ತುಮಕೂರು: ಗ್ಯಾರಂಟಿ ಯೋಜನೆಗಳ ಮೂಲಕ ಇದೂವರೆ ಸುಮಾರು ೬೦ ಸಾವಿರ ಕೋಟಿ ರೂ.ಗಳಿಂದ ರಾಜ್ಯದ ಬಡ ಕುಟುಂಬಗಳಿಗೆ ಅನುಕೂಲವಾಗಿದೆ. ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಸಹಾಯವಾಗುತ್ತದೆ ಎಂದು ಹೇಳಿದ ಪೌರಾಡಳಿತ ಮತ್ತು ವಕ್ಫ್ ಖಾತೆ ಸಚಿವ ರಹೀಮ್ ಖಾನ್, ಗ್ಯಾರಂಟಿ ಯೋಜನೆಗಳನ್ನು ಟೀಕಿಸುವವರಿಗೆ ತಿರುಗೇಟು ನೀಡಿದರು.
ಬುಧವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಚಿವರು, ವಿರೋಧಿಗಳು ಏನೇ ಹೇಳಿಕೊಳ್ಳಲಿ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಡ ಕುಟುಂಬಗಳಿಗೆ ಹಲವು ರೀತಿಯ ಸಹಾಯವಾಗಿದೆ. ಕುಟುಂಬದ ವಿವಿಧ ಖರ್ಚು, ಔಷಧಿ ಮತ್ತಿತರ ವೆಚ್ಚಕ್ಕೆ ಗೃಹಲಕ್ಷಿö್ಮ ಯೋಜನೆ ಹಣ ಉಪಯೋಗವಾಗುತ್ತಿದೆ. ಉಚಿತ ವಿದ್ಯುತ್ ಬಡವರ ಮನೆ ಬೆಳಗಿದೆ. ಶಕ್ತಿ ಯೋಜನೆಯಡಿ ಹೆಣ್ಣುಮಕ್ಕಳಿಗೆ ಉಚಿತ ಪ್ರಯಾಣ ಇವೆಲ್ಲವೂ ಬಡವರಿಗೆ ಅನುಕೂಲವಾಗುವ ಕಾರ್ಯಕ್ರಮ ಎಂದರು.
ಸರ್ಕಾರ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ಮುಖ್ಯವಾಗಿ ರಾಜ್ಯದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣಕ್ಕೆ ಒತ್ತು ನಿಡಲಾಗಿದೆ. ಅಶಾಂತಿ ಉಂಟುಮಾಡುವ ಪ್ರಯತ್ನಗಳ ವಿರುದ್ಧ ಸರ್ಕಾರ ತಕ್ಷಣ ಕ್ರಮ ತೆಗೆದುಕೊಂಡು ಎಲ್ಲಾ ಸಮಾಜದವರೂ ಶಾಂತಿ, ಸಹಬಾಳೆಯಿಂದ ಬಾಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಆಸ್ತಿ ದಾಖಲಾತಿ ವಿಚಾರದಲ್ಲಿ ಬಿ-ಖಾತೆ ಆಂದೋಲನ ಸರಾಗವಾಗಿ ನಡೆಯುತ್ತಿದೆ. ಎದುರಾಗಿದ್ದ ತಾಂತ್ರಿಕ, ಮತ್ತಿತರ ಸಮಸ್ಯೆಗಳನ್ನು ನಿವಾಣೆ ಮಾಡಲಾಗುತ್ತಿದೆ. ಬಿ_ಖಾತೆ ನೋಂದಣಿಗೆ ೩ ತಿಂಗಳ ಅವಧಿ ವಿಸ್ತರಿಸಲಾಗಿದೆ ಎಂದ ಸಚಿವ ರಹೀಮ್ ಖಾನ್, ಹಜ್ ಯಾತ್ರೆ ಹೋಗಲು ಅರ್ಜಿ ಸಲ್ಲಿಸಿರುವ ಎಲ್ಲರಿಗೂ ಅವಕಾಶ ಮಾಡಿಕೊಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ಸಚಿವ ರಹೀಮ್ ಖಾನ್ ಅವರನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿದ ಹಿರಿಯ ಮುಖಂಡ ಇಕ್ಬಾಲ್ ಅಹ್ಮದ್ ಅವರು, ಹಜ್ ಯಾತ್ರೆ ಸಂಬAಧ ಇದೂವರೆಗೆ ಇದ್ದ ಸಮಸ್ಯೆಗಳನ್ನು ಸಚಿವರು ನಿವಾರಣೆ ಮಾಡಿ ನೆರವಾಗಿದ್ದಾರೆ. ಮುಂದೆಯೂ ಸರ್ಕಾರ ಹಜ್ ಯಾತ್ರಿಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಕೋರಿದರು.
ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿಗಳ ಇ-ಖಾತೆ ಮಾಡಿಸಲು ಅನೇಕ ರೀತಿಯ ಸಮಸ್ಯೆಗಳಿವೆ, ಜನಸಾಮಾನ್ಯರಿಗೆ ಎದುರಾಗಿರುವ ಈ ಗೊಂದಲಗಳ ನಿವಾರಣೆಗೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಅಲ್ಲದೆ, ಬಿ-ಖಾತೆ ನೋಂದಣಿ ಅವಧಿ ಮುಗಿದಿದೆ ಎಂದು ಮಧ್ಯವರ್ತಿಗಳು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿ ದಾರಿ ತಪ್ಪಿಸುತ್ತಿದ್ದಾರೆ. ಈ ಗೊಂದಲ ನಿವಾರಣೆ ಮಾಡಿ ಸುಗಮವಾಗಿ ಬಿ-ಖಾತೆ ಮಾಡಿಸಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಇಕ್ಬಾಲ್ ಅಹ್ಮದ್ ಸಚಿವರಿಗೆ ಮನವಿ ಮಾಡಿದರು.
ಮಾಜಿ ಶಾಸಕ ಡಾ.ರಫಿಕ್ ಅಹ್ಮದ್ ಮಾತನಾಡಿ, ರಾಜಧಾನಿ ಬೆಂಗಳೂರಿಗೆ ಸಮೀಪವಿರುವ ತುಮಕೂರು ನಗರ ಎಲ್ಲರೀತಿಯಲ್ಲೂ ಬೆಳವಣಿಗೆ ಆಗುತ್ತಿದೆ. ಪ್ರಸ್ತುತ ಕುಡಿಯಯವ ನೀರಿನ ಯೋಜನೆಗಳ ಮೂಲಕ ನೀರಿನ ಸಮಸ್ಯೆ ಅಷ್ಟಾಗಿ ಇಲ್ಲ. ಆದರೆ ಕಸ ವಿಲೇವಾರಿ ಸಮಸ್ಯೆಯಾಗಿದೆ. ತುಮಕೂರು ನಗರದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಿಗೆ ಪ್ರತ್ಯೇಕ ಕಸ ವಿಲೇವಾರಿ ಘಟಕಗಳ ಸ್ಥಾಪನೆ ಮಾಡಲು ಕ್ರಮ ತೆಗೆದುಕೊಳ್ಳುವಂತೆ ಕೋರಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ನಗರ ಪಾಲಿಕೆ ಮಾಜಿ ಸದಸ್ಯರಾದ ಸೈಯದ್ ನಯಾಜ್ ಅಹ್ಮದ್, ಮೆಹಬೂಬ್ ಪಾಷಾ, ಮಹಮದ್ ಇಸ್ಮಾಯಿಲ್, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕ ಅಧ್ಯಕ್ಷ ಅನಿಲ್‌ಕುಮಾರ್, ಮುಖಂಡರಾದ ಫಯಾಜ್ ಅಹ್ಮದ್, ಆಡಿಟರ್ ಸುಲ್ತಾನ್, ಇರ್ಫಾನ್ ಮೊದಲಾದವರು ಭಾಗವಹಿಸಿದ್ದರು.
(Visited 1 times, 1 visits today)