ತಿಪಟೂರು: ತಾಲ್ಲೂಕಿನ ಕಸಬಾ ಹೋಬಳಿಯ ಗೌಡನಕಟ್ಟೆಯ ಸರ್ಕಾರಿ ಪ್ರೌಢಶಾಲೆಗೆ ಬೆಂಗಳೂರಿನ ಬೆಳಕು ಚಾರಿಟಬಲ್ ಟ್ರಸ್ಟ್ವತಿಯಿಂದ ಶಾಲೆಯ ನವೀಕರಣ ಹಾಗೂ ಎಲ್ಲಾ ಕಟ್ಟಡಗಳಿಗೆ ಬಣ್ಣ ಲೇಪನ ಮಾಡಿ ಅಭಿವೃದ್ದಿ ಕಾರ್ಯಕೊಳ್ಳಲಾಯಿತು,
ಸರ್ಕಾರಿ ಶಾಲೆಗೆ ಒಂದು ಲಕ್ಷಕ್ಕೂ ಅಧಿಕ ಮೊತ್ತ ವೆಚ್ಚ ಮಾಡಿ, ಕಟ್ಟಡಕ್ಕೆ ಸುಣ್ಣ-ಬಣ್ಣ ಲೇಪನ, ಗೋಡೆ ಬರಹ ಮತ್ತು ಕಲಾತ್ಮಕ ಚಿತ್ರಗಳು ಕನ್ನಡಾಂಬೆಯ ಚಿತ್ರ, ಭಾರತ-ಕರ್ನಾಟಕ, ಗಣಿತ-ವಿಜ್ಞಾನ ಶಿಕ್ಷಣಾತ್ಮಕ ಚಿತ್ರಗಳು, ಸಾಲುಮರದ ತಿಮ್ಮಕ್ಕನ ಸ್ಮರಣಾರ್ಥ ಮರದ ಕಲಾಕೃತಿ, ಶಾಲೆ ಆವರಣದಲ್ಲಿ ವೈಜ್ಞಾನಿಕ ಸಸಿ ನೆಡುವಿಕೆ ಕಾರ್ಯಗಳನ್ನು ಹಮ್ಮಿಕೊಳ್ಳಲಾಯಿತು.
ಶಾಲಾ ಕಟ್ಟಡಕ್ಕೆ ಬಣ್ಣ ಲೇಪನ ಮಾಡಿದ ನಂತರ ತಂಡ ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಊರಿನ ಬೀದಿಗಳಲ್ಲಿ ಕನ್ನಡಾಂಬೆ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.
ಟ್ರಸ್ಟ್ ಮುಖ್ಯಸ್ಥ ಶಿವು ಮಾತನಾಡಿ ಮೂಕ ಪ್ರಾಣಿಗಳ ರಕ್ಷಣೆ, ಗೋಶಾಲೆಗಳಿಗೆ ಮೇವು ವಿತರಣೆ, ರಸ್ತೆಗಳಿಗೆ ಸೂಚನಾ ಫಲಕಗಳ ಅಳವಡಿಕೆ ಮುಂತಾದ ಅನೇಕ ಜನೋಪಯೋಗಿ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ವಿಶೇಷವಾಗಿ, ಅಳಿವಿನ ಅಂಚಿನಲ್ಲಿರುವ ಸರ್ಕಾರಿ ಶಾಲೆಗಳ ಉಳಿವಿಗಾಗಿ, ಅವುಗಳಿಗೆ ಅಗತ್ಯವಾದ ಸುಣ್ಣ ಬಣ್ಣದ ಲೇಪನ, ಉಪಕರಣಗಳ ವಿತರಣೆ, ವಿದ್ಯಾರ್ಥಿಗಳಿಗೆ ನೋಟ್ ಬುಕ್, ಬ್ಯಾಗ್ ವಿತರಣೆ ಮಾಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಬೆಳಕು ಹರಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಆರು ವರ್ಷಗಳಿಂದ ಟ್ರಸ್ಟ್ ವಿವಿಧ ಸಮಾಜಮುಖಿ ಸೇವಾ ಕಾರ್ಯಗಳನ್ನು ನಿಸ್ವಾರ್ಥವಾಗಿ ನಿರಂತರವಾಗಿ ನಿರ್ವಹಿಸುತ್ತಾ ಬರುತ್ತಿದೆ ಎಂದರು.
