
ತುಮಕೂರು: ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತಿನ ಮನೋಭಾವ, ಸಹಕಾರ ಮತ್ತು ನಾಯಕತ್ವದ ಗುಣವನ್ನು ಬೆಳೆಸುತ್ತದೆ. ಕ್ರೀಡಾಂಗಣವು ವಿದ್ಯಾರ್ಥಿಗಳ ವ್ಯಕ್ತಿತ್ವ ಅಭಿವೃದ್ಧಿಗೆ ಪಾಠಶಾಲೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ: ಜಿ.ಪರಮೇಶ್ವರ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಮಹಾತ್ಮ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯ ಮಟ್ಟದ ಈ ಹೊನಲು ಬೆಳಕಿನ ಕಬಡ್ಡಿ ಸ್ಪರ್ಧೆಯು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಲಿದೆ ಎಂದು ಹೇಳಿದರಲ್ಲದೆ, ಕಳೆದ ಬಾರಿ ಚಿಕ್ಕೋಡಿಯಲ್ಲಿ ನಡೆದಿದ್ದು, ಈ ಬಾರಿ ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿರುವುದು ನಮ್ಮ ಜಿಲ್ಲೆಯ ಹೆಮ್ಮೆ ಎಂದು ಹೇಳಿದರು.
ಕ್ರೀಡೆಗಳಲ್ಲಿ ಸೋಲು ಎಂದರೆ ವಿಫಲತೆ ಅಲ್ಲ, ಅದು ಮುಂದಿನ ಗೆಲುವಿನ ದಾರಿ. ಸೋಲಿನಲ್ಲೂ ಪಾಠವಿದೆ. ಸೋಲು ಮುಂದಿನ ಪ್ರಯತ್ನಕ್ಕೆ ಪ್ರೇರಣೆ ನೀಡುತ್ತದೆ. ಕ್ರೀಡಾ ಮನೋಭಾವನೆ ಎಂದರೆ ಪ್ರತಿಯೊಂದು ಪಂದ್ಯವನ್ನು ಸವಾಲಾಗಿ ಸ್ವೀಕರಿಸಿ, ಶ್ರದ್ಧೆ ಮತ್ತು ಪರಿಶ್ರಮದಿಂದ ಗೆಲುವಿನತ್ತ ಹೆಜ್ಜೆ ಇಡುವುದು ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಡಿ.ಟಿ ಶ್ರೀನಿವಾಸ್ ಮಾತನಾಡಿ ಶಿಕ್ಷಣವು ಜೀವನದ ಬೆಳಕಾದರೆ, ಕ್ರೀಡೆ, ಕಲೆ, ಸಂಸ್ಕೃತಿ ಮತ್ತು ಸಾಹಿತ್ಯವು ಬೆಳಕಿಗೆ ಬಣ್ಣ ಮತ್ತು ಸೌಂದರ್ಯ ನೀಡುತ್ತದೆ. ಇವುಗಳ ಸಮನ್ವಯವೇ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನಕ್ಕೆ ನಿಜವಾದ ಶಕ್ತಿ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಪ್ರಾಸ್ತವಿಕವಾಗಿ ಮಾತನಾಡಿ, ರಾಜ್ಯದ ೩೦ ಜಿಲ್ಲೆಗಳಿಂದ ೨ ತಂಡಗಳ0ತೆ ಆಗಮಿಸಿರುವ ಪುರುಷ ಮತ್ತು ಮಹಿಳಾ ವಿಭಾಗದಿಂದ ಒಟ್ಟು ೬೬ ತಂಡಗಳು ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಭಾಗವಹಿಸಲಿದ್ದು, ೩೯೬ ಬಾಲಕ/ಬಾಲಕಿಯರು ಸೇರಿದಂತೆ ಒಟ್ಟು ೭೯೨ ಕ್ರೀಡಾ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ ಅಶೋಕ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಾ. ಬಾಲಗುರುಮೂರ್ತಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಚಂದ್ರಶೇಖರ್ ಗೌಡ, ಗೃಹ ಸಚಿವರ ವಿಶೇಷ ಕರ್ತವ್ಯಧಿಕಾರಿ ಡಾ. ನಾಗಣ್ಣ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



