ತುಮಕೂರು: ಮಧುಗಿರಿ ಪಟ್ಟಣದಲ್ಲಿ ದಿನಾಂಕ: ೧೨-೦೩-೨೦೨೧ ರಂದು ಬೆಳಗ್ಗೆ ಸುಮಾರು ೦೯:೧೫ ಗಂಟೆ ಸಮಯದಲ್ಲಿ ಕೂಲ್ ಹೇರ್ ಸ್ಟೈಲ್ ಕಟಿಂಗ್ ಶಾಪ್ ಎದುರು ಇದೇ ಮಧುಗಿರಿಯ ಗುರುಕಿರಣ್ ಬಿನ್ ಗಂಗಾಧರಪ್ಪ, ಮಧುಗೌಡ ಬಿನ್ ರಂಗಪ್ಪ, ಎಂ.ವಿ. ಧನಂಜಯಾ ಬಿನ್ ವೀರಣ್ಣ ಇವರುಗಳು ಕೂಲ್ ಹೇರ್ ಸ್ಟೈಲ್ ಅಂಗಡಿಯ ಮುಂಭಾಗದ ಸಿಮೆಂಟ್ ಕಟ್ಟೆಯ ಮೇಲೆ ಕುಳಿತಿದ್ದ ಮೃತ ಆರ್.ವೀರಭದ್ರ ಸ್ವಾಮಿಯನ್ನು ಕೊಲೆ ಮಾಡುವ ಉದ್ದೇಶದಿಂದ ಕೆಳಕ್ಕೆ ಎಳೆದುಕೊಂಡು ಆರೋಪಿ-೧ ಗುರುಕಿರಣ್ ಡ್ರಾಗರ್ ನಿಂದ, ೨ನೇ ಆರೋಪಿ ಮಧುಗೌಡ ಬಟನ್ ಚಾಕುವಿನಿಂದ, ೩ನೇ ಆರೋಪಿ ಸ್ಟೀಲ್ ರಾಡಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಅದೇ ದಿನ ಆರ್.ವಿ ಸ್ವಾಮಿ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಸದರಿ ೩ ಜನ ಆರೋಪಿತರಿಗೆ ಹಾಗೂ ಕೊಲೆಗೆ ಕುಮ್ಮಕ್ಕು ನೀಡಿದ ಚಂದನ್ ಕುಮಾರ್ ಬಿನ್ ರಾಮಪ್ಪ ಇವರುಗಳು ಸಂಚು ರೂಪಿಸಿ ಕೊಲೆ ಮಾಡಿದ್ದು ತನಿಖೆಯಿಂದ ದೃಢಪಟ್ಟ ಮೇರೆಗೆ ಅಂದಿನ ತನಿಖಾಧಿಕಾರಿಯಾದ ಎಂ.ಎಸ್ ಸರ್ದಾರ್ ರವರು ದೋಷಾರೋಪಣಾ ಪಟ್ಟಿಯನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿದ್ದರು..
ಎಸ್.ಸಿ. ಸಂಖ್ಯೆ ೫೦೨೯/೨೦೨೧ರಲ್ಲಿ ಕಲಂ ೩೦೨ ರೆ.ವಿ ೧೨೦ಬಿ ೧೦೯ ರೆ.ವಿ ೩೪ ಭಾರತೀಯ ದಂಡ ಸಂಹಿತೆಯ ರೀತ್ಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ ಪ್ರಕರಣದ ಅಧಿವಿಚಾರಣೆ ನಡೆಸಿದ ಮಧುಗಿರಿಯ ಮಾನ್ಯ ೪ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಯಾದವ ಕರಕೇರ ರವರು ಅಭಿಯೋಜನೆಯು ಆರೋಪವನ್ನು ರುಜುವಾತುಪಡಿಸಿದ ಮೇರೆಗೆ ದಿನಾಂಕ: ೦೩-೦೫-೨೦೨೫ ರಂದು ಸದರಿ ೪ ಜನ ಅರೋಪಿಗಳಿಗೆ ಭಾರತೀಯ ದಂಡ ಸಂಹಿತೆಯ ಕಲಂ ೩೦೨, ೧೨೦ಬಿ, ೧೦೯ ರೆ.ವಿ ೩೪ ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ತಲಾ ರೂ. ೫೦ ಸಾವಿರ ದಂಡ ವಿಧಿಸಿ, ದಂಡದ ಹಣದಲ್ಲಿ ಪರಿಹಾರವಾಗಿ ಮೃತನ ತಂದೆ ರುದ್ರಪ್ಪ, ನಿವೃತ್ತ ಶಿಕ್ಷಕರು ಮತ್ತು ತಾಯಿ ಚನ್ನಬಸಮ್ಮ ಇವರುಗಳಿಗೆ ತಲಾ ರೂ. ೫೦ ಸಾವಿರ ಪರಿಹಾರವಾಗಿ ನೀಡಲು ಆದೇಶ ತೀರ್ಪು ನೀಡಿರುತ್ತಾರೆ.ಪ್ರಕರಣದಲ್ಲಿ ಅಭಿಯೋಜನೆ ಪರವಾಗಿ ಬಿ.ಎಂ. ನಿರಂಜನಮೂರ್ತಿ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದರು.