ತುಮಕೂರು


ಹದಿನೆಂಟರಿಂದ ಅರವತ್ತು ವರ್ಷದೊಳಗಿರುವವರಿಗೆ ಸೆಪ್ಟೆಂಬರ್ 30, 2022ರವರೆಗೆ ಉಚಿತ ಕೋವಿಡ್ ಮುನ್ನೆಚ್ಚರಿಕೆ ಲಸಿಕೆಯನ್ನು ನೀಡಲಾಗುತ್ತಿದ್ದು, ಸಾರ್ವಜನಿಕರು ಈ ಅವಧಿಯೊಳಗಾಗಿ ತಮ್ಮ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ/ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ತಪ್ಪದೆ ಮುನ್ನೆಚ್ಚರಿಕೆ ಲಸಿಕೆ ಹಾಕಿಸಿಕೊಳ್ಳುವಂತೆ ಅಧಿಕಾರಿಗಳು ತಮ್ಮ ಆಡಳಿತ ವ್ಯಾಪ್ತಿಯಲ್ಲಿ ವ್ಯಾಪಕ ಪ್ರಚಾರ ಮಾಡುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.
ತಮ್ಮ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿಂದು ನಡೆದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಜಿಲ್ಲಾ/ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಆರೋಗ್ಯ ಇಲಾಖೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ 75 ದಿನಗಳ ಮುಂಜಾಗ್ರತಾ ಲಸಿಕಾ ಮೇಳ ಆಯೋಜಿಸಿದ್ದು, ಆಯಾ ತಾಲ್ಲೂಕು ತಹಶೀಲ್ದಾರ್‍ಗಳು, ಆರೋಗ್ಯಾಧಿಕಾರಿಗಳು, ಪಿಡಿಓಗಳು, ಗ್ರಾಮ ಸಹಾಯಕರು ಉಚಿತ ಮುನ್ನೆಚ್ಚರಿಕೆ ಡೋಸ್ ಕುರಿತಂತೆ ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಆಯುμÁ್ಮನ್ ಭಾರತ್ ಹೆಲ್ತ್ ಅಕೌಂಟ್(ಆಭಾ) ಕಾರ್ಡ್ ಮೂಲಕ ನಾಗರೀಕರು ಉಚಿತ ಆರೋಗ್ಯ ಸೇವೆಗಳನ್ನು ಪಡೆಯಲು ಅನುಕೂಲವಾಗುವಂತೆ ಕಾರ್ಡ್ ವಿತರಣೆ ವೇಗ ಪಡೆದುಕೊಳ್ಳಬೇಕು. ಒಂದು ವಾರದೊಳಗೆ ಗರಿಷ್ಠ ಒಂದು ಲಕ್ಷ ಆಭಾ ಕಾರ್ಡುಗಳನ್ನು ನೀಡಲು ತ್ವರಿತಗತಿಯಲ್ಲಿ ಕ್ರಮ ವಹಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚಿಸಿದರು.
ಕೋವಿಡ್-19ಗೆ ಸಂಬಂಧಿಸಿದಂತೆ ನಿಗಧಿಪಡಿಸಿರುವ ಗುರಿಯಷ್ಟು ಗಂಟಲು ದ್ರವ ಸಂಗ್ರಹಣೆ ಮಾಡಬೇಕು, ಶಿರಾ, ತಿಪಟೂರು ನಗರಗಳಲ್ಲಿ ಈ ಪ್ರಮಾಣ ತುಸು ಹೆಚ್ಚಿಸಬೇಕು. 12-17 ವಯೋಮಾನದ ಮಕ್ಕಳ ಲಸಿಕಾಕರಣ ಶೇ 100ರಷ್ಟು ಗುರಿ ತಲುಪಬೇಕು ಎಂದು ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.
ಸೆಪ್ಟೆಂಬರ್ 17 ರಿಂದ ಆಕ್ಟೋಬರ್ 2ರವರೆಗೆ ಆರೋಗ್ಯ ಕರ್ನಾಟಕ ಅಭಿಯಾನ ನಡೆಯುತ್ತಲಿದ್ದು, ಈ ಅಭಿಯಾನದ ಅಂಗವಾಗಿ ಜಿಲ್ಲೆಯ 1300 ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರವನ್ನು 6 ತಿಂಗಳವರೆಗೆ ನೀಡಬೇಕಿದ್ದು, ಈ ನಿಟ್ಟಿನಲ್ಲಿ ಆಸಕ್ತರು ರೋಗಿಗಳಿಗೆ 6 ತಿಂಗಳ ಕಾಲ ಪೌಷ್ಟಿಕ ಆಹಾರ ನೀಡುವ ಅಭಿಯಾನದಲ್ಲಿ ಭಾಗವಹಿಸಿ, ರೋಗಿಗಳಿಗೆ ಬೇಕಾಗಿರುವ ಪೂರಕ ಆಹಾರ ನೀಡಬಹುದಾಗಿದೆ ಎಂದು ಜಿಲ್ಲಾ ಟಿಬಿ ನಿಯಂತ್ರಣಾಧಿಕಾರಿ ಡಾ|| ಸನತ್ ಕುಮಾರ್ ಅವರು ಸಭೆಯ ಮುಂದಿಟ್ಟಾಗ ಜಿಲ್ಲಾಧಿಕಾರಿಗಳು, ಅಭಿಯಾನದ ಯಶಸ್ಸಿಗೆ ಹಾರೈಸಿ ಜಿಲ್ಲಾಡಳಿತದ ವತಿಯಿಂದಲೂ ಸೂಕ್ತ ನೆರವು ನೀಡುವುದಾಗಿ ಭರವಸೆ ನೀಡಿದರು.
ಕಂದಾಯ ಇಲಾಖೆಯ ರೆಕಾರ್ಡ್ ರೂಮ್‍ನಲ್ಲಿ ಎಬಿಸಿಡಿಇ ಕೆಟಗೆರಿವಾರು ದಾಖಲೆಗಳನ್ನು ಡಿಜಿಟಲೀಕರಣ ಮಾಡಬೇಕು. ಈ ಮೂಲಕ ದಾಖಲೆಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ 3 ತಿಂಗಳೊಳಗೆ ದಾಖಲಿಕರಣವಾಗಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಒದಗಿಸಲಾಗಿರುವ ಅನುದಾನ ನಿಗಧಿತ ಅವಧಿಯೊಳಗೆ ಖರ್ಚು ಮಾಡಬೇಕು. ಇಲ್ಲವಾದರೇ ತಪ್ಪಿತಸ್ತರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ವಿ ಅಜಯ್, ಡಿಡಿಎಲ್‍ಆರ್ ಸುಜಯ್ ಕುಮಾರ್, ಡಿ ಹೆಚ್‍ಓ ಡಾ.ಎನ್.ಮಂಜುನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ವೀಣಾ, ತಹಶೀಲ್ದಾರ್ ಮೋಹನ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

(Visited 1 times, 1 visits today)