ತುಮಕೂರು:  ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನೂತನ ಸಭಾಂಗಣ ಕಟ್ಟಡದ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ತುಮಕೂರಿನ ಅಭಿವೃದ್ಧಿಯ ದೃಷ್ಟಿಯಿಂದ ಜಿಲ್ಲೆಯ ಆಡಳಿತದ ವೈಖರಿ ಮತ್ತಷ್ಟು ಸುಧಾರಣೆಯಾಗಬೇಕು. ಯಾವುದೇ ರೀತಿಯ ಆಪೇಕ್ಷೆ ಇಲ್ಲದೆ ಜನಸಮುದಾಯಕ್ಕೆ ಕೆಲಸಗಳು ಆಗಬೇಕು ಎಂದು ಸಚಿವರು ಹೇಳಿದರು.
ಸಾಮಾನ್ಯ ಪ್ರಜೆ, ಬಡ ರೈತ ತಹಶೀಲ್ದಾರರ ಕಚೇರಿಗೆ ತೊಂದರೆ, ನೋವಿನಿಂದ ಬರುತ್ತಾನೆ. ಅಂತವರ ಕೆಲಸಗಳನ್ನು ಸುಲಭವಾಗಿ ಮಾಡಿಕೊಡಬೇಕು. ಆತ ನಗುವಿನಿಂದ ಹೋದರೆ ಅದೇ ಒಳ್ಳೆಯ ಆಡಳಿತ. ಒಂದು ದಾಖಲೆ ಪಡೆದುಕೊಳ್ಳಲು ಹತ್ತು ಬಾರಿ ಅಲೆಯಬಾರದು. ಈ ವಿಚಾರವನ್ನು ಅಧಿಕಾರಿಗಳು ಮನಸ್ಸಿನಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಸೂಚಿಸಿದರು.
ಸರ್ಕಾರವು ಹಲವು ಜನಪರ ಯೋಜನೆಗಳನ್ನು ಜಾರಿಗೆ ತರುತ್ತದೆ. ಅನೇಕ ನೀತಿಗಳನ್ನು, ತೀರ್ಮಾನಗಳನ್ನು ಮಾಡುತ್ತೇವೆ. ಅವುಗಳು ಜನರಿಗೆ ತಲುಪುವ ನಿಟ್ಟಿನಲ್ಲಿಅನುಷ್ಟಾನಗೊಳಿಸುವ ಜವಾಬ್ಧಾರಿ ನಿಮ್ಮ ಮೇಲಿದೆ ಎಂದರು.
ಬೇರೆ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗಳನ್ನು ಸುಂದರವಾಗಿ, ಕಾರ್ಯಾತ್ಮಕವಾಗಿ ಹಾಗೂ ಆಧುನಿಕ ಆಡಳಿತಕ್ಕೆ ತಕ್ಕಂತೆ ಕಟ್ಟಿಸಿದ್ದಾರೆ. ನಮ್ಮಲ್ಲಿ ಅಂತಹ ಕಟ್ಟಡ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ೨ನೇ ಹಂತದಲ್ಲಿ ನೇಮಕವಾಗಿರುವ ೧೫ ಜನರಿಗೆ ಆದೇಶ ಪತ್ರ ವಿತರಿಸಿದರು.
(Visited 1 times, 1 visits today)