
ತುಮಕೂರು: ತುಮಕೂರು, ತಿಪಟೂರು ಮಾರ್ಗವಾಗಿ ಮಂಗಳೂರಿಗೆ ನೇರ ರೈಲು ಸಂಪರ್ಕ ಕಲ್ಪಿಸಲು ಮೈಸೂರು ವಿಭಾಗದವರು ಒಪ್ಪಿಗೆ ಕೊಡಬೇಕಿದೆ. ಮಂಗಳೂರು-ಹಾಸನ-ಯಶವ0ತಪುರ ಮಾರ್ಗದಲ್ಲಿ ಸಾಗುವ ರೈಲುಗಳ ಒತ್ತಡದ ನಡುವೆ ತುಮಕೂರು ಮೂಲಕ ತೆರಳುವ ರೈಲಿಗೆ ಅನುವು ಮಾಡಿಕೊಡುವುದಾದರೆ ರೈಲು ಓಡಿಸಲು ಸಾಧ್ಯವಿದೆ ಎಂದು ನೈಋತ್ಯ ರೈಲ್ವೇ ಬೆಂಗಳೂರು ವಿಭಾಗದ ಹಿರಿಯ ಅಧಿಕಾರಿಗಳು ಭರವಸೆ ನೀಡಿದರು.
ಬೆಂಗಳೂರಿನ ಡಿಆರ್‌ಎಂ ಕಚೇರಿಯಲ್ಲಿ ಬುಧವಾರ ನಡೆದ ನೈಋತ್ಯ ರೈಲ್ವೇ ಬೆಂಗಳೂರು ವಿಭಾಗದ ರೈಲು ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಸಮಿತಿ ಸದಸ್ಯ, ತುಮಕೂರು ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆ ಅಧ್ಯಕ್ಷ ಕರಣಂ ರಮೇಶ್, ತುಮಕೂರು, ತಿಪಟೂರು ಮೂಲಕ ಮಂಗಳೂರಿಗೆ ತೆರಳಲು ಅನುಕೂಲವಾಗುವಂತೆ ಯಶವಂತಪುರ-ಹಾಸನ-ಮ0ಗಳೂರು ರೈಲಿಗೆ ಸಂಪರ್ಕ ಕಲ್ಪಿಸುವಂತೆ ತುಮಕೂರಿನಿಂದ ಹಾಸನಕ್ಕೆ ರೈಲು ಸಂಪರ್ಕ ಕಲ್ಪಿಸಬೇಕೆಂದು ಮಾಡಿದ ಮನವಿಗೆ ಅಧಿಕಾರಿಗಳು ಪ್ರತಿಕ್ರಿಯಿಸಿದರು.
ಈ ವಿಷಯಕ್ಕೆ ಸ್ಪಂದಿಸಿದ ಸೀನಿಯರ್ ಡಿಓಎಂ ಪ್ರಿಯಾ ಅವರು, ಪ್ರಸ್ತುತ ಸಂಚರಿಸುತ್ತಿರುವ ಯಶವಂತಪುರ-ಹಾಸನ-ಮ0ಗಳೂರು ರೈಲಿಗೆ ಈಗಾಗಲೇ ಶೇ. ೧೫೦ರಷ್ಟು ಪ್ರಯಾಣಿಕರ ಒತ್ತಡವಿದ್ದು, ಅದೇ ರೈಲಿಗೆ ಸಂಪರ್ಕ ಕಲ್ಪಿಸಿದರೆ ಸೀಟು ದೊರೆಯುವುದು ಕಷ್ಟವಾಗಿ ತೊಂದ ರೆಯಾಗಲಿದೆ. ಅದರ ಬಲಿಗೆ ಮೈಸೂರು ವಿಭಾಗದವರು ಆ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅನುಕೂಲ ಎಂದು ತಿಳಿಸಿದರೆ ಹೊಸ ರೈಲು ಓಡಿಸಲು ಅವಕಾಶವಿದೆ. ಈ ಬಗ್ಗೆ ಮಾನ್ಯ ರೈಲ್ವೇ ಖಾತೆ ರಾಜ್ಯ ಸಚಿವರಲ್ಲಿ ಮನವಿ ಮಾಡಿ ಎಂದು ಸಲಹೆ ನೀಡದರು. ಸಚಿವರ ಅನುಮತಿ ಮೇರೆಗೆ ಇದರ ಬಗ್ಗೆ ಚಿಂತಿಸಬಹುದು ಎಂದು ಹೇಳಿದರು.
