
ತುಮಕೂರು: ಜಿಲ್ಲೆಯ ಗುಬ್ಬಿ ತಾಲ್ಲೂಕು ಸರ್ಕಾರಿ ಆಸ್ಪತ್ರೆ, ಸರ್ಕಾರಿ ಶಾಲೆ, ಅಂಗನವಾಡಿ ಸೇರಿದಂತೆ ವಿವಿಧ ಸ್ಥಳಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಆಸ್ಪತ್ರೆ ಭೇಟಿ: ವೈದ್ಯರ ಗೈರು: ತಾಲೂಕಿನ ಬಿದರೆ ಗ್ರಾಮದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದಾಗ ವೈದ್ಯರು ಗೈರಾಗಿರುವುದನ್ನು ಗಮನಿಸಿದ ಅವರು ಸರ್ಕಾರಿ ಆಸ್ಪತ್ರೆಗೆ ಗ್ರಾಮಾಂತರ ಪ್ರದೇಶದ ಬಡಜನರೇ ಹೆಚ್ಚಾಗಿ ಬರುವುದರಿಂದ ವೈದ್ಯರು ಸಮಯಕ್ಕೆ ಸರಿಯಾಗಿ ಲಭ್ಯವಿರಬೇಕು. ಮನಸ್ಸಿಗೆ ತೋಚಿದಂತೆ ಬಂದರೆ ಹಳ್ಳಿಯ ಜನರ ಕಥೆ ಏನಾಗಬೇಕು? ರೋಗಿಗಳ ಚಿಕಿತ್ಸೆ ಸೇರಿದಂತೆ ಎಲ್ಲಾ ಕೆಲಸವನ್ನು ಆಸ್ಪತ್ರೆಯಲ್ಲಿರುವ ಶುಶ್ರೂಷಕಿ ಒಬ್ಬರೇ ಮಾಡುತ್ತಿದ್ದಾರಾ ಎಂದು ಕ್ಲಾಸ್ ತೆಗೆದುಕೊಂಡರು. ಆಸ್ಪತ್ರೆ ನೋಡಿದರೆ ಇಷ್ಟು ಚಿಕ್ಕದಾಗಿದ್ದು, ಇಲ್ಲಿ ಹೇಗೆ ಚಿಕಿತ್ಸೆ ನೀಡುತ್ತೀರಾ? ಆಸ್ಪತ್ರೆಯಲ್ಲಿ ಚಿಕಿತ್ಸೆ, ಔಷಧೋಪಚಾರ ನೀಡುವುದು ಸಮಾಧಾನ ತಂದಿದೆಯೇ ಎಂದು ಅಲ್ಲಿಗೆ ಬಂದಿದ್ದ0ತಹ ರೋಗಿಗಳನ್ನೇ ಪ್ರಶ್ನಿಸಿದರು.
ಹೊಸ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ೩ ಕೋಟಿ ರೂ. ಹಣ ಬಿಡುಗಡೆಯಾಗಿದೆ. ಹಣ ಬಿಡುಗಡೆಯಾಗಿದ್ದರೂ ಏಕೆ ಕಾಮಗಾರಿಯನ್ನು ಆರಂಭಿಸಿಲ್ಲವೆ0ದು ಸಂಬ0ಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಕರೆ ಮೂಲಕ ಮಾಹಿತಿ ಪಡೆದರಲ್ಲದೆ, ಆಸ್ಪತ್ರೆಗೆ ವೈದ್ಯರು ಬರದೇ ಇರುವುದರಿಂದ ಆಸ್ಪತ್ರೆಯ ವಹಿಯಲ್ಲಿ ಎಚ್ಚರಿಕೆ ನಿರ್ದೇಶನದೊಂದಿಗೆ ಸಹಿ ಮಾಡಿ ಸಂಬ0ಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವುದಾಗಿ ತಿಳಿಸಿದರು.
