
ತುಮಕೂರು: ಬಿದರಕಟ್ಟೆಯಲ್ಲಿರುವ ತುಮಕೂರು ವಿಶ್ವವಿದ್ಯಾನಿಲಯದ ನೂತನ ಕ್ಯಾಂಪಸ್ ‘ಜ್ಞಾನಸಿರಿ’, ಶೈಕ್ಷಣಿಕ ಭವನ ಹಾಗೂ ಇತರ ಕಟ್ಟಡಗಳ ಲೋಕಾರ್ಪಣಾ ಸಮಾರಂಭವನ್ನು ನ.೦7 ರಂದು ಬೆಳಗ್ಗೆ ೧೧-೦೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಶ್ರೀ ಥಾವರ್‌ಚಂದ್ ಗೆಹ್ಲೋಟ್ ಅವರು ನೂತನ ಕ್ಯಾಂಪಸ್ ಲೋಕಾರ್ಪಣೆ ಮಾಡಲಿದ್ದಾರೆ. ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ನೂತನವಾಗಿ ನಿರ್ಮಾಣಗೊಂಡಿರುವ ಶೈಕ್ಷಣಿಕ ಭವನ ಹಾಗೂ ಇತರ ಕಟ್ಟಡಗಳ ಉದ್ಘಾಟನೆ ಮಾಡಲಿದ್ದಾರೆ.
ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ, ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವರಾದ ಶ್ರೀ ವಿ. ಸೋಮಣ್ಣ, ಗೃಹಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವರು ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿಗಳಾಗಿರುವ ಡಾ. ಎಂ. ಸಿ. ಸುಧಾಕರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಕರ್ನಾಟಕ ಸರ್ಕಾರದ ನವದೆಹಲಿ ಪ್ರತಿನಿಧಿಗಳಾದ ಶ್ರೀ ಟಿ. ಬಿ. ಜಯಚಂದ್ರ, ಕ.ರಾ.ರ.ಸಾ.ನಿ. ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಎಸ್.ಆರ್.ಶ್ರೀನಿವಾಸ್, ಸಂಸದರುಗಳಾದ ಶ್ರೀ ಗೋವಿಂದ ಎಂ. ಕಾರಜೋಳ, ಡಾ. ಸಿ.ಎನ್. ಮಂಜುನಾಥ್, ಶಾಸಕರಾದ ಶ್ರೀ ಕೆ.ಎನ್. ರಾಜಣ್ಣ, ಶ್ರೀ ಸಿ.ಬಿ. ಸುರೇಶ್‌ಬಾಬು, ಶ್ರೀ ಎಂ.ಟಿ. ಕೃಷ್ಣಪ್ಪ, ಶ್ರೀ ಕೆ. ಷಡಕ್ಷರಿ, ಶ್ರೀ ಬಿ. ಸುರೇಶ್ ಗೌಡ, ಡಾ. ಹೆಚ್. ಡಿ. ರಂಗನಾಥ್, ಶ್ರೀ ಜಿ.ಬಿ. ಜ್ಯೋತಿಗಣೇಶ್, ಶ್ರೀ ಹೆಚ್. ವಿ. ವೆಂಕಟೇಶ್, ವಿಧಾನಪರಿಷತ್ ಸದಸ್ಯರಾದ ಶ್ರೀ ಚಿದಾನಂದ ಎಂ. ಗೌಡ, ಶ್ರೀ ರಾಜೇಂದ್ರ ಆರ್., ಶ್ರೀ ಡಿ.ಟಿ. ಶ್ರೀನಿವಾಸ್, ಗಳಿಗೇನಹಳ್ಳಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀ ರಾಜಣ್ಣ, ನಾಗವಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಂಗಳಗೌರಮ್ಮ ಎಸ್. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಎಂ. ವೆಂಕಟೇಶ್ವರಲು, ಕುಲಸಚಿವರಾದ ಶ್ರೀಮತಿ ನಾಹಿದಾ ಜಮ್ ಜಮ್ ಉಪಸ್ಥಿತರಿರುವರು.
ನೂತನ ಶೈಕ್ಷಣಿಕ ಭವನವು ಅಂದಾಜು ೧೭ ಸಾವಿರ ಚದರ ಮೀಟರ್ ವಿಸ್ತೀರ್ಣದ್ದಾಗಿದ್ದು, ರೂ. ೪೮.೭೪ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಕರ್ನಾಟಕ ಸರ್ಕಾರದ ಎಸ್‌ಸಿಪಿ-ಟಿಎಸ್‌ಪಿ ಅನುದಾನ ಹಾಗೂ ವಿಶ್ವವಿದ್ಯಾನಿಲಯದ ಆಂತರಿಕ ಸಂಪನ್ಮೂಲದಿ0ದ ನಿರ್ಮಾಣಗೊಂಡ ಕಲಾಭವನ, ರೂ. ೨.೫ ಕೋಟಿ ವೆಚ್ಚದ ಪ್ರಧಾನ ದ್ವಾರ ಹಾಗೂ ಆವರಣ ಗೋಡೆ ಕಾಮಗಾರಿಗಳು ಈ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳ್ಳಲಿವೆ.
ಜ್ಞಾನಸಿರಿ ಕ್ಯಾಂಪಸ್‌ನಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಸ್ನಾತಕೋತ್ತರ ಪುರುಷ ಮತ್ತು ಮಹಿಳೆಯರ ಹಾಸ್ಟೆಲ್‌ಗಳು, ಪ.ಜಾ./ಪ.ಪಂ. ಸಂಶೋಧನಾರ್ಥಿಗಳ ಹಾಸ್ಟೆಲ್, ಸ್ನಾತಕೋತ್ತರ ಪುರುಷರ ಹಾಸ್ಟೆಲ್, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಯೋಗಾಲಯ, ಉಪಪ್ರಾದೇಶಿಕ ವಿಜ್ಞಾನ ಕೇಂದ್ರಗಳು ಈಗಾಗಲೇ ಲೋಕಾರ್ಪಣೆಗೊಂಡಿವೆ. ವಿಪ್ರೋ ಸಂಸ್ಥೆಯ ಅನುದಾನದಿಂದ ಜೀವವೈವಿಧ್ಯ ಉದ್ಯಾನ ನಿರ್ಮಾಣವಾಗುತ್ತಿದ್ದು, ೬೦೦ ಪ್ರಭೇದÀಗಳ ನಾಲ್ಕೂವರೆ ಸಾವಿರ ಗಿಡಮರಗಳು ಇಲ್ಲಿ ಬೆಳೆದು ನಿಲ್ಲಲಿವೆ.



