ರಾಷ್ಟ್ರೀಯ ಪತ್ರಿಕಾ ದಿನಾಚರಣೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ಅಭಿಮತ
ಬೆ0ಗಳೂರು: ರಾಜಕಾರಣ ಮತ್ತು ಮಾಧ್ಯಮ ಸಮಾಜದ ಎರಡು ಕಣ್ಣುಗಳಂತೆ. ಇವುಗಳೆರಡು ಸಮಾನವಾಗಿ, ಸಾಮರಸ್ಯದಿಂದ ಕೆಲಸ ಮಾಡಿದರೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದು. ಒಂದು ಕಣ್ಣು ಸಮಾಜದ ಸಮಸ್ಯೆಗಳನ್ನು ತಿಳಿಸುತ್ತದೆ. ಆಗ ಇನ್ನೊಂದು ಕಣ್ಣು ಅದಕ್ಕೆ ಪರಿಹಾರ ಒದಗಿಸುತ್ತದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ಹೇಳಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಪ್ರೆಸ್ ಕ್ಲಬ್ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾಧ್ಯಮ ಮತ್ತು ರಾಜಕಾರಣ ಎಂಬ ಎರಡು ಕಣ್ಣುಗಳು  ಸತ್ಯವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ವಿಫಲವಾದರೆ ಸಮಾಜ ಕತ್ತಲೆಗೆ ಜಾರುತ್ತದೆ. ಇವುಗಳು ಜೊತೆ ಜೊತೆಯಾಗಿ ಇದ್ದರೆ ಸಮಾಜದಲ್ಲಿ ಶಾಂತಿ ಇರುತ್ತದೆ. ಆಗ ಮಾತ್ರ ಶುದ್ಧ ಭಾರತ ನಿರ್ಮಾಣ ಮಾಡಬಹುದು. ನಮ್ಮ ಸಮಾಜದಲ್ಲಿ ಏಕತೆ ಮತ್ತು ಸಾಮರಸ್ಯ ಕಾಪಾಡಲು ಹಿಂದೆಯೂ ಮಾಧ್ಯಮಗಳು ಕೊಡುಗೆ ನೀಡಿದ್ದವು. ಈಗಲೂ ಕೊಡುಗೆ ನೀಡುತ್ತಾ ಇವೆ ಎಂದರು.
ಸಮಾಜದ ಅಭಿಪ್ರಾಯ ರೂಪಿಸುವಲ್ಲಿ ಮಾಧ್ಯಮಗಳ ಜವಾ ಬ್ದಾರಿ ದೊಡ್ಡದು. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಜವಾಬ್ದಾರಿಯುತ ಮಾಧ್ಯಮಗಳ ಇಂದಿನ ಅಗತ್ಯ. ಜನ ಸಾಮಾನ್ಯರಿಗೆ ತೊಂದರೆ ಬಂದಾಗ ಮಾಧ್ಯಮಗಳು ಮಾನವೀಯತೆ ಉಳಿಸಿಕೊಂಡು ಹೋಗಬೇಕು. ದೇಶದ ಸಂಸ್ಕತಿ, ಏಕತೆಯನ್ನು ಉಳಿಸಿಕೊಂಡು ಬಲಿಷ್ಠ ದೇಶ ನಿರ್ಮಿಸುವ ಜವಾಬ್ದಾರಿ ಸಹ ಮಾಧ್ಯಮಗಳ ಮೇಲಿದೆ ಎಂದು ಹೇಳಿದರು.
