
ತುಮಕೂರು: ನಗರದ ಟೂಡಾ ಕಚೇರಿ ಎದುರಿನ ಸಾಯಿಬಾಬಾ ನಗರದ ಶಿರಡಿ ಸಾಯಿಬಾಬಾ ಮಂದಿರದ ೧೪ನೇ ವಾರ್ಷಿಕೋತ್ಸವ ಸಮಾರಂಭ ಗುರುವಾರ ವೈಭವದಿಂದ ನೆರವೇರಿತು. ಇದರ ಅಂಗವಾಗಿ ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಇದರ ಅಂಗವಾಗಿ ದೇವಸ್ಥಾನವನ್ನು ವಿಶೇಷವಾಗಿ ಅಲಂಕರಿಸಿ ಸಿಂಗರಿಸಲಾಗಿತ್ತು. ಬೆಳಿಗ್ಗೆ ಶಿರಡಿ ಸಾಯಿಬಾಬಾ ಮೂರ್ತಿಗೆ ಕಾಕಡ ಆರತಿ, ಮಂಗಳ ಸ್ನಾನ ನಂತರ ಮಹಾ ಮಂಗಳಾರತಿ, ಮಧ್ಯಾಹ್ನ ಸಾಮೂಹಿಕ ವಿಷ್ಣು ಸಹಸ್ರನಾಮ, ಸಾಯಿಬಾಬಾ ಅಷ್ಟೋತ್ತರ ಪಠಣ, ಸಂಜೆ ಧೂಪ ಆರತಿ, ರಾತ್ರಿ ತೇಜಾರತಿ ಮಾಡಲಾಯಿತು. ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಮಲ್ಲಿಕಾರ್ಜುನ್ ಮತ್ತು ತಂಡದವರಿAದ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮವಿತ್ತು. ಬೆಳಗಿನಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶಿರಡಿ ಸಾಯಿಬಾಬಾರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಶಿರಡಿ ಸಾಯಿಬಾಬಾ ಮಂದಿರ ಟ್ರಸ್ಟ್ ಅಧ್ಯಕ್ಷ ನಟರಾಜ ಶೆಟ್ಟರು, ಟ್ರಸ್ಟ್ನಿಂದ ನಿರಂತರವಾಗಿ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಬಡ ವಿದ್ಯಾರ್ಥಿಗಳಿಗೆ ಪಠ್ಯಪರಿಕರ ವಿತರಣೆ ಸೇರಿದಂತೆ ವಿವಿಧ ಸೇವಾ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದರು.
ತುಮಕೂರು ವಿಶ್ವವಿದ್ಯಾಲಯದ ಸುಮಾರು ೨ ಸಾವಿರ ವಿದ್ಯಾರ್ಥಿಗಳಿಗೆ ಮೂರು ವರ್ಷಗಳಿಂದ ಪ್ರತಿದಿನ ಮಧ್ಯಾಹ್ನದ ಉಚಿತವಾಗಿ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ. ಹೊರ ಊರುಗಳಿಂದ ಕಾಲೇಜಿಗೆ ಬರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮಧ್ಯಾಹ್ನ ಹಸಿವಿನಿಂದ ಉಳಿಯಬಾರದು ಎಂದು ಪಾವಗಡದ ಡಾ.ಜಪಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಶಿರಡಿ ಸಾಯಿಬಾಬಾ ಮಂದಿರದಲ್ಲಿ ಪ್ರಸಾದ ತಯಾರಿಸಿ ಬಾಬಾರಿಗೆ ನೈವೇಧ್ಯ ಮಾಡಿದ ನಂತರ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು ಎಂದು ಹೇಳಿದರು. ಟ್ರಸ್ಟ್ ಉಪಾಧ್ಯಕ್ಷ ಎಂ.ಬಸವಯ್ಯ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ಜಿ.ಎಸ್.ಶ್ರೀಧರ್, ಸುಜಯ್ ಬಾಬು ಮೊದಲಾದವರು ಭಾಗವಹಿಸಿದ್ದರು.
(Visited 1 times, 1 visits today)