ಮುಖ್ಯ ಶಿಕ್ಷಕ ಪದ್ಮರಾಜ್ ಮಾತನಾಡಿ ಬೆಳಕು ತಂಡವು ಈಗಾಗಲೇ ೬ ವರ್ಷಗಳಿಂದ ನಿರಂತರ ಸಮಾಜ ಸೇವಾ ಕಾರ್ಯ ಗಳಲ್ಲಿ ತೊಡಗಿಸಿಕೊಂಡಿದ್ದು, ಗೌಡನಕಟ್ಟೆ ಶಾಲೆ ಅವರ ೨೦ನೇ ಸೇವಾ ಯೋಜನೆ. ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೆ, ಸಾಮಾಜಿಕ ಹೊಣೆಗಾರಿಕೆಯಿಂದ ಕೆಲಸ ಮಾಡುತ್ತಿರುವ ಈ ತಂಡ ಉತ್ತಮ ಯೋಜನೆಗಳ ಮೂಲಕ ಸಮಾಜಕ್ಕೆ ಮಾದರಿಯಾಗಲಿ ಎಂದು ತಿಳಿಸಿದರು.
ಬೆಳಕು ಚಾರಿಟೇಬಲ್ ಟ್ರಸ್ಟ್ ಕೈಗೊಂಡ ೨೦ನೇ ಶಾಲಾ ಸೇವಾ ಯೋಜನೆಯ ಕಾರ್ಯದಲ್ಲಿ ವಿದ್ಯಾರ್ಥಿಗಳಿಗೆ ವಿತರಣೆ ಕಾರ್ಯಕ್ರಮದ ಅಂಗವಾಗಿ ಗೌಡನಕಟ್ಟೆ ಪ್ರೌಢ ಮತ್ತು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಊಟದ ತಟ್ಟೆ ಲೋಟ, ನೋಟ್ ಪುಸ್ತಕ, ಬ್ಯಾಗ್‌ಗಳು ವಿತರಿಸಲಾಯಿತು.
ಚಿತ್ರಾ ಕಲಾಗಾರ ವಿನಯ್‌ಕುಮಾರ್ ಕಲೆಯಿಂದ ಶಾಲೆಗೆ ಹೊಸ ಮೆರುಗು ನೀಡಲಾಗಿದೆ. ಈ ಕಾರ್ಯಕ್ಕೆ ಶಾಲೆಯ ಮುಖ್ಯ ಶಿಕ್ಷಕ ಪದ್ಮರಾಜ್ ಹಾಗೂ ಶಿಕ್ಷಕರ ತಂಡ ಶ್ರಮವಹಿಸಿದ್ದು ಕಾರ್ಯಕ್ರಮದ ಅದ್ಯಕ್ಷತೆಯನ್ನು ಗುರುಗದಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಿಕ್ಕಬಿದರೆ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ ಹಾಗೂ ಶಿಕ್ಷಕ ಚಂದ್ರಶೇಖರ್, ತಿಮ್ಮೇಗೌಡ, ಶೈಲಜಾ ಬಸವರಾಜು, ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜು, ಸತೀಶ್, ನಿಜಗುಣ, ಬೈರಾಪುರದ ಮಿಥುನ್.ಬಿ.ಎನ್, ಶ್ರೀಧರ್, ಚಂದ್ರಶೇಖರ್ ಜಿ.ಬಿ., ಷಣ್ಮುಖ, ಪಾಲಾಕ್ಷಮ್ಮ, ಶ್ರೀನಿವಾಸ್, ರವೀಶ್ ಸೇರಿದಂತೆ ಊರಿನ ಅನೇಕ ಗಣ್ಯರು ಪಾಲ್ಗೊಂಡಿದ್ದರು.

(Visited 1 times, 1 visits today)