ತುಮಕೂರು: ಜಿಲ್ಲೆಯ ಎಲ್ಲಾ ನ್ಯಾಯ ಬೆಲೆ ಅಂಗಡಿಗಳಲ್ಲಿ ಆಹಾರ ಇಲಾಖೆ ಸಹಾಯವಾಣಿ ಸಂಖ್ಯೆ ೧೯೬೭ನ್ನು ನಮೂದಿಸುವಂತೆ ನ್ಯಾಯ ಬೆಲೆ ಅಂಗಡಿಗಳ ಮಾಲೀಕರಿಗೆ ನಿರ್ದೇಶನ ನೀಡಬೇಕೆಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಅನ್ನ ಭಾಗ್ಯ ಯೋಜನೆಯಡಿ ಪಡಿತರ ವಿತರಣೆ ಅಂಗಡಿಗಳಲ್ಲಿ ಸಾರ್ವಜನಿಕರಿಗೆ ೧೦ ಕೆಜಿ ಅಕ್ಕಿಗೆ ಬದಲಾಗಿ ೮ ಕೆಜಿ ಮಾತ್ರ ವಿತರಿಸಲಾಗುತ್ತಿದೆ. ಬಯೋಮೆಟ್ರಿಕ್ ಪಡೆಯುವ ಸಂದರ್ಭದಲ್ಲೂ ಸಾರ್ವಜನಿಕರಿಂದ ೧೦ ರೂ.ಗಳ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಪಡಿತರ ವಿತರಿಸುವ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಂಡಿರುವುದಿಲ್ಲ ಎಂದೂ ಸಾರ್ವಜನಿಕ ದೂರುಗಳು ವ್ಯಕ್ತವಾಗುತ್ತಿವೆ. ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಇಂತಹ ಸಮಸ್ಯೆಗಳು ಕಂಡು ಬಂದಲ್ಲಿ ನೇರವಾಗಿ ಸಹಾಯವಾಣಿ ಸಂಖ್ಯೆ ೧೯೬೭ನ್ನು ಸಂಪರ್ಕಿಸಿ ದೂರು ನೀಡುವ ಬಗ್ಗೆ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ಧಾನ್ಯಗಳ ತೂಕದಲ್ಲಿ ವ್ಯತ್ಯಾಸ, ಬಯೋ ಮೆಟ್ರಿಕ್ ಶುಲ್ಕ ವಸೂಲಿ, ಮತ್ತಿತರ ಅವ್ಯವಸ್ಥೆಗಳನ್ನು ತಡೆಯಲು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಸದಸ್ಯರು ಹಾಗೂ ಸಂಬAಧಪಟ್ಟ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸಮಸ್ಯೆ ಕಂಡುಬAದರೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಗೃಹ ಲಕ್ಷಿö್ಮ, ಗೃಹ ಜ್ಯೋತಿ, ಅನ್ನ ಭಾಗ್ಯ, ಯುವ ನಿಧಿ ಯೋಜನೆಗಳ ಪ್ರಯೋಜನ ಪಡೆದ ೧೯,೭೦,೮೪೭ ಫಲಾನುಭವಿಗಳಿಗೆ ೩೫೫೪.೪೫ಕೋಟಿ ರೂ.ಗಳನ್ನು ಪಾವತಿ ಮಾಡಲಾಗಿದೆಯಲ್ಲದೆ, ೧೫.೫೪ ಕೋಟಿ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯ ಸೌಲಭ್ಯ ಪಡೆದಿದ್ದು, ಈವರೆಗೆ ಶಕ್ತಿ ಯೋಜನೆಗಾಗಿ ಒಟ್ಟು ೪೭೬.೨೩ ಕೋಟಿ ರೂ.ಗಳು ವೆಚ್ಚವಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಗೃಹಲಕ್ಷಿö್ಮ, ಯುವನಿಧಿ, ಗೃಹ ಜ್ಯೋತಿ, ಅನ್ನಭಾಗ್ಯ, ಶಕ್ತಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿರುವ ಬಗ್ಗೆ ಕೂಲಂಕುಶವಾಗಿ ಚರ್ಚಿಸಲಾಯಿತು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸಂಜೀವಪ್ಪ ಮಾತನಾಡಿ ಸರ್ಕಾರದಿಂದ ಅನುಷ್ಠಾನವಾಗಿರುವ ೫ ಗ್ಯಾರಂಟಿ ಯೋಜನೆಯೂ ಬಡವರಿಗೆ ನ್ಯಾಯಯುತವಾಗಿ ಸಲ್ಲಬೇಕು ಎಂಬ ದೃಷ್ಟಿಕೋನದಿಂದ ಜಿಲ್ಲಾ ತಾಲ್ಲೂಕು ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಈಶ್ವರಪ್ಪ, ಮುಖ್ಯ ಯೋಜನಾಧಿಕಾರಿ ಸಣ್ಣಮಸಿಯಪ್ಪ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷರು, ಸದಸ್ಯರು ಹಾಗೂ ತಾಲ್ಲೂಕು ಮಟ್ಟದ ಅಧ್ಯಕ್ಷರು ಹಾಗೂ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
(Visited 1 times, 1 visits today)