ಹುಳಿಯಾರು: ಕಳೆದ ೧೦ ದಿನಗಳಿಂದ ಹುಳಿಯಾರು ಪಟ್ಟಣದಲ್ಲಿ ಗೊಬ್ಬರ ವಿತರಿಸುತ್ತಿದ್ದರೂ ಸಹ ರೈತರ ನೂಕುನುಗ್ಗಲು ಕಡಿಮೆ ಆಗಿಲ್ಲ. ಪರಿಣಾಮ ಸೋಮವಾರ ಪೊಲೀಸ್ ಕಣ್ಗಾವಲಿನಲ್ಲಿ ಗೊಬ್ಬರ ವಿತರಿಸುವ ಸ್ಥಿತಿ ನಿರ್ಮಾಣವಾಯಿತು.
ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಕಳೆದ ವಾರದಿಂದ ಮಳೆ ಬೀಳುತ್ತಿರುವುದರಿಂದ ರಾಗಿ ಇನ್ನಿತರ ಬೆಳೆಗಳಿಗೆ ಮೇಲು ಗೊಬ್ಬರವಾಗಿ ನೀಡುವ ಯೂರಿಯಾಗೆ ಬೇಡಿಕೆ ಹೆಚ್ಚಿದೆ. ಪಟ್ಟಣದ ಮುಸ್ತಾಫ ಟ್ರೇರ‍್ಸ್, ರೈತ ಅಗ್ರಿ ಕ್ಲಿನಿಕ್ ಹಾಗೂ ಗಾಂಧಿಪೇಟೆಯ ಬಸವೇಶ್ವರ ಟ್ರೇಡರ್ಸ್ ಗೊಬ್ಬರದ ಅಂಗಡಿಗಳ ಜೊತೆಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲೂ ಸಹ ವಾರಕ್ಕೆ ಎರಡ್ಮೂರು ಲೋಡ್ ಗೊಬ್ಬರ ಕೊಡುತ್ತಿದ್ದರೂ ಸಹ ಬೆಳಗ್ಗೆಯಿಂದಲೇ ರೈತರು ಗೊಬ್ಬರದ ಅಂಗಡಿಗಳ ಮುಂದೆ ನಸುಕಿನಿಂದಲೇ ಸರತಿಸಾಲಿನಲ್ಲಿ ನಿಲ್ಲುವುದು ಕಡಿಮೆಯಾಗಿಲ್ಲ.
ಸೋಮವಾರ ಗೊಬ್ಬರ ಬರುವ ಮುನ್ಸೂಚನೆ ತಿಳಿದ ರೈತರ ಸೋನೆ ಮಳೆಯಲ್ಲೂ ಗೊಬ್ಬರದ ಅಂಗಡಿಗಳ ಮುಂದೆ ಮೈಲುದ್ದ ಸರತಿ ಸಾಲು ನಿಂತಿದ್ದರು. ಗೊಬ್ಬರದ ಲಾರಿ ಅಂಗಡಿಗಳ ಮುಂದೆ ಬಂದಿದ್ದೇ ತಡ ಗೊಬ್ಬರದ ಚೀಲ ಅಂಗಡಿಗೆ ಇಳಿಸಲೂ ಬಿಡದೆ ಖರೀದಿಗೆ ನೂಕುನುಗ್ಗಲು ಸೃಷ್ಟಿಸಿದರು. ಮಳೆ ಬರುತ್ತಿದ್ದರೂ ಸಹ ಲೆಕ್ಕಿಸದೆ ಗೊಬ್ಬರ ಖರೀದಿಗೆ ಮುಗಿಬಿದ್ದರು. ನಾಮುಂದುತಾಮುAದು ಎಂದು ಸರತಿ ಸಆಲನ್ನೂ ಬಿಟ್ಟು ವಿತರಿಸುವವರ ಮೇಲೆ ಬಿದ್ದ ಪರಿಣಾಮ ಗೊಬ್ಬರ ವಿತರಣೆಗೆ ಪೊಲೀಸರ ಮೊರೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು.
ಪೊಲೀಸರು ಬಂದು ಪುನಃ ರೈತರನ್ನು ಸರತಿ ಸಾಲಿನಲ್ಲಿ ನಿಲ್ಲಿಸುವ, ಸರತಿ ಸಾಲಿನ ಮಧ್ಯೆ ಸ್ನೇಹಿತ, ನೆಂಟ ಎಂದು ಮತ್ತೋಬ್ಬರನ್ನು ಕರೆದು ನಿಲ್ಲಿಸುವುದನ್ನು ತಡೆಯುವ, ಒಬ್ಬೊಬ್ಬರೇ ಆಧಾರ್ ಕಾರ್ಡ್, ದುಡ್ಡು ಕೊಟ್ಟು ಗೊಬ್ಬರ ಖರೀದಿಸುವಂತೆ ಮಾಡಿ ಗೊಬ್ಬರ ವಿತರಣೆ ಸುಗಮವಾಗಿಸಿದರು. ಗೊಬ್ಬರ ಖಾಲಿಯಾಗುವವರೆವಿಗೂ ರೈತರಂತೆ ಪೊಲೀಸರೂ ನಿಂತು ವಿತರಣೆಗೆ ಸಹಕರಿಸಿದರು.