ತುಮಕೂರಿನಿಂದ ಬೆಳಗ್ಗೆ ೮ ಗಂಟೆಗೆ ಹೊರಡುವ ಮೆಮು ರೈಲನ್ನು ಕೆಎಸ್‌ಆರ್‌ಗೆ ಓಡಿಸಬೇಕೆಂದು ಸದಸ್ಯ ಟಿ.ಜಿ. ಗಿರೀಶ್ ಅವರ ಬೇಡಿಕೆಯನ್ನು ವಿಸ್ತರಿಸಿ ವಿವರಿಸಿ ಮಾತನಾಡಿದ ಕರಣಂ ರಮೇಶ್, ಈ ರೈಲು ಉದ್ಯೋಗಿಗಳಿಗಾಗಿಯೇ ಆರಂಭಿಸಲಾಗಿದ್ದು ಇದರಲ್ಲಿ ಸುಮಾರು ೨ ಸಾವಿರಕ್ಕೂ ಹೆಚ್ಚು ಉದ್ಯೋಗಿ ಪ್ರಯಾಣಿಕರು ಸಂಚರಿಸುತ್ತಾರೆ. ಅವರಲ್ಲಿ ಶೇ. ೭೦ ರಷ್ಟು ಜನರು ಮಲ್ಲೇಶ್ವರ ಮತ್ತು ಕೆಎಸ್‌ಆರ್‌ಗೆ ಹೋಗುವವರಾಗಿರುತ್ತಾರೆ. ಆದರೆ ಯಶವಂಪುರದಲ್ಲೇ ರೈಲು ಕೊನೆಯಾಗುತ್ತಿರುವುದರಿಂದ ಅವರು ತಮ್ಮ ಉದ್ಯೋಗ ಕೇಂದ್ರಗಳಿಗೆ ತೆರಳಲು ಸುಮಾರು ಒಂದು ಗಂಟೆ ಬೇಕಾಗುತ್ತಿದ್ದು ಇದರಿಂದ ಅತೀವ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಗೆ ರೈಲು ವಿಸ್ತರಿಸುವುದು ಅತ್ಯಗತ್ಯವಾಗಿದೆ ಎಂದು ಪ್ರತಿಪಾದಿಸಿದರು. ಇದಕ್ಕೆ ಪ್ರತಿಕ್ರಿ ಯಿಸಿದ ಅಧಿಕಾರಿಗಳು, ಬೆಂಗಳೂರು ನಿಲ್ದಾಣದಲ್ಲಿ ಇನ್ನೂ ಎರಡು ಪ್ಲಾಟ್‌ಫಾರಂಗಳು ನಿರ್ಮಾಣವಾಗಲಿದ್ದು, ನಂತರ ರೈಲನ್ನು ಕೆಎಸ್‌ಆರ್‌ಗೆ ವಿಸ್ತರಿಸಬಹುದು ಎಂದು ಭರವಸೆ ನೀಡಿದರು.
ಭಾನುವಾರ ಸಂಜೆ ತುಮಕೂರಿನಿಂದ ಯಶವಂತಪುರಕ್ಕೆ ವಿಶೇಷ ರೈಲು ಸಂಚಾರ ಆರಂಭಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಬಾಣಸವಾಡಿಯಲ್ಲಿ ಹಲವು ಮೆಮು ರೈಲುಗಳ ನಿರ್ವಹಣೆ ಕಾರ್ಯ ಆಗಬೇಕಿರುವುದರಿಂದ ಸಾಧ್ಯವಾದಷ್ಟೂ ಪ್ರಯತ್ನಿಸಿ ಅನುಕೂಲ ಕಲ್ಪಿಸುವುದಾಗಿ ಭರವಸೆ ನೀಡಿದರು.
