ತುಮಕೂರು: ಪ್ರಸ್ತುತ ಸಂದರ್ಭದಲ್ಲಿ ತುಮಕೂರು ಅರಸೀಕೆರೆ ಮಾರ್ಗದಲ್ಲಿ ಪ್ರಯಾಣಿಸುವ ರೈಲು ಪ್ರಯಾಣಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವುಗಳ ನಿವಾರಣೆಗೆ ವೇದಿಕೆ ನಿರಂತರ ಶ್ರಮಿಸಲಿದೆ. ಈ ಭಾಗದ ಪ್ರಯಾಣಿಕರಿಗೆ ಇನ್ನೂ ಹೆಚ್ಚಿನ ಅನುಕೂಲಗಳು ದೊರೆಯಬೇಕಿದೆ ಎಂದು ವೇದಿಕೆ ಅಧ್ಯಕ್ಷ ಕರಣಂ ರಮೇಶ್ ತಿಳಿಸಿದರು.
ಭಾನುವಾರ ನಗರದಲ್ಲಿ ನಡೆದ ತುಮಕೂರು ಜಿಲ್ಲಾ ರೈಲು ಪ್ರಯಾಣಿಕರ ವೇದಿಕೆಯ ೧೨ನೇ ವಾರ್ಷಿಕ ಮಹಾ ಸಭೆ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗುಬ್ಬಿ, ನಿಟ್ಟೂರು, ಬಾಣಸಂದ್ರ, ತಿಪಟೂರು ಮತ್ತಿತರ ನಿಲ್ದಾಣಗಳಿಗೆ ತೆರಳುವ ಪ್ರಯಾಣಿಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಮಾನ್ಯ ರೈಲ್ವೇ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರ ಗಮನಕ್ಕೆ ತರಲಾಗಿದೆ. ಅಲ್ಲದೆ, ಬೆಂಗಳೂರು ಮತ್ತು ಮೈಸೂರು ವಿಭಾಗದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಬೆಳಗ್ಗೆ ೮ ಗಂಟೆಗೆ ತುಮಕೂರಿನಿಂದ ಯಶವಂತಪುರಕ್ಕೆ ಹೊರಡುತ್ತಿರುವ ಮೆಮು ರೈಲನ್ನು ಕೆಎಸ್‌ಆರ್‌ವರೆಗೆ ವಿಸ್ತರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಚಿವರಾದ ವಿ. ಸೋಮಣ್ಣ ಅವರಿಗೆ ಮತ್ತೊಮ್ಮೆ ಮನವಿ ಸಲ್ಲಿಸಲಾಗಿದೆ ಎಂದ ಅವರು, ನಿಟ್ಟೂರು ಬಾಣಸಂದ್ರದಲ್ಲಿ ಕೆಲವು ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಸಚಿವರಲ್ಲಿ ಮನವಿ ಮಾಡಲಾಗಿದೆ. ಅಲ್ಲದೆ ಬೆಂಗಳೂರು, ಮೈಸೂರು ವಿಭಾಗದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಿಲುಗಡೆ ಅಗತ್ಯವನ್ನು ಮನವರಿಕೆ ಮಾಡಲಾಗಿದೆ. ಈ ಬಗ್ಗೆ ಅಧಿಕಾರಿಗಳಿಂದ ಪೂರಕ ಸ್ಪಂದನೆ ದೊರೆತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಒತ್ತಾಯ ಮಾಡಲಾಗುವುದು ಎಂದು ತಿಳಿಸಿದರು.
ತುಮಕೂರಿನಿಂದ ಹಾಸನಕ್ಕೆ ನೇರ ರೈಲು ಸಂಪರ್ಕಕ್ಕೆ ಮನವಿ ಸಲ್ಲಿಸಲಾಗಿದೆ. ಸಂಜೆ ೫ ಗಂಟೆ ಸುಮಾರಿಗೆ ಒಂದು ಮೆಮು ರೈಲು ಸಂಚಾರಕ್ಕೆ ಸಮಯ ಬದಲಾವಣೆ ಮಾಡಬೇಕಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಗಿದೆ. ವೇದಿಕೆಯ ಮನವಿಗಳ ಪರಿಗಣೆಗೆ ಸಚಿವರು ರೈಲ್ವೇ ಮಂಡಳಿಗೆ ಕಳುಹಿಸಿರುವ ಬಗ್ಗೆ ಮಾಹಿತಿ ಇದೆ ಎಂದು ಕರಣಂ ರಮೇಶ್ ಸಭೆಗೆ ಮಾಹಿತಿ ನೀಡಿದರು.
ಕಾರ್ಯದರ್ಶಿ ಸಿ. ನಾಗರಾಜ್ ಕಳೆದ ಸಾಲಿನ ಚಟುವಟಿಕೆಗಳ ವಾರ್ಷಿಕ ವರದಿ ಓದಿದರು. ಲೆಕ್ಕ ಪರಿಶೋಧಕರಿಂದ ಅನುಮೋದಿಸಲ್ಪಟ್ಟ ಕಳೆದ ಸಾಲಿನ ಲೆಕ್ಕಪತ್ರಗಳನ್ನು ಖಜಾಂಚಿ ಆರ್. ಬಾಲಾಜಿ ಸಭೆಯಲ್ಲಿ ಮಂಡಿಸಿದರು. ಸಭೆ ಸರ್ವಾನುಮತದಿಂದ ಅನುಮೋದಿಸಿತು. ಹಿರಿಯ ಉಪಾಧ್ಯಕ್ಷ ಪರಮೇಶ್ ಸಿಂಧಗಿ ತುಮಕೂರು ಮೂಲಕ ಕಾರವಾರಕ್ಕೆ ರೈಲು ಸಂಪರ್ಕಕ್ಕೆ ಪ್ರಯತ್ನಿಸಬೇಕೆಂದು ಸಲಹೆ ನೀಡಿದರು. ಸಭೆಯಲ್ಲಿ ಭಾಗವಹಿಸಿದ್ದ ನಿಕಟ ಪೂರ್ವ ಅಧ್ಯಕ್ಷೆ ಬಾ.ಹ. ರಮಾಕುಮಾರಿ ಸೇರಿದಂತೆ ಎಲ್ಲ ಸದಸ್ಯರು ವೇದಿಕೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಸಲಹೆ ನೀಡಿದರು. ಸಭೆ ಆರಂಭದಲ್ಲಿ ಕಳೆದ ಸಾಲಿನಲ್ಲಿ ಮೃತರಾದ ಕುಟುಂಬದ ಸದಸ್ಯರ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು.
ಜಂಟಿ ಕಾರ್ಯದರ್ಶಿ ರಾಮಾಂಜನೇಯ ಪ್ರಾರ್ಥಿಸಿದರು. ಜಂಟಿ ಕಾರ್ಯದರ್ಶಿ ರವಿಶಂಕರ್ ವಂದಿಸಿದರು. ವೇದಿಕೆಯ ಎಲ್ಲ ಸದಸ್ಯರು ಮತ್ತು ಅವರ ಕುಟುಂಬದವರು ಸಭೆಯಲ್ಲಿ ಭಾಗವಹಿಸಿದ್ದರು.
(Visited 1 times, 1 visits today)