ಪ್ರತಿದಿನ ಒಂದಿಲ್ಲೊ0ದು ಅಂಗಡಿಗಳ ಮುಂದೆ ಯೂರಿಯಾ ಗೊಬ್ಬರಕ್ಕಾಗಿ ರೈತರು ಪರದಾಡುತ್ತಿರುವುದು ಸಹಜವಾಗಿದೆ. ಸದಾ ಜನದಟ್ಟಣೆ ಹಾಗೂ ವಾಹನದಟ್ಟನೆಯಿಂದ ಕೂಡಿರುವ ಪಟ್ಟಣದ ಬಿಎಚ್ ರಸ್ತೆಯಲ್ಲಿನ ರಸಗೊಬ್ಬರ ಮಾರಾಟ ಅಂಗಡಿಯ ಮುಂದೆ ಸರತಿ ಸಾಲಿನಲ್ಲಿ ಸಾವಿರಾರು ರೈತರು ನಿಲ್ಲುವುದರಿಂದ ಭಾರಿ ತೊಂದರೆಯಾಗುತ್ತಿದ್ದು ಪೊಲೀಸರು ಗೊಬ್ಬರ ಕೊಡಿಸುವ ಜೊತೆಗೆ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಡಕಾಗದಂತೆ ಮಾಡಲು ಹರಸಾಹಸ ಪಡುವ ದೃಶ್ಯ ಸಾಮಾನ್ಯವಾಗಿದೆ.
ಎಕರೆಗೆ ೨೨ ಕೆ.ಜಿ ಯೂರಿಯಾವನ್ನು ರಾಗಿ ಬೆಳೆಗೆ ಹಾಕಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳು ಸಾಕಷ್ಟು ಬಾರಿ ತಿಳಿಸಿದ್ದರೂ ಎಕರೆಗೆ ೧೦೦ ಕೆ.ಜಿ. ಹಾಕಲು ಮುಂದಾಗುತ್ತಿರುವುದು ಕೊರತೆಗೆ ಕಾರಣವಾಗುತ್ತಿದೆ ಎನ್ನಲಾಗುತ್ತಿದೆ. ಹಾಗಾಗಿ ಒಬ್ಬೊಬ್ಬ ರೈತರು ಎರಡ್ಮುರು ಚೀಲ ಗೊಬ್ಬರ ಖರೀಧಿಸುವ ಜೊತೆಗೆ ತಮ್ಮ ಬಂದುಬಳಗವನ್ನು ಕರೆದುಕೊಂಡು ಬಂದು ಹೆಚ್ಚು ಗೊಬ್ಬರ ಖರೀದಿಸುತ್ತಿರುವುದರಿಂದ ಕೆಲ ಗಂಟೆಯಲ್ಲೇ ೨೫ ಟನ್ ಗೊಬ್ಬರ ಖಾಲಿಯಾಗಿ ಸರತಿಯಲ್ಲಿ ನಿಂತಿದ್ದರೂ ಗೊಬ್ಬರ ಸಿಗದೆ ಬರಿಗೈಯಲ್ಲಿ ಹಿಂದಿರುಗುತ್ತಿದ್ದಾರೆ.
ತಾಲೂಕಿಗೆ ಸಮರ್ಪಕ ಗೊಬ್ಬರ ವಿತರಣೆ
ಚಿಕ್ಕನಾಯಕನಹಳ್ಳಿ ತಾಲೂಕಿಗೆ ಅಗತ್ಯವಿರುವಷ್ಟು ಗೊಬ್ಬರವನ್ನು ವಿತರಿಸಲಾಗುತ್ತಿದೆ. ಆದರೆ ಮುಂದೆ ಸಿಗುತ್ತದೋ ಇಲ್ಲವೋ ಎಂದು ಈಗಲೇ ಅಗತ್ಯಕ್ಕಿಂತ ಹೆಚ್ಚು ಗೊಬ್ಬರವನ್ನು ರೈತರು ಖರೀದಿಸುತ್ತಿರುವುದರಿಂದ ಅಭಾವ ಸೃಷ್ಠಿಯಾಗಿದೆ. ಕಾಲಕಾಲಕ್ಕೆ ಸಮರ್ಪಕವಾಗಿ ಗೊಬ್ಬರ ತರಿಸಿ ಕೊಡಲಾಗುವುದು. ಹಾಗಾಗಿ ರೈತರು ಆತಂಕಕ್ಕೇ ಒಳಗಾಗಿ ಹೆಚ್ಚು ಗೊಬ್ಬರ ಖರೀದಿಸದೆ ಈಗ ಎಷ್ಟು ಬೇಕೋ ಅಷ್ಟು ಮಾತ್ರ ಖರೀಸಿದರೆ ಈ ನೂನುನುಗ್ಗಲು ಇರುವುದರಿಲ್ಲ. ರೈತರು ಇಲಾಖೆಯೊಂದಿಗೆ ಸಹಕರಿಸಬೇಕಿದೆ.
> ಶಿವರಾಜ್‌ಕುಮಾರ್, ಸಹಾಯಕ ಕೃಷಿ ನಿರ್ದೇಶಕರು, ಚಿಕ್ಕನಾಯಕನಹಳ್ಳಿ