ಮತ್ತೊಬ್ಬ ಸದಸ್ಯ ಧನಿಯಾಕುಮಾರ್ ಮತ್ತು ಗಿರೀಶ್ ಅವರು ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ನಡೆಸಿದ ಚರ್ಚೆಯನ್ನು ಮುಂದುವರಿಸಿದ ಕರಣಂ ರಮೇಶ್, ಆರ್‌ಎಂಎಸ್ ಕಚೇರಿ ಎದುರಿಗೆ ಸಾಕಷ್ಟು ಸ್ಥಳವಿದ್ದು, ಇದನ್ನು ಹಿಂದೆ ಪಾರ್ಕ್ ಮಾಡಲಾಗಿತ್ತು. ಈಗ ಅದು ನಿರುಪಯುಕ್ತವಾಗಿದ್ದು, ವ್ಯವಸ್ಥಿತ ವಾಹನ ಪಾರ್ಕಿಂಗ್ ನಿರ್ಮಾಣವಾಗುವವರೆಗೆ ಈ ಜಾಗವನ್ನು ತಾತ್ಕಾಲಿಕವಾಗಿ ಬಳಸಬಹುದಾಗಿದೆ ಎಂದು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸೀನಿಯರ್ ಡಿಸಿಎಂ ಚೈತನ್ಯ ಅವರು, ಸದರಿ ಜಾಗವನ್ನು ಆರ್‌ಎಲ್‌ಡಿಎಗೆ ನೀಡಲಾಗಿದೆ. ಅವರಿನ್ನೂ ಕಟ್ಟಡ ನಿರ್ಮಾಣಕಾರ್ಯ ಆರಂಭಿಸಿಲ್ಲ. ಅವರೊಂದಿಗೆ ಸಮಾಲೋಚಿಸಿ ಅವರು ಕೆಲಸ ಶುರುಮಾಡುವವರೆಗೆ ಈ ಜಾಗವನ್ನು ಬಳಸಿಕೊಳ್ಳಬಹುದಾಗಿದೆ. ಈ ಬಗ್ಗೆ ಗಮನಿಸುವುದಾಗಿ ಭರವಸೆ ನೀಡಿದರು.
ಚಾಮರಾಜನಗರ-ತುಮಕೂರು ರೈಲನ್ನು ತುಮಕೂರು-ಯಶವಂತ ಪುರ ನಡುವೆ ಸಂಚರಿಸಿ ಸಂಜೆ ೪.೩೦ ಅಥವಾ ೪.೪೫ರ ವೇಳೆಗೆ ಯಶವಂತಪುರದಿ0ದ ತುಮಕೂರಿಗೆ ಓಡಿಸುವಂತೆ ಕರಣಂ ರಮೇಶ್ ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಸದರಿ ರೈಲು ಮೆಮುವಾಗಿ ಬದಲಾಗಲಿದೆ. ಮೆಮು ಆಗಿ ಪರಿವರ್ತನೆಯಾದ ನಂತರ ಈ ಬಗ್ಗೆ ಪರಿಶೀಲಿಸಬಹುದು ಎಂದು ತಿಳಿಸಿದರು.
ಎಡಿಆರ್‌ಎಂ (ಆಪರೇಷನ್ಸ್) ಪರೀಕ್ಷಿತ್ ಮೋಹನ್‌ಪುರಿಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಡಿಆರ್‌ಯುಸಿಸಿ ಸಭೆಯಲ್ಲಿ ತುಮಕೂರಿನ ಪ್ರತಿನಿಧಿಗಳಾದ ಸತೀಶ್ ಮತ್ತು ಶಿವಣ್ಣ ಅವರು ಕೂಡಾ ಭಾಗವಹಿಸಿದ್ದರು.



