ತುಮಕೂರು: ಗ್ರಾಮ ಪಂಚಾಯ್ತಿ ಸಿಬ್ಬಂದಿಗಳಿಗೆ ಕಾರ್ಮಿಕ ಇಲಾಖೆ ಹೊರಡಿಸಿರುವ ಕನಿಷ್ಠ ವೇತನ ಹೆಚ್ಚಳ ಮುಂದುವರೆಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ಪಂಚ ನೌಕರರ ಸಮಿತಿಯು ಅ. ೧೨ ರಿಂದ ಬೆಂಗಳೂರು ಚಲೋ ಪಾದಯಾತ್ರೆಯನ್ನು ನಗರದ ಸಿದ್ದಗಂಗಾ ಮಠದಿಂದ ಹಮ್ಮಿಕೊಂಡಿದೆ.
ಹಗಲಿರುಳು ಶ್ರಮ ವಹಿಸಿ ಕೆಲಸ ಮಾಡುವ ಗ್ರಾ.ಪಂ. ನೌಕರರ ಬಗ್ಗೆ ಸರ್ಕಾರ ತಾಳಿರುವ ನಿರ್ಲಕ್ಷ÷್ಯ ಧೋರಣೆಯನ್ನು ಖಂಡಿಸಿ ಹಾಗೂ ನಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾಯಕ ಯೋಗಿ, ನಡೆದಾಡುವ ದೇವರು ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಮೆಟ್ಟಿದ ಸಿದ್ದಗಂಗಾ ಮಠದ ನೆಲದಿಂದ ಪಾದಯಾತ್ರೆ ಮೂಲಕ ಬೆಂಗಳೂರು ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ನೌಕರರ ರಾಜ್ಯಾಧ್ಯಕ್ಷ ಹಾಗೂ ಪಂಚ ನೌಕರರ ಸಮಿತಿಯ ರಾಜ್ಯಾಧ್ಯಕ್ಷ ಭೀಮರೆಡ್ಡಿ ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಗ್ರಾಮ ಪಂಚಾಯ್ತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಂಚ ನೌಕರರಾದ ಕರ ವಸೂಲಿಗಾರ, ಕ್ಲಕ್ ಕಂ ಡಾಟಾ ಎಂಟ್ರಿ ಆಪರೇಟರ್, ನೀರುಗಂಟಿ, ಜವಾನ ಮತ್ತು ಸ್ವಚ್ಛಚಗಾರರು ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಜನರ ದೈನಂದಿನ ಮೂಲಸೌಕರ್ಯ, ಕುಡಿಯುವ ನೀರು, ಸ್ವಚ್ಛತೆ ಹಾಗೂ ಪಂಚಾಯ್ತಿ ಆಡಳಿತವನ್ನು ಹಗಲಿರುಳು ಶ್ರಮಿಸುತ್ತಾ ಮುನ್ನಡೆಸುತ್ತಿರುವ ಗ್ರಾ.ಪಂ. ನೌಕರರ ಬದುಕು ಸಂಕಷ್ಟದಲ್ಲಿದೆ ಎಂದು ಅವರು ಹೇಳಿದರು.
ಕಾರ್ಮಿಕ ಇಲಾಖೆಯ ಹೊರಡಿಸಿರುವ ಆದೇಶ ಮುಂದುವರೆಸಬೇಕು, ವೇತನ ಜಾರಿ ಮಾಡಬೇಕು. ಮಾತೃ ಇಲಾಖೆಯಿಂದಲೇ ಪ್ರತಿ ವರ್ಷ ವೇತನ ಪರಿಷ್ಕರಣೆ ಮಾಡಲು ಹಾಗೂ ವೇತನ ಶ್ರೇಣಿ ನಿಗದಿಪಡಿಸಲು ಸಮಿತಿ ರಚಿಸಬೇಕು. ಸೇವಾ ಹಿರಿತನ ವೇತನ ಮತ್ತು ವೇತನ ಹೆಚ್ಚಳದ ಆದೇಶ ಜಾರಿಗೊಳಿಸಬೇಕು. ಎಲ್ಲಾ ಗ್ರಾ.ಪಂ.ಗಳಿಗೆ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ಮಂಜೂರು ಮಾಡಬೇಕು ಎಂದು ಅವರು ಆಗ್ರಹಿಸಿದರು.
