ಕೊರಟಗೆರೆ: ಬಡವ, ಶ್ರೀಮಂತ ಎನ್ನದೇ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ವಿದ್ಯುತ್ ಅವಶ್ಯಕತೆಯಿದೆ. ವಿದ್ಯುತ್‌ನಿಂತ ಉಪಯೋಗವೂ ಇದೆ, ಅಪಾಯವು ಇದೆ. ಇದಕ್ಕೆ ಯಾವುದೇ ಜಾತಿ, ಧರ್ಮ, ಬೇದವಿಲ್ಲ ಎಂದು ಎಲೆರಾಂಪುರ ಶ್ರೀಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ತಿಳಿಸಿದರು.
ಕೊರಟಗೆರೆ ಪಟ್ಟಣದ ಬೆಸ್ಕಾಂ ಕಚೇರಿ ಪಕ್ಕದಲ್ಲಿನ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘದ ನೂತನ ಕಛೇರಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಗುತ್ತಿಗೆದಾರರ ನಡುವೆ ಉತ್ತಮ ಬಾಂಧವ್ಯ ಇರಬೇಕು, ಗುತ್ತಿಗೆದಾರರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ತಮ್ಮ ವೃತ್ತಿಯಲ್ಲಿ ಯಶಸ್ವಿಯಾಗಬೇಕಿದೆ ಎಂದರು.
ರಾಜ್ಯ ಮತ್ತು ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ವಿದ್ಯುತ್ ಗುತ್ತಿಗೆದಾರರು ಸಂಘಟನೆ ಸ್ಥಾಪನೆ ಮೂಲಕ ಸಾಧಕ ಬಾದಕಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ಸರ್ಕಾರ ಕೂಡ ವಿದ್ಯುತ್ ಗುತ್ತಿಗೆದಾರರ ಬೇಡಿಗಳನ್ನು ಆದಷ್ಟು ಬೇಗ ಈಡೇರಿಸಬೇಕಿದೆ. ಖಾಸಗಿ ಸ್ಥಳದಲ್ಲಿ ಕಚೇರಿ ತಾತ್ಕಲಿಕವಾಗಿರಲಿದ್ದು ಶಾಸಕರು ಈ ಬಗ್ಗೆ ಗಮನಹರಿಸಿ ಗುತ್ತಿಗೆದಾರರ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ, ಉದ್ಘಾಟನೆ ಮಾಡಬೇಕಿದೆ ಎಂದು ಒತ್ತಾಯ ಮಾಡಿದರು.
ಕೇಂದ್ರ ಸಮಿತಿ ಕಾರ್ಯದರ್ಶಿ ಹೆಚ್.ವಿ ಚಂದ್ರಬಾಬು ಮಾತನಾಡಿ, ರಾಜ್ಯದ ೩೧ ಜಿಲ್ಲಾ ಸಮಿತಿ, ೨೩೬ ತಾ.ಸಮಿತಿಗಳಿದ್ದು ಹಲವು ಸಮಿತಿ ಸ್ವಂತ ಕಟ್ಟಡವನ್ನು ಹೊಂದಿದೆ. ಕೊರಟಗೆರೆ ತಾಲ್ಲೂಕಿನಲ್ಲೂ ನೂತನ ಕಚೇರಿ ಉದ್ಘಾಟನೆಯಾಗಿದೆ. ೧೯೨೨ರಲ್ಲಿ ನಮ್ಮ ಸಂಘಟನೆಯಲ್ಲಿ ಬೆರಳಣಿಕೆಯಷ್ಟು ಮಂದಿ ಸದಸ್ಯರು ಮಾತ್ರ ನೊಂದಾಯಿತರಾಗಿದ್ದರು, ಪ್ರಸ್ತುತವಾಗಿ ೧೫ಸಾವಿರಕ್ಕೂ ಹೆಚ್ಚಿನ ಸಂಖೈಯಲ್ಲಿ ಸದಸ್ಯರು ನೊಂದಾಯಿತರಾಗಿದ್ದಾರೆ. ಸಂಘಟನೆಗೆ ನೂರಾರು ವರ್ಷಗಳ ಇತಿಹಾಸವಿದ್ದು, ರಾಜ್ಯದಲ್ಲಿ ಅತ್ಯುತ್ತಮವಾಗಿ ತಂತ್ರಜ್ಞಾನ ಬಳಕೆಯಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಜಿಲ್ಲಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ ಅಶೋಕ್‌ಕುಮಾರ್ ಮಾತನಾಡಿ, ವಿದ್ಯುತ್ ಗುತ್ತಿಗೆದಾರರ ಸಂಘದ ಸಹಕಾರದೊಂದಿಗೆ ಇಂದು ಗುತ್ತಿಗೆದಾರರ ನೂತನ ಕಚೇರಿ ಉದ್ಘಾಟನೆಯಾಗಿದೆ. ಕೇಂದ್ರ ಸಮಿತಿ ರಾಜ್ಯದಲ್ಲಿ ೩೧ ಜಿಲ್ಲೆ, ೨೩೬ ತಾಲ್ಲೂಕುಗಳಲ್ಲಿ ಸಂಘಟನೆ ಕಾರ್ಯನಿರ್ವಹಿಸುತ್ತಿದೆ. ತುಮಕೂರು ಜಿಲ್ಲೆಯಲ್ಲಿ ಕೆಲ ತಾಲ್ಲೂಕುಗಳಲ್ಲಿ ಮಾತ್ರ ಕಚೇರಿಯಿದೆ. ಮುಂದಿನ ದಿನಗಳಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ಕಟ್ಟಡ ಕಟ್ಟುವಂತಹ ಆಶಾ ಮನೋಭಾವನೆ ಹೊಂದಿದ್ದೇವೆ ಎಂದು ಹೇಳಿದರು.
