ತುರುವೇಕೆರೆ: ಕ್ಷೇತ್ರದಲ್ಲಿ ಮಾದಕ ವಸ್ತುಗಳ ಮಾರಾಟ ಜಾಲ ಹಾವಳಿಯಿಂದ ಅಮಾಯಕ ಯುವಕರು ಬಲಿಯಾಗುತ್ತಿದ್ದಾರೆ ಪೋಲೀಸ್ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂದು ಮಾಜಿ ಶಾಸಕ ಮಸಾಲ ಜಯರಾಮ್ ಆರೋಪಿಸಿದರು.
ಪಟ್ಟಣ ಸಮೀಪದ ತೋಟದ ಮನೆಯಲ್ಲಿ ಸೋಮವಾರ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ವಿಧಾನಸಭಾ ಕ್ಷೇತ್ರದ ಸಿ.ಎಸ್. ಪುರ ಹೋಬಳಿಯಲ್ಲಿ ಗಾಂಜಾ ಡ್ರಗ್ಸ್ ಸೇರಿ ಮಾದಕ ವಸ್ತುಗಳ ಮಾರಾಟ ಹೆಚ್ಚಾಗಿದೆ. ಗಾಂಜಾ ಅಮಲಿಗೆ ತುತ್ತಾದ ವ್ಯಕ್ತಿಯಿಂದ ಗಲಾಟೆ ಗರ್ಷಣೆ ಸೇರಿ ಕೊಲೆ ಮಾಡುವ ಹಂತಕ್ಕೆ ತಲುಪುತ್ತಿದೆ. ಗಾಂಜಾ ಹಾವಳಿ ಮಿತಿಮೀರಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮದಾನ ವ್ಯಕ್ತಪಡಿಸಿದರು.
ಗಾಂಜಾ ಸಾಗಟ ಹಾಗೂ ಮಾರಾಟದಲ್ಲಿ ವರ್ಗದ ಜನರು ಶಾಮೀಲಾಗಿದ್ದಾರೆ ಗಾಂಜಾ ಮಾರಾಟ ಮಾಡುವ ಮಾಲು ಸಮೇತ ಸಿಕ್ಕಿಬಿದ್ದರೂ ಸಹ ಪೊಲೀಸರು ಅವರ ಮೇಲೆ ಕ್ರಮ ಕೈಗೊಳ್ಳಲಾಗದಂತ ಸ್ಥಿತಿಗೆ ತಲುಪಿದ್ದಾರೆ. ನಮ್ಮ ಕ್ಷೇತ್ರದ ತುಂಬಾ ಹಾಗೂ ಜಿಲ್ಲೆಯಲ್ಲಿ ಡ್ರಗ್ ಪೆಡ್ಲರ್ಗಳ ಹಾವಳಿ ಹೆಚ್ಚಾಗಿದ್ದು ಅಮಾಯಕ ಯುವಕರನ್ನು ಬಲಿಪಡೆಯುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಅನೇಕ ಬಾರಿ ಇದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಪೋಲೀಸರು ಸಹ ಮಾದಕ ಮಾರಾಟಗಾರರ ಜೊತೆ ಶಾಮೀಲಾಗಿದ್ದಾರೆ ಎಂಬ ಅನುಮಾನ ಮೂಡುತ್ತಿದೆ ಎಂದು ಆರೋಪಿಸಿ ಗೃಹ ಸಚಿವರ ತವರು ಜಿಲ್ಲೆಯಲ್ಲ್ಲೆ ಎಗ್ಗಿಲ್ಲದೇ ಮಾದಕ ಮಾರಾಟ ನೆಡೆದರೂ ಗೃಹ ಮಂತ್ರಿಗಳ ಗಮನಕ್ಕೆ ಬಂದಿಲ್ಲವೇ, ಬಂದಿದ್ದರೂ ಸಹ ಜಾಣ ಕುರುಡು ಪ್ರದರ್ಶಿಸುತಿದ್ದಾರೆಯೇ ಎಂದು ಗೃಹ ಮಂತ್ರಿಗಳನ್ನು ಪ್ರಶ್ನಿಸಿದರು.
ಹದಿಹರೆಯದ ಯುವಕರನ್ನು ದಾರಿ ತಪ್ಪಿಸುತ್ತಿರುವ ಈ ಗಾಂಜಾ ದಂಧೆಕೋರರ ವಿರುದ್ಧ ಗೃಹ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ಮಾದಕ ವ್ಯಸನಿಗಳು ಕೊಲೆ ಸುಲಿಗೆ ಕಳ್ಳತನಗಳ ಮತ್ತು ವೀಲಿಂಗ್ ನಂತಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಬಾಗಿಯಾಗುತ್ತಿದ್ದಾರೆ. ಇಂತಹವರ ವಿರುದ್ಧ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕೂಡಲೇ ಕ್ರಮ ಕೈಗೊಂಡು ಹಾದಿ ತಪ್ಪುತ್ತಿರುವ ಯುವ ಜನಾಂಗವನ್ನು ರಕ್ಷಿಸಬೇಕಿದೆ ಮಾದಕ ಮಾರಾಟ ಜಾಲದ ವಿರುದ್ದ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಪ.ಪಂ. ಸದಸ್ಯ ಚಿದಾನಂದ್, ಮಾಜಿ ಸದಸ್ಯ ಲಚ್ಚಿಬಾಬು, ಮುಖಂಡರಾದ ವಿ ಬಿ ಸುರೇಶ್, ಕಾಳಂಜಿಹಳ್ಳಿ ಸೋಮಣ್ಣ, ನಾಗಲಾಪುರ ಮಂಜಣ್ಣ, ಕುಮಾರ್, ಜಗದೀಶ್, ಬಸವರಾಜು, ಮಂಜುನಾಥ್, ಗ್ರಾ.ಪಂ. ಸದಸ್ಯ ವಿಠಲದೇವರಹಳ್ಳಿ ಮಂಜಣ್ಣ, ಆಕಾಶ್, ಸುರೇಶ್ ಸೇರಿದಂತೆ ಇತರರು ಇದ್ದರು.

(Visited 1 times, 1 visits today)