ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯಿತಿಯಲ್ಲಿ ಕಾಮಗಾರಿಗಳನ್ನೇ ನಡೆಸದೆ ನಕಲಿ ಬಿಲ್‌ಗಳ ಮೂಲಕ ಲಕ್ಷಾಂತರ ರೂಪಾಯಿಗಳ ಸರ್ಕಾರಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿದ್ದು, ಇದು ಪಟ್ಟಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಪಟ್ಟಣ ಪಂಚಾಯಿತಿಯ ಕೆಲವು ಸದಸ್ಯರೇ ಈ ಅಕ್ರಮಗಳ ಕುರಿತು ಸಿಡಿದೆದ್ದಿದ್ದು, ಕೂಡಲೇ ಲೋಕಾಯುಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಅನಾರೋಗ್ಯದ ನೆಪದಲ್ಲಿ ಸಭೆ ಮುಂದೂಡಿಕೆ: ಸದಸ್ಯರ ಆಕ್ರೋಶ: ಸುಮಾರು ಒಂದು ವರ್ಷದ ಬಳಿಕ ಇಂದು ನಿಗದಿಯಾಗಿದ್ದ ಸಾಮಾನ್ಯ ಸಭೆಯನ್ನು ಪ.ಪಂ. ಅಧ್ಯಕ್ಷರು ಅನಾರೋಗ್ಯದ ನೆಪವೊಡ್ಡಿ ಮುಂದೂಡಿದ್ದಾರೆ. ಬೆಳಗ್ಗೆ ೭:೪೫ ಕ್ಕೆ ಮುಖ್ಯ ಅಧಿಕಾರಿಯವರು ಸಭೆ ಮುಂದೂಡಿಕೆಯ ಮೆಮೊ ಕಳುಹಿಸಿದ್ದಾರೆ. ಸಭೆಯಲ್ಲಿ ಜಮಾ ಖರ್ಚಿನ ಬಗ್ಗೆ ಲೆಕ್ಕ ಕೇಳಲು ದಾಖಲೆಗಳ ಸಮೇತ ಆಗಮಿಸಿದ್ದ ಸದಸ್ಯರು, ‘ಕೋರಂ’ ಇದ್ದರೂ ಬೇಕೆಂದೇ ಸಭೆ ಮುಂದೂಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೀಟಿಂಗ್ ಮುಂದೂಡಿಕೆ ಆದೇಶಕ್ಕೆ ಬಂದಿರುವ ಸದಸ್ಯರ ಪೈಕಿ ಯಾರೊಬ್ಬರೂ ಸಹಿ ಹಾಕಿಲ್ಲ. ಆದ್ದರಿಂದ, ಕಾನೂನು ರೀತಿಯಲ್ಲಿ ಸಭೆ ನಡೆಸುವಂತೆ ಸದಸ್ಯರು ಪಟ್ಟು ಹಿಡಿದರು.
ಕಾಮಗಾರಿಯೇ ಇಲ್ಲ, ಲಕ್ಷಗಳ ನಕಲಿ ಬಿಲ್ ಡ್ರಾ: ಪಟ್ಟಣ ಪಂಚಾಯಿತಿಯ ಬಹುತೇಕ ಎಲ್ಲಾ ವಾರ್ಡ್ಗಳಲ್ಲೂ ಕಾಮಗಾರಿ ನಡೆಯದಿದ್ದರೂ ಬಿಲ್ ಪಾಸ್ ಮಾಡಿಸಿಕೊಂಡಿರುವುದಕ್ಕೆ ಸಂಬAಧಿಸಿದAತೆ ಸದಸ್ಯರುಗಳು ಸ್ಪಷ್ಟ ದಾಖಲೆಗಳನ್ನು ಮುಂದಿಟ್ಟು ಸ್ಪಷ್ಟನೆ ಕೇಳಿದರು.
ಇಂದಿರಾ ಕ್ಯಾಂಟೀನ್‌ನ ವಿಪರ್ಯಾಸ: ಬಡವರ ಆಹಾರಕ್ಕಾಗಿ ಸ್ಥಾಪಿಸಲಾದ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ೪ ಲಕ್ಷ ಬಿಲ್ ಮಾಡಿದ್ದಾರೆ. ಏನಾದರೂ ಸೈಟ್ ಅಥವಾ ಬಿಲ್ಡಿಂಗ್ ಕಟ್ಟಿದ್ದೀರಾ ಎಂದು ಸದಸ್ಯರು ಲೇವಡಿ ಮಾಡಿದರು.
ಇಲ್ಲದ ಟ್ಯಾಂಕ್ ಸ್ವಚ್ಛತೆ: ವೈ.ಎಸ್. ಪಾಳ್ಯದ ಕಾಲೇಜು ಹಿಂಭಾಗದಲ್ಲಿ ಟ್ಯಾಂಕ್ ಇಲ್ಲವೇ ಇಲ್ಲ. ಆದರೆ, ಆ ಟ್ಯಾಂಕ್ ಕ್ಲೀನ್ ಮಾಡಿದ್ದೇವೆ ಎಂದು ೨೪,೦೦೦ ರೂ. ಬಿಲ್ ಹಾಕಿದ್ದಾರೆ ಎಂದು ಸದಸ್ಯ ಜುಬೇರ್ ದಾಖಲೆಗಳನ್ನು ತೋರಿಸಿದರು. ಸದಸ್ಯನಾದ ನನಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದು ಅವರು ಆರೋಪಿಸಿದರು.