ಮಕ್ಕಳಿಗೆ ಹಾಲು ನೀಡದ ಅಂಗನವಾಡಿ: ನಂತರ ಅಂಗನವಾಡಿಗೆ ತೆರಳಿದ ಅವರು ಸಮಯ ೧೦.೩೦ ಗಂಟೆಯಾದರೂ ಮಕ್ಕಳಿಗೆ ಹಾಲು ನೀಡಿಲ್ಲ. ಸಹಾಯಕಿ ಕೂಡ ಬಂದಿಲ್ಲ. ಹಾಜರಾತಿ ವಹಿಯಲ್ಲಿರುವ ಹಾಗೂ ಹಾಜರಿರುವ ಮಕ್ಕಳ ಸಂಖ್ಯೆಯು ಒಂದಕ್ಕೊ0ದು ತಾಳೆಯಾಗುತ್ತಿಲ್ಲ. ಪ್ರತಿನಿತ್ಯವೂ ಇದೇ ರೀತಿ ನಡೆಯುತ್ತಿದೆಯಾ? ಎಂದು ಅಂಗನವಾಡಿ ಕಾರ್ಯಕರ್ತೆಗೆ ಪ್ರಶ್ನೆ ಮಾಡಿ ಮಕ್ಕಳ ಜೊತೆ ಒಂದಷ್ಟು ಕಾಲ ಕಳೆದು ಹೇಳಿಕೊಡುತ್ತಿರುವ ಪಠ್ಯ ಹಾಗೂ ಇತರೆ ಚಟುವಟಿಕೆಗಳ ಬಗ್ಗೆ ಮಕ್ಕಳಿಂದ ಮಾಹಿತಿ ಪಡೆದುಕೊಂಡರು.
ಬಳಪ ಹಿಡಿದು ಪಾಠ ಮಾಡಿದ ಡೀಸಿ: ಬಳಿಕ ಬಿದರೆ ಸರಕಾರಿ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಿಕ್ಷಕರನ್ನ ತೀವ್ರ ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು, ಖುದ್ದು ಅವರೇ ಬಳಪ ಹಿಡಿದು ಇಂಗ್ಲಿಷ್ ಹಾಗೂ ಗಣಿತದ ಪಾಠ ಮಾಡಿ ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು. ವಿದ್ಯಾರ್ಥಿಗಳಿಗೆ ಪುಸ್ತಕ ನೀಡಿ ಓದಿಸಿದರು. ಬರೆಸಿದರು. ಪರೀಕ್ಷಾ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು.
ಶಾಲೆಯಲ್ಲಿ ೬ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ ಪಾಠ ಓದಲು ಬರುತ್ತಿಲ್ಲ. ಮಕ್ಕಳಿಗೆ ಏನು ಕಲಿಸುತ್ತಿದ್ದೀರಿ? ನೀವೇನು ಉಚಿತ ಸೇವೆ ಮಾಡುತ್ತಿಲ್ಲ. ನಿಮಗೆ ಸರ್ಕಾರದಿಂದ ಪ್ರತಿ ತಿಂಗಳು ಸಂಬಳ ನೀಡಲಾ ಗುತ್ತಿದೆ ಎಂಬುದನ್ನು ಮರೆಯಬೇಡಿ. ಆತ್ಮಸಾಕ್ಷಿಯಿಂದ ಮಕ್ಕಳಿಗೆ ಗುಣಮ ಟ್ಟದ ಶಿಕ್ಷಣ ನೀಡಬೇಕೆಂದು ಶಿಕ್ಷಕರಿಗೆ ನಿರ್ದೇಶನ ನೀಡಿದರು.
ಮಕ್ಕಳಿಗೆ ನಿಯಮಿತವಾಗಿ ಮಧ್ಯಾಹ್ನದ ಊಟ, ಸಮವಸ್ತಪಠ್ಯಪುಸ್ತಕದ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು ಕನಿಷ್ಠ ತಿಂಗಳಿಗೊ ಮ್ಮೆಯಾದರೂ ಈ ರೀತಿ ಅನಿರೀಕ್ಷಿತ ಭೇಟಿ ನೀಡುತ್ತಿದ್ದರೆ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಾರೆ ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಈಸಂದರ್ಭದಲ್ಲಿ ತಹಶೀಲ್ದಾರ್ ಬಿ. ಆರತಿ, ತಾಲೂಕು ಕಾರ್ಯ ನಿರ್ವಹಣಾ ಅಧಿಕಾರಿ ರಂಗನಾಥ್, ಅಭಿವೃದ್ಧಿ ಅಧಿಕಾರಿಗಳು, ನಾಡಕಚೇರಿಯ ನಾಗಭೂಷಣ್, ಕಂದಾಯ ಅಧಿಕಾರಿಗಳು ಇನ್ನಿತರರು ಹಾಜರಿದ್ದರು.



