಾಲ್ಲೂಕು ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿರುತ್ತದೆ. ತುಮಕೂರಿನಲ್ಲಿ ಕ್ರೀಡಾಕೂಟವನ್ನು ಆಯೋಜನೆ ಮಾಡುವುದು ಮಾತ್ರವಲ್ಲದೇ ಬಾಕ್ಸಿಂಗ್ ಒಳಾಂಗಣ, ಶೂಟಿಂಗ್, ವಾಲಿಬಾಲ್, ಬಾಸ್ಕೆಟ್ ಬಾಲ್ ಹಾಗೂ ಟೆನಿಸ್ ಕ್ರೀಡಾ ಅಂಕಣ ಸೇರಿದಂತೆ ನೂತನ ಕ್ರೀಡಾ ಅಂಕಣಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.
ತುಮಕೂರು ಜಿಲ್ಲೆಯಲ್ಲಿ ಜೂನ್ ಮಾಹೆಯಿಂದ ಈವರೆಗೂ ವಾಡಿಕೆ ಮಳೆಗಿಂತ ಕಡಿಮೆ ಮಳೆಯಾಗಿದೆ. ಜೂನ್ ಮಾಹೆಯಲ್ಲಿ ಶೇ.20ರಷ್ಟು ಹಾಗೂ ಜುಲೈ ಮಾಹೆಯಲ್ಲಿ ಶೇ. 75ರಷ್ಟು ಮಳೆ ಕೊರತೆಯಾಗಿದ್ದು, ಸಮರ್ಪಕವಾಗಿ ಮಳೆಯಾಗದ ಕಾರಣ ಬೆಳೆಗಳು ರೈತರ ಕೈತಪ್ಪಿ ಹೋಗಿದೆ. ಹೀಗಾಗಿ ಜಿಲ್ಲೆಯಲ್ಲಿ ಬರದ ಛಾಯೆ ಎದುರಾಗಿದೆ. ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಬರಪರಿಸ್ಥಿತಿಯನ್ನು ಅವಲೋಕಿಸಲಾಗಿದ್ದು, ನಿರ್ವಹಣೆಯ ನೆರವು ಕೋರಿ ಈಗಾಗಲೇ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ವಿಸ್ತೃತ ವರದಿಯನ್ನು ಈ ತಿಂಗಳ ಒಳಗಾಗಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 3.11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಜಿಲ್ಲೆಯ 20,185 ರೈತರಿಗೆ 7,837 ಕ್ವಿಂಟಾಲ್ ಬಿತ್ತನೆ ಬೀಜವನ್ನು ವಿತರಿಸಲಾಗಿದೆ. ತೋಟಗಾರಿಕೆ ಬೆಳೆಯನ್ನು ಬೆಳೆಯುವ ರೈತರ ಸರ್ವತೋಮುಖ ಅಭಿವೃದ್ಧಿಗೆ 2025-26ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ, ಹನಿ ನೀರಾವರಿ, ರಾಷ್ಟ್ರೀಯ ತೋಟಗಾರಿಕೆ ಮಿಷನ್, ರಾಷ್ಟ್ರೀಯ ಕೃಷಿ ವಿಕಾಸ, ಜೇನು ಸಾಕಾಣಿಕೆ, ತೋಟಗಾರಿಕೆಯಲ್ಲಿ ಯಾಂತ್ರೀಕರಣ ಯೋಜನೆಗಳಡಿ 29 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 6,862 ಫಲಾನುಭವಿಗಳಿಗೆ ಸಹಾಯಧನ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಶಿಕ್ಷಣ, ಕ್ರೀಡೆ, ಸಂಸ್ಕೃತಿ, ಕೈಗಾರಿಕೆ, ಯುವಕರಿಗೆ ಉದ್ಯೋಗ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ಜನತೆ ಸರ್ಕಾರದೊಂದಿಗೆ ಕೈಜೋಡಿಸಬೇಕು. ಜಿಲ್ಲೆಯನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ನಿರ್ಮಾಣ ಮಾಡುವಲ್ಲಿ ಎಲ್ಲರ ಸಹಕಾರ ನಮ್ಮೊಂದಿಗಿರುತ್ತದೆ ಎಂದು ಆಶಿಸುತ್ತೇನೆ ಎಂದರು.