ತಾಲ್ಲೂಕು ಸಮಿತಿಯ ತಾ.ಅಧ್ಯಕ್ಷ ಎಸ್.ಆರ್ ಸೋಮಶೇಖರ್ ಮಾತನಾಡಿ, ಗುತ್ತಿಗೆದಾರ ಸಂಘದಲ್ಲಿ ಸದಸ್ಯರ ಪ್ರೀತಿ ವಿಶ್ವಾಸದಿಂದ ಮೂರನೇ ಬಾರಿ ಅಧ್ಯಕ್ಷನಾಗಿ ಮುಂದುವರೆದಿದ್ದೇನೆ, ಇದೇ ರೀತಿ ತಮ್ಮೆಲ್ಲರಾ ಸಹಕಾರ ನೀಡುವಂತೆ ಕೋರಿದರು.
ಈ ಸಂದರ್ಭದಲ್ಲಿ ಗೃಹ ಸಚಿವ ವಿಶೇಷ ಅಧಿಕಾರಿ ಡಾ.ಕೆ.ನಾಗಣ್ಣ, ಬೆಸ್ಕಾಂ ಎಇಇ ಪ್ರಸನ್ನಕುಮಾರ್, ತಾ.ಸಮಿತಿ ಉಪಾಧ್ಯಕ್ಷ ಮೂಡಲಗಿರಿಯಪ್ಪ, ಎ.ಆರ್ ರವಿಕುಮಾರ್, ಫಾರುಕ್ ಅಹಮದ್, ಪ್ರದೀಪ್‌ಕುಮಾರ್ ಸೇರಿದಂತೆ ಇತರರು ಇದ್ದರು.
ಗುತ್ತಿಗೆದಾರರ ಸಂಘಟನೆ ರಾಜ್ಯ ಮಟ್ಟದಲ್ಲಿ ವಿಶೇಷ ಮನ್ನಣೆ ಪಡೆದಿದೆ. ಇತಿಹಾಸವಿರುವ ನಮ್ಮ ಸಂಘಟನೆಯಲ್ಲಿ ವಿದ್ಯುತ್ ಗುತ್ತಿಗೆದಾರರ ಆಕಸ್ಮಿಕ ಮರಣದಿಂದ ಮೃತರಾದ ವ್ಯಕ್ತಿಯ ಕುಟುಂಬಕ್ಕೆ ೨ಲಕ್ಷ ಪರಿಹಾರ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ, ಕಾಮಗಾರಿ ಸಂದರ್ಭದಲ್ಲಿ ಗ್ರಾಹಕರು ಸಮಸ್ಯೆಗೆ ಸಿಲುಕಿದ್ದಲ್ಲಿ ಸಂಘಟನೆಯು ಗ್ರಾಹಕರ ಪರವಾಗಿ ಧ್ವನಿ ಎತ್ತಿ ಬೆಂಬಲ ಸೂಚಿಸಿದೆ. ಗುತ್ತಿಗೆದಾರರಿಗೆ ಒಂದು ಲಕ್ಷದಿಂದ ಐದು ಲಕ್ಷದವರೆಗೆ ತುಂಡುಗುತ್ತಿಗೆ ನೀಡುವಂತೆ ಕೆಪಿಟಿಟಿ ಆಕ್ಟ್ನಲ್ಲಿ ಬದಲಾವಣೆಯಾಗಿದೆ.
ಹೆಚ್.ವಿ ಚಂದ್ರಬಾಬು, ಕಾರ್ಯದರ್ಶಿ
ಗುತ್ತಿಗೆದಾರರ ಸಂಘದ ಕೇಂದ್ರ ಸಮಿತಿ.