ತುಮಕೂರು: 

ನನ್ನ ಮೇಲಿನ ದ್ವೇಷಕ್ಕೆ ಗೂಳೂರು- ಹೆಬ್ಬೂರು ಏತ ನೀರಾವರಿ ಯೋಜನೆಯಡಿ ಕೆರೆಗಳಿಗೆ ನೀರ ಬಿಡಿಸಲಿಲ್ಲ. ಒಣಗಿ ಹೋಗಿರುವ ಕೆರೆಗಳನ್ನು ನೋಡಿದರೆ ಕರುಳು ಹಿಂಡಿ ಬರುತ್ತದೆ ಎಂದು ಮಾಜಿ ಶಾಸಕ ಬಿ.ಸುರೇಶಗೌಡರು ಹೇಳಿದರು.
ತಾಲ್ಲೂಕಿನ ಸೀನಪ್ಪನಹಳ್ಳಿಯಲ್ಲಿ ಶುಕ್ರವಾರ ತಡರಾತ್ರಿ ನಡೆದ ದೊಡ್ಡಮ್ಮ, ಚಿಕ್ಕಮ್ಮ  ದೇವತೆಯರ ಗ್ರಾಮ ಹಬ್ಬದಲ್ಲಿ ಮಾತನಾಡಿದರು.
ನಾನು ಶಾಸಕನಾಗಿದ್ದಾಗ ಸರಿ ಇದ್ದ ಯೋಜನೆ ನಾನು ಮಾಜಿ ಆಗುತ್ತಿದ್ದಂತೆ ಅವೈಜ್ಞಾನಿಕ ವಾಯಿತೇ? ಪಕ್ಕದ ತುರುವೇಕೆರೆ ಶಾಸಕ ಮಸಾಲ ಜಯರಾಮ್ ಅವರು ಸಚಿವ ಮಾಧುಸ್ವಾಮಿ ಅವರನ್ನು ಹೊಗಳುತ್ತಾ ಇಪ್ಪತ್ತು ವರ್ಷಗಳಿಂದ ತುಂಬದ ಸಿ.ಎಸ್.ಪುರ ಕೆರೆಗೆ ಹೇಮಾವತಿ ನೀರಿನಿಂದ ತುಂಬಿಸಿದರು. ಅದೇ ಇಲ್ಲಿನ ಶಾಸಕರು ಮಾಧುಸ್ವಾಮಿಯನ್ನು ಹೊಗಳುತ್ತಾ ಕ್ಷೇತ್ರಕ್ಕೆ ನೀರು ಹರಿಯದಂತೆ ನೋಡಿಕೊಂಡರು. ನನ್ನ ಮೇಲಿನ ದ್ವೇಷಕ್ಕೆ ರೈತರನ್ನು ಬಲಿಪಶು ಮಾಡಬಾರದಿತ್ತು. ಇಂತ ಕೆಟ್ಟ ರಾಜಕಾರಣದಿಂದ ನಾಡು ಕಟ್ಟಲು ಸಾಧ್ಯವಿಲ್ಲ ಎಂದು ಶಾಸಕ ಗೌರಿಶಂಕರ್ ವಿರುದ್ಧ ಹರಿಹಾಯ್ದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಯೋಜನೆ ಮಾಡುವಂತೆ ಮನವಿ ಮಾಡಿದ್ದೆ. ಅವರು ಮಾಡಲಿಲ್ಲ. ನಂತರ ಯಡಿಯೂರಪ್ಪ ಮಾಡಿದರು. ಮತ್ತೇ ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ವೃಷಭಾವತಿ ನದಿ ನೀರಿನ ಯೋಜನೆ ಮಾಡುವಂತೆ ಗೋಗರದೆ. ಆದರೆ ಅವರು ಗಮನ ಕೊಡಲಿಲ್ಲ. ಕುಮಾರಸ್ವಾಮಿ ನಂತರ ಯಡಿಯೂರಪ್ಪ ಮುಖ್ಯಮಂತ್ರಿ ಯಾಗುತ್ತಿದ್ದಂತೆ   ವೃಷಭಾವತಿ ನದಿ ನೀರಿನ ಯೋಜನೆಗೆ ಅನುಮೋದನೆ ನೀಡಿದರು. ಈಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅನುದಾನ ನೀಡಿದ್ದಾರೆ. ಮೂರು ತಿಂಗಳಲ್ಲಿ ಯೋಜನೆಗೆ ಅಡಿಗಲ್ಲು ಹಾಕಿಸುವೆ ಎಂದರು.
ಶಿಕ್ಷಣ ವ್ಯವಸ್ಥೆ ಗೆ ಒತ್ತು ನೀಡಿದೆ. ಹಳ್ಳಿಗೇಕೆ ವಿಶ್ವವಿದ್ಯಾಲಯ ಎಂದು ತಡೆ ಹಾಕಿದರೂ ಛಲ ಬಿಡದೇ ತುಮಕೂರು ವಿಶ್ವವಿದ್ಯಾಲಯವನ್ನು ಮಂಜೂರು ಮಾಡಿಸಿದೆ. ಕೆಲವೇ ದಿನಗಳಲ್ಲಿ ವಿ.ವಿ. ಇಲ್ಲಿ ಕಾರ್ಯಾರಂಭ ಮಾಡಲಿದೆ. ಸರ್ಕಾರ ಮತ್ತೇ ಹತ್ತು ಕೋಟಿ ಮಂಜೂರು ಮಾಡಿದೆ ಎಂದರು.
ಕೊರೊನಾದಲ್ಲೂ ಇಲ್ಲಿನ ಶಾಸಕರು ರಾಜಕೀಯ ಮಾಡಿದರು. ಸಾಮಾಜಿಕ ಕಾರ್ಯಕರ್ತರೊಬ್ಬರು ನಕಲಿ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಶಾಸಕರ ಮೇಲೆ ದೂರು ನೀಡಿದ್ದಾರೆ. ತನಿಖೆಗೆ ಹೈ ಪವರ್ ಕಮಿಟಿಯನ್ನು ಸರ್ಕಾರ ರಚಿಸಿದೆ. ನಕಲಿ ಲಸಿಕೆ ನಿಜವಾದ್ದಲ್ಲಿ ಲಸಿಕೆ ಹಾಕಿಸಿಕೊಂಡವರಿಗೆ ಒಂದು ಕೋಟಿ ಪರಿಹಾರ ನೀಡುವಂತೆ ಹೋರಾಟ ಆರಂಭಿಸುವೆ ಎಂದರು.