ಗ್ರೇಡ್-೧ ಗ್ರಾಮ ಪಂಚಾಯ್ತಿಗೂ ಪ್ರಥಮ ದರ್ಜೆ ಲೆಕ್ಕ ಸಹಾಯಕ ಹುದ್ದೆ ಸೃಜನೆ ಮಾಡಬೇಕು. ಗ್ರಾ.ಪಂ.ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಂಚ ವೃಂದ ನೌಕರರಿಗೆ ಸರ್ಕಾರದಿಂದ ನೇರ ವೇತನ ಇಲಾಖೆಯಿಂದಲೇ ಜಾರಿ ಮಾಡಬೇಕು ಹಾಗೂ ಇಎಸ್ಐ ಮತ್ತು ಪಿಎಫ್ ಸರ್ಕಾರದಿಂದ ಜಾರಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಕರ ವಸೂಲಿಗಾರರ ನೌಕರರ ರಾಜ್ಯಾಧ್ಯಕ್ಷ ಹಾಗೂ ಪಂಚ ನೌಕರರ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾರಾಯಣ್ ಮಾತನಾಡಿ, ಮಾತನಾಡಿ, ಸರ್ಕಾರ ವಿಧಾನಸೌಧದದಂತೆಯೇ ಸ್ಥಳೀಯ ಮಟ್ಟದಲ್ಲಿ ಜಿ.ಪಂ., ತಾ.ಪಂ. ಹಾಗೂ ಗ್ರಾಮ ಪಂಚಾಯ್ತಿ. ಇವು ರಾಜ್ಯಮಟ್ಟಕ್ಕೆ ಅವಿಭಾಜ್ಯ ಅಂಗ. ಗ್ರಾಮೀಣ ಜನರಿಗೆ,. ಬಡವರಿಗೆ ಸವಲತ್ತು ತಲುಪಿಸುವ ಕೆಲಸ ಮಾಡುವವರು ಗ್ರಾಮ ಪಂಚಾಯ್ತಿ ನೌಕರರು.
ರಾಜ್ಯ ಸರ್ಕಾರ ೩೧ ಸಚಿವರ ಆದೇಶವನ್ನು ಯಾರು ಪಾಲನೆ ಮಾಡುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ. ಆದರೆ ತಳಮಟ್ಟದ ಗ್ರಾಮ ಪಂಚಾಯ್ತಿ ನೌಕರರು ಪಾಲಿಸುತ್ತಾ ಕಾರ್ಯನಿರ್ವಹಿಸುತ್ತಾರೆ. ಗ್ರಾಮೀಣ ಭಾಗದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಾರೆ. ಕುಡಿಯುವ ನೀರು ಪೂರೈಸುವ ಕೆಲಸವನ್ನು ನೀರಗಂಟಿಗಳು ಪ್ರತಿನಿತ್ಯ ಮಾಡುತ್ತಾರೆ. ಕಚೇರಿಯಲ್ಲಿ ಅಧಿಕಾರಿಗಳು ಆದೇಶಿಸದ ಕೆಲಸವನ್ನು ಅಟೆಂಡರ್ ಮಾಡುತ್ತಾರೆ. ಹಾಗೆಯೇ ಇ-ಸ್ವತ್ತು ಕೆಲಸ ಕಾರ್ಯಗಳನ್ನು ಡಾಟಾ ಎಂಟ್ರಿ ಆಪರೇಟರ್ಗಳು ನಿರ್ವಹಿಸುತ್ತಾರೆ. ಹಾಗಾಗಿ ಈ ನೌಕರರ ಬಗ್ಗೆ ಸರ್ಕಾರದ ನಿರ್ಲಕ್ಷ÷್ಯ ಸಲ್ಲದು. ಸರ್ಕಾರಗಳ ನಿರ್ಲಕ್ಷ÷್ಯವನ್ನು ಖಂಡಿಸಿ ಈ ಹೋರಾಟ ಅನಿವಾರ್ಯವಾಗಿದೆ ಎಂದರು.
ಹೋರಾಟದಲ್ಲಿ ಸುಮಾರು ೩೫ ಸಾವಿರಕ್ಕೂ ಅಧಿಕ ಮಂದಿ ಗ್ರಾಮ ಪಂಚಾಯ್ತಿ ನೌಕರರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಸರ್ಕಾರ ಗ್ರಾ.ಪಂ. ನೌಕರರಿಗೆ ಮಾಡಿದ್ದ ವೇತನ ಪರಿಷ್ಕರಣೆಯನ್ನು ಹಿಂಪಡೆದಿದೆ. ಹಾಗಾಗಿ ಈ ದಿಟ್ಟ ಹೋರಾಟವನ್ನು ಶ್ರೀಗಳ ಆಶೀರ್ವಾದದೊಂದಿಗೆ ಆರಂಭಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ನಮ್ಮ ಈ ಹೋರಾಟಕ್ಕೆ ಸರ್ಕಾರ ಮನ್ನಣೆ ನೀಡದಿದ್ದರೆ ಅ. ೧೪, ೧೫ ಹಾಗೂ ೧೬ ರಂದು ಗ್ರಾ.ಪಂ. ನೌಕರರ ಕುಟುಂಬವರ್ಗದವರ ಜತೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿರ್ಧಿಷ್ಠಾವಧಿ ಮುಷ್ಕರ ನಡೆಸಲಾಗುವುದು ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ನೀರಘಂಟಿ ಸಂಘದ ರಾಜ್ಯಾಧ್ಯಕ್ಷ ಹಾಗೂ ಪಂಚ ಸಮಿತಿಯ ಸದಸ್ಯ ರಾಮಕೃಷ್ಣಪ್ಪ, ಜವಾನರ ಸಂಘದ ರಾಜಶೇಖರ್, ಸ್ವಚ್ಛತಾಗಾರ ಸಂಘದ ನಿತಿನ್, ಗೋವಿಂದಪ್ಪ, ರವಿಕುಮಾರ್, ರಂಗನಾಥ್, ಜಗದೀಶ್, ಬಸವರಾಜೇಗೌಡ, ನಟರಾಜ್, ರಂಗಪ್ಪ, ಮಂಜುನಾಥ್, ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.
(Visited 1 times, 1 visits today)





