ಹುಳಿಯಾರು: ಹುಳಿಯಾರು ಪಟ್ಟಣದಲ್ಲಿ ಸೋಮವಾರ ಮಧ್ಯಹ್ನಾ ಸುರಿದ ಭಾರಿ ಮಳೆಗೆ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಆಡಳಿತ ನಿರ್ಲಕ್ಷ÷್ಯ ಮತ್ತೊಮ್ಮೆ ಬಹಿರಂಗಗೊAಡಿದೆ. ಮಾರುತಿ ನಗರದಲ್ಲಿ ಚರಂಡಿಗಳು ಸಮರ್ಪಕವಾಗಿ ನಿರ್ವಹಣೆಯಾಗದೆ, ಹೂಳು ತುಂಬಿ ತುಳುಕುತ್ತಿರುವ ಪರಿಣಾಮ ಸುರಿದ ಭಾರಿ ಮಳೆಗೆ ಹಲವು ನಿವಾಸಿಗಳ ಮನೆಗಳಿಗೆ ಚರಂಡಿಯ ಕಲುಷಿತ ನೀರು ನುಗ್ಗಿ ಅಪಾರ ಪ್ರಮಾಣದ ತೊಂದರೆ ಉಂಟಾಗಿದೆ.
ಸ್ಥಳೀಯರ ಆರೋಪದಂತೆ, ತಿಂಗಳುಗಳಿAದ ಚರಂಡಿಗಳನ್ನು ಸ್ವಚ್ಛಗೊಳಿಸದೆ ಇರುವುದರಿಂದ ಪ್ಲಾಸ್ಟಿಕ್ ತ್ಯಾಜ್ಯ, ಕಸ ಹಾಗೂ ಹೂಳು ತುಂಬಿಕೊAಡು ಚರಂಡಿಗಳು ಮುಚ್ಚಿ ಹೋಗಿವೆ. ಇದರ ಫಲವಾಗಿ ಮಳೆ ಬಂದ ಕೂಡಲೇ ಚರಂಡಿ ನೀರು ರಸ್ತೆಯ ಮೇಲೆ ಹರಿದು, ಜನರ ಮನೆಗಳ ಅಂಗಳ ಹಾಗೂ ಒಳಗೆ ನುಗ್ಗುತ್ತಿದೆ. ರಸ್ತೆಯುದ್ದಕ್ಕೂ ಕಸ-ತ್ಯಾಜ್ಯಗಳು ಹರಡಿಕೊಂಡಿದ್ದು, ತೀವ್ರವಾದ ದುರ್ನಾತ ಬೀರುತ್ತಿದೆ. ಇದರಿಂದ ಸ್ಥಳೀಯ ನಿವಾಸಿಗಳು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಿಂತ ನೀರು ಹಾಗೂ ಕೊಳೆತ ತ್ಯಾಜ್ಯದಿಂದಾಗಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಗಂಭೀರ ಆತಂಕ ಎದುರಾಗಿದೆ. ವೃದ್ಧರು ಮತ್ತು ಚಿಕ್ಕ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವ ಅಪಾಯವಿದ್ದು, ಪಟ್ಟಣ ಪಂಚಾಯಿತಿ ಆಡಳಿತ ಕೂಡಲೇ ಎಚ್ಚೆತ್ತುಕೊಳ್ಳಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ.
ಸ್ಥಳೀಯ ಆಡಳಿತ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಬೇಜವಾಬ್ದಾರಿತನವೇ ಈ ದುಸ್ಥಿತಿಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೂಳೆತ್ತುವ ಹಾಗೂ ಸ್ವಚ್ಛತಾ ಕಾರ್ಯಗಳನ್ನು ನಿಯಮಿತವಾಗಿ ಕೈಗೊಳ್ಳಬೇಕಾದ ಸಿಬ್ಬಂದಿ ಕೇವಲ ಕಾಗದದ ಮೇಲೆ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ತಹಶೀಲ್ದಾರರು ಹಾಗೂ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೂಡಲೇ ಚರಂಡಿ ಸ್ವಚ್ಛಗೊಳಿಸಿ ಹೂಳೆತ್ತಲು ಸಂಬAಧಪಟ್ಟ ನೌಕರರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ಜೊತೆಗೆ ಶಾಶ್ವತ ಪರಿಹಾರಕ್ಕಾಗಿ ಒಳಚರಂಡಿ ವ್ಯವಸ್ಥೆಯನ್ನು ಸುಧಾರಿಸಲು ಮುಂದಾಗಬೇಕು ಎಂದು ಮಾರುತಿ ನಗರದ ನಿವಾಸಿಗಳು ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ.
(Visited 1 times, 1 visits today)





