
ತುಮಕೂರು: ಇದೀಗ ಕರ್ನಾಟಕದಲ್ಲಿ ‘ಮುಖ್ಯಮಂತ್ರಿ ಬದಲಾವಣೆ’ ಚರ್ಚೆಯು ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿ ಮತ್ತೊಮ್ಮೆ ಗರಿಗೆದರಿರುವ ಹಿನ್ನಲೆಯಲ್ಲಿ ತುಮಕೂರು ನಗರದ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಸಭೆ ನಡೆಸಿ ಪ್ರಕಟಣೆಯನ್ನು ಹೊರಡಿಸಿರುತ್ತಾರೆ.
ಈ ಕುರಿತು ದಲಿತ ಸಂಘಟನೆಗಳ ಒಕ್ಕೂಟ ರಾಜ್ಯಾಧ್ಯಕ್ಷರಾದ ಡಾ. ಎಂ ವೆಂಕಟಸ್ವಾಮಿ ಮಾತನಾಡುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎರಡೂವರೆ ವರ್ಷಗಳ ಆಡಳಿತವು ಮುಗಿಯುವ ದಿನಾಂಕವು ಸನಿಹ ಆಗುತ್ತಿರುವಾಗ ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂಬ ಊಹೆಗಳ ಚರ್ಚೆಯು ರಾಜ್ಯದಲ್ಲಿ ವಿಚಿತ್ರ ರಾಜಕೀಯ ಗೊಂದಲಗಳನ್ನು ಸೃಷ್ಠಿಸುತ್ತಿದೆ. ಇದೇ ನವೆಂಬರ್ ೨೧ರ ನಂತರದ ಎರಡೂವರೆ ವರ್ಷಗಳ ಮುಖ್ಯಮಂತ್ರಿ ಮತ್ತು ೨೦೨೮ರ ಚುಣಾವಣೆಯ ನಂತರದ ಮುಖ್ಯಮಂತ್ರಿ ಆಯ್ಕೆಯ ಊಹಾಪೋಹಗಳು ನಾಡಿನ ಜನತೆಯಲ್ಲಿ ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಿವೆ. ಕಾಂಗ್ರೆಸ್‌ನ ರಾಜ್ಯ ಮುಖಂಡರ ಇಂತಹ ತರಾವರಿ ಹೇಳಿಕೆಗಳು ಹೈಕಮ್ಯಾಂಡ್ ವರಿಷ್ಟರನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪರವಿರೋಧಗಳ ಹೇಳಿಕೆಗಳು ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸುತ್ತಿವೆ. ಎಂ.ಎಲ್.ಸಿ. ಡಾ.ಯತೀಂದ್ರ ಅವರು ಬೆಳಗಾವಿಯಲ್ಲಿ ಆಡಿರುವ ಮಾತು ಗಂಭೀರವಾದ ರಾಜಕೀಯ ಬದಲಾವಣೆಯ ಮುನ್ಸೂಚನೆ ನೀಡಿದೆ. ಅದಕ್ಕೆ ಪ್ರತಿಯಾಗಿ ರಾಮನಗರ ಶಾಸಕರಾದ ಇಕ್ಷಾಲ್ ಹುಸೇನ್ ಅವರು ಡಿ.ಕೆ.ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿರುವುದು ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಸಚಿವರಾದ ಎಂ.ಬಿ.ಪಾಟಿಲ್‌ರು ತಾನು ಮುಖ್ಯಮಂತ್ರಿ ಆಗುವ ಇಂಗಿತ ವ್ಯಕ್ತಪಡಿಸಿ ರಾಜಕೀಯ ಸನ್ಯಾಸಿಯಲ್ಲ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸುಮಾರು ಒಂದೂವರೆ ಕೋಟಿ ಜನಸಂಖ್ಯೆಯ ದಲಿತ ಜನಾಂಗಗಳಲ್ಲಿ ರಾಜಕೀಯ ಚಿಂತನೆಗಳ ದೊಡ್ಡ ಅಲೆಗಳನ್ನೇ ಎಬ್ಬಿಸುತ್ತೇವೆ ಎಂದರು.