ಮಾಧ್ಯಮಗಳಿಗೆ ದೊಡ್ಡ ಜವಾಬ್ದಾರಿ ಇರುವುದರಿಂದ ಪ್ರಜಾಪ್ರ ಭುತ್ವದ ನಾಲ್ಕನೇ ಅಂಗ ಎಂದು ಹೇಳಲಾಗಿದೆ. ಆ ದ್ದರಿಂದ ಮಾಧ್ಯಮಗಳಿಗೆ ವಿಶೇಷ ಸ್ಥಾನ ಕೊಡಲಾಗಿದೆ. ರಾಜಕಾರಣ ಮಾಧ್ಯಮವನ್ನು ಬಿಟ್ಟಿರಲು ಸಾಧ್ಯವಿಲ್ಲ. ಜವಾಬ್ದಾರಿಯುತ ಆಡಳಿತವನ್ನು ಸರ್ಕಾರ ನೀಡಲು ಮಾಧ್ಯಮ ಬೇಕೇ ಬೇಕು. ಸಮಾಜಕ್ಕೆ ಕಂಟಕ ಎದುರಾದಾಗ ಮಾಧ್ಯಮಗಳು ನೆರವಿಗೆ ಬರಬೇಕು. ಜನರಿಗೆ ವಿಶ್ವಾಸ ಬರುವ ರೀತಿ ಮಾಧ್ಯಮಗಳು ಕೆಲಸ ಮಾಡಬೇಕು. ಸ್ವಸ್ಥ ಸಮಾಜ ನಿರ್ಮಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಇಂದು ಮಾಧ್ಯಮಗಳು ಸಂದಿಗ್ಧ ಪರಿಸ್ಥಿತಿಗೆ ಬಂದಿವೆ. ಮಾಧ್ಯಮವನ್ನು ಉಳಿಸಬೇಕಾಗಿದೆ. ಮುದ್ರಣ ಮತ್ತು ಪ್ರಸಾರ ಮಾಧ್ಯಮ ಉಳಿಯಬೇಕಾಗಿದೆ. ಟಿಆರ್‌ಪಿಗಿಂತ ಸಮಾಜದ ಒಳಿತು ಮುಖ್ಯವಾಗಬೇಕು. ಜನಪ್ರತಿನಿಧಿಗಳಿಗೆ ಖುಷಿ ಪಡುವ ವಿಚಾರ ಮಾತ್ರ ಬರೆಯಬಾರದು. ಟೀಕೆ ಟಿಪ್ಪಣಿಗಳೂ ಬೇಕು. ಎಲ್ಲವನ್ನೂ ನಾವು ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಸತ್ಯ ದಾಖಲೆಯಲ್ಲಿ ಇರುತ್ತದೆ ಎಂದರು.
ಹಲವಾರು ಕಾರ್ಯಕ್ರಮಗಳು
ಮಾಧ್ಯಮ ಅಕಾಡೆಮಿಯು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದೆ. ಇಂದಿನ ತಲೆಮಾರಿನ ಪತ್ರಕರ್ತರಿಗೆ ಸಹಾಯವಾಗುವ ಹಾಗೂ ತರಬೇತಿ ನೀಡುವ ಕಾರ್ಯಕ್ರಮಗಳನ್ನು ಅಕಾಡೆಮಿ ಆಯೋಜಿಸುತ್ತಿದೆ. ಅಕಾಡೆಮಿಗೆ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು.
ಪತ್ರಕರ್ತರಿಗೆ ತರಬೇತಿಗೆ ಅವಕಾಶ
ಪತ್ರಕರ್ತರಿಗೆ ತರಬೇತಿ ನೀಡಲು ಸರ್ಕಾರದಿಂದ ಕಾರ್ಯಕ್ರಮ ರೂಪಿಸಲಾಗುವುದು. ವಿಧಾನಸಭೆ ಕಲಾಪಗಳ ವೀಕ್ಷಣೆಗೆ ಪೂರ್ಣ ದಿನ ವರದಿ ಮಾಡಲು ಅವಕಾಶ ನೀಡಲಾಗುವುದು. ಹೊಸ ಪತ್ರಕರ್ತರಿಗೆ, ಕಲಾಪವನ್ನು ನೇರವಾಗಿ ವೀಕ್ಷಿಸಿ ವರದಿ ಮಾಡಲು ಅವಕಾಶ ನೀಡಲಾಗುವುದು ಎಂದು ಸ್ಪೀಕರ್ ಯು.ಟಿ. ಖಾದರ್ ಅವರು ತಿಳಿಸಿದರು.
ಶಾಸಕರಾದ ರಿಜ್ವಾನ್ ಅರ್ಷದ್ ಮಾತನಾಡಿ. ಆರೋಗ್ಯವಂತ ಪ್ರಜಾಪ್ರಭುತ್ವಕ್ಕೆ ಸ್ವತಂತ್ರ ಮಾಧ್ಯಮ ಬೇಕು.  ಮಾಧ್ಯಮಗಳಿಗೆ ಸ್ವತಂತ್ರ ಇಲ್ಲದಿದ್ದರೆ ಆರೋಗ್ಯವಾಗಿರುವುದಿಲ್ಲ. ಭಾರತೀಯ ಮಾಧ್ಯಮಗಳನ್ನು ಕಾರ್ಪೋರೇಟ್ ಜಗತ್ತು ಆಳುತ್ತಿದೆ. ಮಾಧ್ಯಮಗಳಿಗೆ ಸ್ವತಂತ್ರ ಇಲ್ಲದಿದ್ದರೆ ಹೆಸರಿಗೆ ಮಾತ್ರ ಮಾಧ್ಯಮ ಆಗುತ್ತದೆ. ಸರ್ಕಾರವನ್ನು ಪ್ರಶ್ನೆ ಮಾಡದಿದ್ದರೆ ಪ್ರಯೋಜನವಿಲ್ಲ. ಈ ನಿಟ್ಟಿನಲ್ಲಿ ಮಾಧ್ಯಮಗಳು ಕೆಲಸ ಮಾಡಲಿ ಎಂದರು.
ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಷಾ ಖಾನಂ ಮಾತನಾಡಿ, ಇಂದು ಸುದ್ದಿಗಳ ಪ್ರವಾಹವೇ ಇದೆ. ಈ ಪ್ರವಾಹದಲ್ಲಿ ವಿಶ್ವಾಸಾರ್ಹ ಸುದ್ದಿ ಯಾವುದು ಎಂಬುದೇ ಗೊಂದಲ.  ಫೇಕ್ ಜರ್ನಲಿಸಂ ಬೆಳೆಯಲು ಬಿಡಬಾರದು. ಮಾಧ್ಯ ಮಗಳಿಗೆ ವಿಶ್ವಾಸಾರ್ಹತೆಯೇ ಮುಖ್ಯವಾಗಬೇಕು ಎಂದರು.
 ಕರ್ನಾಟಕ ಮಾಧ್ಯಮ ಅಕಾಡೆಮಿಯು ವಿಶ್ವಾಸಾರ್ಹ ಸುದ್ದಿಗಳಿಗೆ ಆದ್ಯತೆ ನೀಡುತ್ತಿದೆ. ವಿಶ್ವಾಸಾರ್ಹ ಸುದ್ದಿಗಳನ್ನು ಬರೆಯುವುದು ಹೇಗೆ ಎಂಬುದನ್ನು ತಿಳಿಸಲು ಪತ್ರಕರ್ತರಿಗೆ ಹಲವಾರು, ಕಾರ್ಯಾಗಾರ, ವಿಚಾರ ಸಂಕಿರಣ ಆಯೋಜಿಸುತ್ತಿದೆ. ವೃತ್ತಿಯಲ್ಲಿ ನೈತಿಕ ಮೌಲ್ಯಗಳನ್ನು ಕಾಪಾಡುವ ಜವಾಬ್ದಾರಿ ಎಲ್ಲ ಪತ್ರಕರ್ತರ ಮೇಲಿದೆ.  ಅಕಾಡೆಮಿ ಆರಂಭವಾದಾಗಿನಿ0ದ ಸುಳ್ಳು ಸುದ್ದಿಗಳ ವಿರುದ್ಧವೇ ಕೆಲಸ ಮಾಡುತ್ತಿದೆ. ಅಕಾಡೆಮಿಯು ಫ್ಯಾಕ್ಟ್ ಚೆಕ್ ಕ್ರಮಗಳಿಗೆ ಬೆಂಬಲ ನೀಡುತ್ತಾ ಬರುತ್ತಿದೆ ಎಂದರು.
 ಪತ್ರಿಕೋದ್ಯಮದ ಗುಣಮಟ್ಟವನ್ನು ಹೆಚ್ಚಿಸಲು ಅಕಾಡೆಮಿ ಸದಾ ಒಂದು ಹೆಜ್ಜೆ ಮುಂದೆ ಇರುತ್ತದೆ. ಇದಕ್ಕೆ ಹಿರಿಯ ಪತ್ರಕರ್ತರು ಸಹಕಾರ ನೀಡುತ್ತಾ ಇದ್ದಾರೆ. ಪತ್ರಿಕೋದ್ಯಮದ ಮೌಲ್ಯಗಳನ್ನು ಉಳಿಸಲು ನಾವೆಲ್ಲ ಮುಂದಾಗೋಣ. ನಿಖರತೆ ಕಾಪಾಡೋಣ ಎಂದರು.