ಮೋಟಾರ್ ರಿಪೇರಿ: ವಾರ್ಡ್ ನಂ. ೧೪ ರಲ್ಲಿ ಮೋಟಾರ್ ರಿಪೇರಿಗೆ ಸಾಮಗ್ರಿ ಖರೀದಿ ಮಾಡಿದ್ದೇವೆ ಎಂದು ೯೪,೦೦೦ ರೂ. ಬಿಲ್ ಮಾಡಿದ್ದು, ಈ ಹಣದಲ್ಲಿ ಹೊಸ ನಾಲ್ಕು ಮೋಟಾರ್‌ಗಳನ್ನೇ ತರಬಹುದಿತ್ತು ಎಂದು ಸದಸ್ಯರು ಆರೋಪಿಸಿದ್ದಾರೆ.
ಸಿದ್ದಿಕ್ ಅವರ ಗಂಭೀರ ಆರೋಪ: ವಾರ್ಡ್ ನಂ. ೪ ರಲ್ಲಿ ಕೆಲಸವೇ ಮಾಡಿಲ್ಲ. ಆದರೂ ಬೇರೆ ವಾರ್ಡಿನಲ್ಲಿ ಮಾಡಿದ ಕೆಲಸದ ಫೋಟೋ ಹಾಕಿ ನಕಲಿ ಬಿಲ್ ಮಾಡಿದ್ದಾರೆ ಎಂದು ಸದಸ್ಯ ಸಿದ್ದಿಕ್ ಆರೋಪಿಸಿದರು. ಡಾ.ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಅನಗತ್ಯವಾಗಿ ಹಣ್ಣಿನ ಬುಟ್ಟಿ ಮತ್ತು ಮಣಿಹಾರ ತರಿಸಿರುವ ೯೪,೦೦೦ ರೂ. ನಕಲಿ ಬಿಲ್‌ಗಳ ವಿರುದ್ಧವೂ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಮಣ್ಣು ಹಾಕಿರುವ ನಾಟಕ: ಲಿಂಗಪ್ಪನಪಾಳ್ಯದ ನಾಮಿನಿ ಸದಸ್ಯ ಕಾಯಿಕುಮಾರ್ ಮಾತನಾಡಿ, ತಮ್ಮ ಊರಿನಲ್ಲಿ ಈಗಾಗಲೇ ಸಿಸಿ ರಸ್ತೆ ನಿರ್ಮಾಣವಾಗಿದ್ದು, ೭೫ ಟಿಪ್ಪರ್ ಮಣ್ಣು ಹಾಕಿದ್ದೇವೆ ಎಂದು ತೋಟದಲ್ಲಿ ಜೆಸಿಬಿ ನಿಲ್ಲಿಸಿ ಫೋಟೋ ತೆಗೆದು ಹಣ ಡ್ರಾ ಮಾಡಲಾಗಿದೆ. ೪೯,೨೪೦ ರೂ. ಹಾಗೂ ೭೯,೪೦೦ ರೂ. ಬಿಲ್ ಮಾಡಿದ್ದಾರೆ ಎಂದು ದೂರಿದರು.
ಕಾಮಗಾರಿಗಳ ಫೋಟೋ, ಜಿಪಿಎಸ್ ಫೋಟೋ ಇಲ್ಲದಿದ್ದರೂ ಬಿಲ್‌ಗಳನ್ನು ಪಾಸ್ ಮಾಡಲಾಗಿದೆ ಎಂದು ಸದಸ್ಯೆ ಬಿಬಿ ಫಾತಿಮಾ ಸಹ ಆರೋಪಿಸಿದ್ದಾರೆ.
ಪಟ್ಟಣ ಪಂಚಾಯಿತಿಯ ಎಲ್ಲಾ ಕಾಮಗಾರಿಗಳ ಬಿಲ್‌ಗಳ ವಿಚಾರದಲ್ಲಿಯೂ ಅವ್ಯವಹಾರ ನಡೆದಿದ್ದು, ಕಾಮಗಾರಿಯ ಜಿಪಿಎಸ್ ಫೋಟೋ ಮತ್ತು ಇತರೆ ಅಗತ್ಯ ದಾಖಲೆಗಳಿಲ್ಲದೆ ಬೇಕಾಬಿಟ್ಟಿಯಾಗಿ ಬಿಲ್‌ಗಳನ್ನು ಮಾಡಿದ್ದಾರೆ. ಹುಳಿಯಾರು ಪಟ್ಟಣದ ಜನರ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಈ ಎಲ್ಲ ಅಕ್ರಮಗಳ ಬಗ್ಗೆ ಲೋಕಾಯುಕ್ತ ತನಿಖೆ ಆಗಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಪ.ಪಂ. ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ಕೌನ್ಸಿಲರ್‌ಗಳಾದ ಮಹಮ್ಮದ್ ಜುಬೇರ್, ಅಬೂಬಕರ್ ಸಿದ್ಧಿಕ್, ಬಿಬಿ ಫಾತಿಮಾ, ಶೃತಿ ಸನತ್, ಸಂದ್ಯಾಕಿರಣ್, ನಾಮಿನಿ ಸದಸ್ಯ ವೆಂಕಟೇಶ್, ಕಾಯಿ ಕುಮಾರ್ ಸೇರಿದಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್, ಇಂಜಿನಿಯರ್ ಮಂಜುನಾಥ್, ಕಂದಾಯ ಅಧಿಕಾರಿ ಶ್ರುತಿ ಉಪಸ್ಥಿತರಿದ್ದರು.

(Visited 1 times, 1 visits today)