ಮತ್ತೊಬ್ಬ ಮುಖಂಡರಾದ ದಲಿತ ಸಂರಕ್ಷಾ ಸಮಿತಿ ರಾಜ್ಯಾಧ್ಯಕ್ಷರಾದ ಲಯನ್ ಬಾಲಕೃಷ್ಣ ಮಾತನಾಡಿ ಈ ಹಿಂದೆ ದಲಿತ ಸಂಘಟನೆಗಳು ದಲಿತ ಮುಖ್ಯಮಂತ್ರಿ ಹೋರಾಟ ಆರಂಭಿಸಿದ್ದಕ್ಕಾಗಿ ‘ದಲಿತ ಉಪ ಮುಖ್ಯಮಂತ್ರಿ’ ಮಾಡುವ ಇಚ್ಛಾಶಕ್ತಿ ರಾಜಕೀಯ ಪಕ್ಷಗಳಲ್ಲಿ ಮೂಡಿಬಂದು ಬಿ.ಜೆ.ಪಿ. ಮತ್ತು ಕಾಂಗ್ರೆಸ್ ಆಡಳಿತಗಳಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳಾದರು. ಸಮರ್ಥ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿರುವ ಸಿದ್ದರಾಮಯ್ಯ ಅವರನ್ನು ಮುಂದಿನ ಎರಡೂವರೆ ವರ್ಷಗಳಿಗೆ ಮುಂದುವರೆಸುವುದಾದರೆ ದಲಿತ ಸಂಘಟನೆಗಳ ಯಾವುದೇ ತಕಾರಾರು ಇರುವುದಿಲ್ಲ. ಇದೀಗ ದಲಿತ ಸಂಘಟನೆಗಳು ಮತ್ತು ದಲಿತ ಜನಾಂಗವು ರಾಜಕೀಯವಾಗಿ ಜಾಗೃತಿಗೊಂಡು ಬೀದಿಗಿಳಿದು ದಲಿತ ಮುಖ್ಯಮಂತ್ರಿ ಹೋರಾಟಕ್ಕೆ ಚಾಲನೆ ನೀಡುವ ಕಾಲ ಸನ್ನಿಹಿತವಾಗಿದೆ ಎಂದು ತಿಳಿಸಿದರು.
ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಮಾತನಾಡಿ ಕಳೆದ ೭೦ ವರ್ಷಗಳಿಂದ ಕಾಂಗ್ರೆಸ್ ಹೈಕಮ್ಯಾಂಡ್ ಕೆ.ಹೆಚ್.ರಂಗನಾಥ್, ಬಿ.ರಾಚಯ್ಯ ಮತ್ತು ಇದೀಗ ಮಲ್ಲಿಕಾರ್ಜುನ ಖರ್ಗೆ ಮುಂತಾದ ಹಿರಿಯ ಕಾಂಗ್ರೆಸ್ ಮುಖಂಡರು ದಲಿತ ಜನಾಂಗದವರÀ ತಾಳ್ಮೆಯನ್ನು ಪರೀಕ್ಷಿಸುತ್ತಾ ಬಂದಿದೆ ಅಂದಿನ ಬಿ.ಬಸವಲಿಂಗಪ್ಪ, ಮಲ್ಲಿಕಾರ್ಜುನಸ್ವಾಮಿ, ಎನ್.ರಾಚಯ್ಯ, ಮುಖ್ಯಮಂತ್ರಿಗಳಾಗುವ ಸಂಧರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ಪ್ರಬಲ ಜಾತಿಗಳ ಒತ್ತಡಕ್ಕೆ ಮಣಿದು ದಲಿತ ನಾಯಕತ್ವವನ್ನು ಹಿಂದಕ್ಕೆ ಸರಿಸಿದೆ. ಇದೇ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷವು ಆಗಾಗ ಅಧಿಕಾರ ಕಳೆದುಕೊಳ್ಳುವುದಕ್ಕೆ ದಲಿತ ಜನಾಂಗಗಳು ಕಾಂಗ್ರೆಸ್ ಪಕ್ಷಕ್ಕೆ ಹಾಕಿದ ಹಿಡಿಶಾಪವೇ ಕಾರಣವಾಗಿದೆ. ಹೀಗಾಗಿ ದಲಿತ ಜನಾಂಗಗಳ ಋಣ ತೀರಿಸುವ ಕಾರ್ಯವು ಕಾಂಗ್ರೆಸ್ ಹೈಕಮಾಂಡ್ ಗೆ ಇದುವರೆಗೂ ಸಾಧ್ಯವೇ ಆಗಲಿಲ್ಲ. ಕಾಂಗ್ರೆಸ್ ಪಕ್ಷವು ಇಂದಿಗೂ ಸಹ ದಲಿತರ ಋಣದಲ್ಲಿರುವುದನ್ನು ಮರೆಯಬಾರದು. ಕಾಂಗ್ರೆಸ್ ಇಂದಿನ ಮುತ್ಸದ್ದಿಗಳಾದ ಮಲಿಕಾರ್ಜುನ ಖರ್ಗೆ, ಕೆ.