ಹಿರಿಯ ಪತ್ರಕರ್ತೆ ನೂಪುರ್ ಬಸು ಮಾತನಾಡಿ, ತಪ್ಪು ಮಾಹಿತಿಗಳು ಮಾಧ್ಯಮಗಳ ಹೆಸರನ್ನು ಕೆಡಿಸುತ್ತಿದೆ. ಮಾಧ್ಯಮ ಗಳಿಗೆ ಭಾರತದಲ್ಲಿ ಒತ್ತಡ ಹೆಚ್ಚಾಗಿದೆ. ಧ್ವನಿ ಇಲ್ಲದವರಿಗೆ ಮಾಧ್ಯಮಗಳು ಧ್ವನಿಯಾಗಬೇಕು. ಇದನ್ನೇ ಮಾಧ್ಯಮಗಳು ಮಾಡಬೇಕಿರುವುದು. ಕಳೆದ ಹಲವಾರು ದಶಕಗಳಲ್ಲಿ ಮಾಧ್ಯ ಮಗಳ ಚಹರೇ ಬದಲಾಗಿದೆ. ಮಾಧ್ಯಮಗಳಿಗೆ ಇಂದು ವಿಶ್ವಾ ಸಾರ್ಹತೆಯೇ ದೊಡ್ಡ ಸವಾಲಾಗಿದೆ. ಇಂದು ಸಾವಿರಾರು ಚಾನೆಲ್‌ಗಳು, ಯುಟ್ಯೂಬ್ ಚಾನೆಲ್‌ಗಳು ಇವೆ. ಪತ್ರಿಕೆಗಳು ಮುಚ್ಚುತ್ತಿವೆ.  ಮಾಧ್ಯಮಗಳ ಸ್ವಾತಂತ್ರ‍್ಯ ಇಳಿಕೆಯಾಗಿದೆ. ಬೇರೆ ಬೇರೆ ದೇಶಗಳಲ್ಲಿ ಮಾಧ್ಯಮಗಳಿಗೆ ಸ್ವಾತಂತ್ರ‍್ಯ ಬೇರೆಯೇ ಪ್ರಮಾ ಣದಲ್ಲಿದೆ. ಪತ್ರಕರ್ತರ ವಿರುದ್ಧ ಹಿಂಸಾಚಾರ, ದಾಳಿಗಳು, ದೂರು ಗಳು, ಎಫ್‌ಐಆರ್ ಸಂಖ್ಯೆಗಳೂ ಸಹ ಹೆಚ್ಚಿದೆ. ಪತ್ರಕರ್ತರು ತಮ್ಮ ಕೆಲಸ ಮಾಡಿದ್ದಕ್ಕೆ ಮೊಕದ್ದಮೆಗಳನ್ನು ಎದುರಿಸಬೇಕಾಗಿದೆ. ಆದ್ದರಿಂದ ಪತ್ರಕರ್ತರು ಅಪಾಯದಲ್ಲಿದ್ದಾರೆ ಎಂದರು.
ಹಿರಿಯ ಪತ್ರಕರ್ತೆ ಆರ್. ಪೂರ್ಣಿಮಾ ಅವರು ಮಾತನಾಡಿ, ಸುಳ್ಳು ಸುದ್ದಿಗಳ ನಡುವೆ ವಿಶ್ವಸಾರ್ಹ ಸುದ್ದಿ ಹೇಗೆ ಮಾಡುವುದು ಎಂಬ ಆತಂಕ ಇದೆ. ಇದರ ಬಗೆಗೆ ಭಯ ಪಡಬೇಕಾದ ಸನ್ನಿ ವೇಶದಲ್ಲಿ ನಾವು ಇದ್ದೇವೆ. ಮಾಧ್ಯಮಗಳ ವಿಶ್ವಾಸಾರ್ಹತೆ ರಕ್ಷಿಸಬೇಕಾಗಿದೆ. ಇದರ ಬಗ್ಗೆ ಯೋಚಿಸದಿದ್ದರೆ ಭವಿಷ್ಯದಲ್ಲಿ ಅನಾಹುತಗಳು ನಡೆಯುತ್ತವೆ ಎಂದರು.
ಸುಳ್ಳು ಸುದ್ದಿಗೆ ಇಂದು ತಂತ್ರಜ್ಞಾನದ ಬೆಂಬಲ ಸಹ ಇದೆ. ಸತ್ಯ ಅನ್ನೋದು ಯಾವುದು ಅನ್ನೊದೇ ತಿಳಿಯಲಾಗದಷ್ಟು ಸುಳ್ಳು ವ್ಯಾಪಕವಾಗಿದೆ. ಕ್ಷಣಾರ್ಧದಲ್ಲಿ ಒಂದು ಸುದ್ದಿ ಇಡೀ ಜಗತ್ತು ಪ್ರಪಂಚ ಸುತ್ತಿ ಬರುತ್ತಿದೆ. ಇದು ನಮಗೆ ಅನುಕೂಲವಾದ ವಿಷಯ ಅಲ್ಲ. ಕೇಡು ಬಗೆಯುವ ಸುಳ್ಳು ಸುದ್ದಿ ಬೇಡ ನಮಗೆ. ಯುವ ಪತ್ರಕರ್ತರು ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರವಹಿಸಿ. ಸುದ್ದಿಗಳನ್ನು ಇತರರಿಗೆ ತಿಳಿಸುವಾಗ ಒಮ್ಮೆ ಯೋಚಿಸೋಣ ಎಂದರು.
ಸಮಾರಂಭದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಅಕಾಡೆಮಿ ಕಾರ್ಯದರ್ಶಿ ಸಹನಾ ಎಂ, ಅಕಾಡೆಮಿಯ ಸದಸ್ಯರು,  ಮಾಜಿ ಅಧ್ಯಕ್ಷರು, ಹಿರಿಯ ಪತ್ರಕರ್ತರು, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
(Visited 1 times, 1 visits today)