
ತುಮಕೂರು: ಜಿಲ್ಲೆಯ ಶಿರಾ ತಾಲ್ಲೂಕು ಪಟ್ಟನಾಯಕನಹಳ್ಳಿಯ ಶ್ರೀ ಗುರುಗುಂಡ ಬ್ರಹ್ಮೇ ಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗುತ್ತಿರುವ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವನ್ನು ಯಾವುದೇ ಸಮ ಸ್ಯೆಗಳಿಲ್ಲದೇ ವ್ಯವಸ್ಥಿತವಾಗಿ ಆಯೋಜಿಸಿ ಯಶಸ್ವಿ ಗೊಳಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಅವರು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ವಿಡಿಯೋ ಸಂವಾದ ಸಭಾಂಗಣದಲ್ಲಿ ಬುಧವಾರ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು ೨೦೨೬ರ ಜನವರಿ ೩ ರಿಂದ ೧೬ರವರೆಗೆ ಶ್ರೀ ಗುರುಗುಂಡ ಬ್ರಹ್ಮೇಶ್ವರಸ್ವಾಮಿ ಜಾತ್ರೆ ನಡೆಯಲಿದ್ದು, ವಸ್ತು ಪ್ರದರ್ಶನವನ್ನು ಜನವರಿ ೯ ರಿಂದ ೧೫ರವರೆಗೆ ಒಟ್ಟು ೭ ದಿನಗಳ ಕಾಲ ವೈಭವಯುತವಾಗಿ ನಡೆಸಬೇಕು. ವಸ್ತು ಪ್ರದರ್ಶನವು ಸಾರ್ವಜನಿಕರಿಗೆ ಉಪಯುಕ್ತವಾಗುವಂತೆ ಎಲ್ಲಾ ಇಲಾಖೆಗಳು ಸಹಕಾರ ನೀಡಬೇಕು ಎಂದು ತಿಳಿಸಿದರಲ್ಲದೆ, ಪ್ರದರ್ಶನ ಸ್ಥಳದಲ್ಲಿ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕು. ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಸ್ಥಳೀಯ ಪಂಚಾಯಿತಿಗಳು ವಸ್ತು ಪ್ರದರ್ಶನದ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸಬೇಕು ಎಂದು ತಿಳಿಸಿದರು.
ವಸ್ತು ಪ್ರದರ್ಶನವನ್ನು ಕೇವಲ ಪ್ರದರ್ಶನಕ್ಕಷ್ಟೇ ಸೀಮಿತಗೊಳಿಸದೆ, ಜನಪರ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದರಲ್ಲದೇ, ಆರೋಗ್ಯ ಇಲಾಖೆಯಿಂದ ಆರೋಗ್ಯ ಶಿಬಿರ, ಆರೋಗ್ಯ ತುಮಕೂರು ಅಭಿಯಾನದಡಿ ವಿವಿಧ ರೋಗ ನಿಯಂತ್ರಣದ ಬಗ್ಗೆ ಜಾಗೃತಿ ಮತ್ತು ಮಾಹಿತಿ ನೀಡುವ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಮಹಿಳಾ ಮತ್ತು ಮಕ್ಕಳ ಇಲಾಖೆಯು ಜಿಲ್ಲೆಯ ಪಾರಂಪರಿಕ ಉಡುಗೆ-ತೊಡುಗೆಯ ಪ್ರದರ್ಶನ ಏರ್ಪಡಿಸಬೇಕು ಎಂದು ನಿರ್ದೇಶಿಸಿದರು.
ಶಿಕ್ಷಣ ಇಲಾಖೆ ಪ್ರತಿದಿನ ಸಂಜೆ ಆಸಕ್ತಿಯುಳ್ಳ ಮಕ್ಕಳಿಂದ ಜನಪದ ಕಲಾ ನೃತ್ಯ, ಹಾಡುಗಾರಿಕೆ, ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳನ್ನು ಏರ್ಪಡಿಸಬೇಕು. ಇದರ ಜೊತೆಗೆ ವಿಜ್ಞಾನ ವಸ್ತು ಪ್ರದರ್ಶನವನ್ನೂ ಆಯೋಜಿಸಬೇಕು ಎಂದು ತಿಳಿಸಿದರಲ್ಲದೆ, ಸರ್ಕಾರದ ಮಹತ್ವಾಕಾಂಕ್ಷಿ ೫ ಯೋಜನೆಗಳ ಮಹತ್ವ, ಅವುಗಳ ಉದ್ದೇಶ ಮತ್ತು ಸಾರ್ವಜನಿಕರಿಗೆ ದೊರೆಯುವ ಪ್ರಯೋಜನಗಳ ಕುರಿತು ಸಮಗ್ರ ಮಾಹಿತಿ ಮತ್ತು ಚಿತ್ರ ಪ್ರದರ್ಶನವನ್ನು ಏರ್ಪಡಿಸಬೇಕು ಎಂದು ತಿಳಿಸಿದರು.
ವಸ್ತು ಪ್ರದರ್ಶನ ಆಯೋಜಿಸುವ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ (ಅಬಿವೃದ್ಧಿ) ಸಂಜೀವಪ್ಪ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರು ನಾರಾಯಣಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಶೇಖರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಲಕ್ಷö್ಮಣ್ ಕಳ್ಳೆನ್ನವರ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಶಾರದಮ್ಮ ಸೇರಿದಂತೆ ಬ್ರಹ್ಮೇಶ್ವರ ಸ್ವಾಮಿ ಮಠದ ಮುಖ್ಯಸ್ಥರು ಉಪಸ್ಥಿತರಿದ್ದರು.



