
ತುಮಕೂರು: ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿಕೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಜೆಡಿಎಸ್ ಮುಖಂಡರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಭಾರತ ಸಂವಿಧಾನ ಸೂರ್ಯ ಇದ್ದಂತೆ ಅದರಿಂದ ಬೆಳಕು ಪಡೆಯಬಹುದಷ್ಟೇ ಮುಟ್ಟಲು ಸಾಧ್ಯವಿಲ್ಲ ಎಂದು ಮುಖಂಡರು ಎಚ್ಚರಿಕೆ ನೀಡಿದರು.
ಜಿಲ್ಲಾ ಜೆಡಿಎಸ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಆಗಮಿಸಿದ ಮುಖಂಡರು ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಉಪಮುಖ್ಯಮಂತ್ರಿ ಹೇಳಿರುವುದು ಖಂಡನೀಯ, ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಸಾಂವಿಧಾನಿಕ ಹುದ್ದೆಯಲ್ಲಿರುವ ಡಿ.ಕೆ.ಶಿವಕುಮಾರ್ ಇಂತಹ ಬಾಲಿಶ ಹೇಳಿಕೆ ನೀಡಿರುವುದು ಖಂಡನೀಯ ಎಂದರು.
ಭಾರತ್ ಜೋಡೋ ಯಾತ್ರೆ ಮಾಡಿ ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದುಕೊಂಡು ಪ್ರದರ್ಶನ ಮಾಡಿದ ಕಾಂಗ್ರೆಸ್ ನಾಯಕರ ಉದ್ದೇಶ ಸಂವಿಧಾನ ರಕ್ಷಣೆಗೋ ಅಥವಾ ದುರ್ಬಲಗೊಳಿಸಲೊ ಎಂದು ಹೇಳಬೇಕು. ದೇಶದ ಎಲ್ಲರೂ ಗೌರವಿಸುವ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಕಾಂಗ್ರೆಸ್ ನಾಯಕರು ಅಪಮಾನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿAದ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ದಿನಬಳಕೆ ಪದಾರ್ಥಗಳ ಬೆಲೆ ಹೆಚ್ಚಾಗಿ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಸ್ಮಾರ್ಟ್ ಮೀಟರ್ ಟೆಂಡರ್‌ನಲ್ಲಿ ಇಂಧನ ಸಚಿವ ಜಾರ್ಜ್ ಮೇಲೆ ೧೫ ಸಾವಿರ ಕೋಟಿ ರೂ.ಗಳ ಹಗರಣದ ಆರೋಪ ಕೇಳಿ ಬಂದಿದೆ ಎಂದು ಆರ್.ಸಿ.ಆಂಜನಪ್ಪ ಆರೋಪಿಸಿದರು.
ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದಾಗಿನಿAದ ದಲಿತರಿಗೆ ಅನ್ಯಾಯವಾಗುತ್ತಲೇ ಇದೆ. ಪರಿಶಿಷ್ಟರ ಹಣ ದುರ್ಬಳಕೆ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅನುದಾನ ದುರುಪಯೋಗ ಮಾಡಿಕೊಂಡಿರುವ ಕಾಂಗ್ರೆಸ್ ನಾಯಕರು ಈ ಸಮುದಾಯಗಳಿಗೆ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. ಈಗ ಸಂವಿಧಾನ ಬದಲಾವಣೆ ಬಗ್ಗೆ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿರುವುದು ಸಹಿಸಲಾಗುವುದಿಲ್ಲ, ಡಿ.ಕೆ.ಶಿವಕುಮಾರ್ ತಮ್ಮ ಹೇಳಿಕೆ ವಾಪಸ್ ಪಡೆದು ರಾಜ್ಯದ ಜನರ ಕ್ಷಮೆ ಕೇಳಬೇಕು ಇಲ್ಲವೇ ಉಪಮುಖ್ಯ ಮಂತ್ರಿಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಎಸ್.ಟಿ. ಘಟಕದ ಉಪಾಧ್ಯಕ್ಷ ಸೋಲಾರ್ ಕೃಷ್ಣಮೂರ್ತಿ ಮಾತನಾಡಿ, ಪ್ರಪಂಚವೇ ಮೆಚ್ಚಿರುವ ಭಾರತ ಸಂವಿಧಾನವನ್ನು ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಸಂವಿಧಾನ ಸೂರ್ಯ ಇದ್ದಂತೆ ಅದರ ಬೆಳಕಿನಲ್ಲಿ ನಾವು ಬದುಕು ಕಾಣಬೇಕು, ಅದನ್ನು ಯಾರಾದರೂ ಮುಟ್ಟುವ ಪ್ರಯತ್ನ ಮಾಡಿದರೆ ಸುಟ್ಟುಹೋಗುತ್ತಾರೆ. ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿಕೆ ನೀಡಿರುವ ಡಿ.ಕೆ.ಶಿವಕುಮಾರ್ ಅವರು ನಮ್ಮ ಪವಿತ್ರ ಸಂವಿಧಾನಕ್ಕೆ ಮಾಡಿರುವ ದ್ರೋಹ ಎಂದರು.
ಎಸ್.ಸಿ. ಘಟಕ ಜಿಲ್ಲಾಧ್ಯಕ್ಷ ಎಸ್.ಡಿ.ಕೃಷ್ಣಪ್ಪ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಬಂದಾಗಿನಿAದ ಪರಿಶಿಷ್ಟಜಾತಿ, ವರ್ಗಗಳಿಗೆ ಅನ್ಯಾಯ ಆಗುತ್ತಲೇ ಇದೆ, ಈ ವರ್ಗಗಳಿಗೆ ಮೀಸಲಾದ ಅನುದಾನವನ್ನು ಸರ್ಕಾರ ಅನ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿದೆ. ಈಗ ಸಂವಿಧಾನ ಬದಲಾವಣೆಯ ಮಾತುಗಳನ್ನಾಡಿದ್ದಾರೆ. ಅದು ಸಾಧ್ಯವಿಲ್ಲ, ರಾಜ್ಯದ ಜನ ಕಾಂಗ್ರೆಸ್ ನಾಯಕರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ವಕೀಲರ ಘಟಕ ಜಿಲ್ಲಾಧ್ಯಕ್ಷ ಗೋವಿಂದರಾಜು, ಮುಖಂಡರಾದ ಸೊಗಡು ವೆಂಕಟೇಶ್, ತಾಹೇರಾ ಕುಲ್ಸಂ ಮೊದಲಾದವರು ಮಾತನಾಡಿದರು.
ಎಸ್.ಸಿ ಘಟಕ ನಗರ ಅಧ್ಯಕ್ಷ ಭೈರೇಶ್, ಸೇವಾದಳ ಜಿಲ್ಲಾಧ್ಯಕ್ಷ ಕೆಂಪರಾಜು, ಮಧುಗಿರಿ ತಾಲ್ಲೂಕು ಅಧ್ಯಕ್ಷ ದೊಡ್ಡೇರಿ ಬಸವರಾಜು, ನಗರ ಪಾಲಿಕೆ ಮಾಜಿ ಸದಸ್ಯ ಲಕ್ಷಿö್ಮÃನರಸಿಂಹರಾಜು, ಮಧುಗೌಡ ಮೊದಲಾದವರು ಭಾಗವಹಿಸಿದ್ದರು.

 
									 
					