ಹೆಚ್ ಮುನಿಯಪ್ಪ ಡಾ.ಜಿ.ಪರಮೇಶ್ವರ್, ಡಾ. ಹೆಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಇವರುಗಳು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಗಳ ರೂಪದಲ್ಲಿ ಸಮರ್ಥ ಆಡಳಿತಗಾರರಾಗಿದ್ದಾರೆ ಮತ್ತು ಪಕ್ಷದ ಕಟ್ಟಾಳುಗಳಾಗಿ ಮುಂಚೂಣಿಯಲ್ಲಿ ನಿಂತಿದ್ದಾರೆ. ಮುಂದಿನ ನವೆಂಬರ್ ೨೧ರ ನಂತರ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುವುದಾದರೆ ಇವರುಗಳಲ್ಲಿ ಯಾರಾದರೊಬ್ಬರನ್ನು ಮುಂದಿನ ಮುಖ್ಯಮಂತ್ರಿಗಳಾಗಿ ಆಯ್ಕೆ ಮಾಡಬೇಕಾಗಿ ಹೈಕಮ್ಯಾಂಡ್‌ನ್ನು ಆಗ್ರಹಿಸುತ್ತೇವೆ. ಇಲ್ಲವಾದರೆ ಕಾಂಗ್ರೆಸ್ ಪಕ್ಷವು ಮುಂದಿನ ದಿನಗಳಲ್ಲಿ ಕಷ್ಟದ ದಿನಗಳನ್ನು ಎದುರಿಸುವುದರಲ್ಲಿ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಎಚ್ಚರಿಕೆಯನ್ನು ಸಹ ನೀಡಿದರು. ದಲಿತರೊಬ್ಬರು ಮುಂದಿನ ಮುಖ್ಯಮಂತ್ರಿ ಆಗಲೇಬೇಕಾಗುತ್ತದೆ ಎಂದು ದಲಿತ ಸಂಘಟನೆಗಳ ಐಕ್ಯ ಹೋರಾಟಕ್ಕೆ ಕರೆ ನೀಡಬೇಕಾಗುತ್ತದೆ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ದಲಿತ ಪ್ರಜಾ ವಿಮೋಚನ ಸೇನೆ ರಾಜ್ಯ ಅಧ್ಯಕ್ಷರು ಮುನಿ ಆಂಜಿನಪ್ಪ, ದಲಿತ ಸ್ವಾಭಿಮಾನ ಸೇನೆ ರಾಜ್ಯ ಅಧ್ಯಕ್ಷರು ಬಂಡೆ ಕುಮಾರ್, ಸಮತ ಸೈನಿಕದಳದ ಜಿಲ್ಲಾ ಅಧ್ಯಕ್ಷರು ಹೇರೂರು ಧನರಾಜ್, ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾ ಅಧ್ಯಕ್ಷರು ಎನ್.ಕೆ.ನಿಧಿಕುಮಾರ್, ಸುರೇಶ್ ರಾಜ್ (ಉದ್ಯಮಿ), ಡಿ.ಎಫ್.ಜಗದೀಶ್, ಭೀಮಕ್ರಾಂತಿ ಸೇನೆಯ ಎಂ.ರಾಮಯ್ಯ, ಹಿರಿಯ ದಲಿತ ಸಾಹಿತಿ ದಲಿತ ಸಂರಕ್ಷ ಸಮಿತಿ ರಾಜ್ಯ ಕಾರ್ಯದರ್ಶಿ ಸುರೇಶ್ ಟಿ.ಸಿ ಸಂತೆಪೇಟೆ, ವೆಂಕಟೇಶ್ ಎನ್.ಪಿ ದಲಿತ ಸಂರಕ್ಷಾ ಸಮಿತಿ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷರು ಫಾರೂಕ್ ಪಾಷಾ, ಚಲವಾದಿ ಮಹಾಸಭಾ ಹೆಗ್ಗೆರೆ ಕೃಷ್ಣಪ್ಪ, ಸಮತಾ ಸೈನಿಕ ದಳ ತಾಲೂಕು ಅಧ್ಯಕ್ಷ ಹಟ್ಟಿರಂಗಯ್ಯ ಇನ್ನು ಮುಂತಾದವರು ಉಪಸ್ಥಿತರಿದ್ದರು.