ರಾಜಕಾರಣ ಇರುವುದು ಜನರ ಸೇವೆಗೆ ಹೊರತು ಜನರನ್ನು ಯಾಮಾರಿಸಿ ಮೋಸ ಮಾಡುವುದಕ್ಕಲ್ಲ. ವೈ.ಕೆ.ರಾಮಯ್ಯ, ಮೂಡ್ಲಗಿರಿಗೌಡ, ಮುದ್ದಹನುಮೇಗೌಡ,ನಿಂಗಪ್ಪ ಇಂಥವರೆಲ್ಲ ಇಲ್ಲಿ ತಮ್ಮತನ ಉಳಿಸಿ ಹೋಗಿದ್ದಾರೆ. ನೀಚ ರಾಜಕಾರಣವನ್ನು ಕ್ಷೇತ್ರದ ಜನರು ಕ್ಷಮಿಸುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಎಪಿಎಂ ಸಿ ಅಧ್ಯಕ್ಷ ಉಮೇಶ್ ಗೌಡ, ಮುಖಂಡರಾದ ವೈ.ಟಿ.ನಾಗರಾಜ್, ಗೂಳೂರು ಶಿವಕುಮಾರ್, ಸಿದ್ದೇಗೌಡ,ಶಂಕರ್ ಡಿ.ಎನ್ ನರಸಿಂಹಮೂರ್ತಿ, ಇತರರು ಇದ್ದರು.
(Visited 21 times, 1 visits today)
				
		
		
		
	
									 
					



