
ತುಮಕೂರು: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಶುಕ್ರವಾರ ನಗರದ ಗಂಗಸ0ದ್ರದ ಮಯೂರ ನಗರದ ವಾರ್ಡ್ ಸಂಖ್ಯೆ ೧೧ರ ರಾಜಗಾಲುವೆಯಲ್ಲಿ ಹರಡುತ್ತಿರುವ ವಿಪರೀತ ರಾಸಾಯನಿಕ ವಾಸನೆ ಹಾಗೂ ಮರಳೂರು ಭಾಗದ ಕುಡಿಯುವ ನೀರಿನ ಸಮಸ್ಯೆ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಯೂರ ನಗರದ ರಾಜಗಾಲುವೆಯಿಂದ ಬರುತ್ತಿರುವ ತೀವ್ರತರದ ಕೆಮಿಕಲ್ ವಾಸನೆಯು ಸ್ಥಳೀಯ ನಿವಾಸಿಗಳ ನೆಮ್ಮದಿ ಕೆಡಿಸಿದೆ. ಈ ವಾಸನೆಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವ ಬಗ್ಗೆ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ರಾಜಗಾಲುವೆಗೆ ಕೆಮಿಕಲ್ ಮಿಶ್ರಿತ ನೀರು ಎಲ್ಲಿಂದ ಹರಿದು ಬರುತ್ತಿದೆ ಯುಜಿಡಿ ಸಂಪರ್ಕದ ಮೂಲಕವೇ ಇದು ಸೇರುತ್ತಿದೆಯೇ ಅಥವಾ ಯಾರಾದರೂ ಬೇಕೆಂದೇ ರಾಸಾಯನಿಕ ತ್ಯಾಜ್ಯವನ್ನು ಹರಿಸುತ್ತಿದ್ದಾರೆಯೇ ಎಂಬುದನ್ನು ತಕ್ಷಣವೇ ಪತ್ತೆ ಹಚ್ಚಿ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರಿಸರಕ್ಕೆ ಹಾನಿ ಉಂಟುಮಾಡುವ ಮತ್ತು ಸಾರ್ವಜನಿಕರ ಜೀವಕ್ಕೆ ಧಕ್ಕೆ ತರುವ ರೀತಿಯಲ್ಲಿ ರಾಜಗಾಲುವೆಗೆ ಕೆಮಿಕಲ್ ಹರಿಸುವವರ ವಿರುದ್ಧ ಕಾನೂನು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ ಅವರು ಕಾಲುವೆಯ ಸುತ್ತಮುತ್ತ ಅತಿಯಾಗಿ ಬೆಳೆದಿರುವ ಗಿಡಗಂಟೆಗಳು ಹಾಗೂ ರಾಜಗಾಲುವೆಯ ಹೂಳನ್ನು ಕೂಡಲೇ ತೆರವು ಗೊಳಿಸಿ, ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಲು ಸಂಬ0ಧಪಟ್ಟ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ನಗರದ ಮರಳೂರಿನ ವಾರ್ಡ್ ಸಂಖ್ಯೆ ೨೮ಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆಗಳನ್ನು ಆಲಿಸಿದ ಅವರು, ಸಾರ್ವ ಜನಿಕರಿಗೆ ನೀರಿನ ತೊಂದರೆಯಾಗದ0ತೆ ನೋಡಿ ಕೊಳ್ಳುವುದು ಆದ್ಯತೆಯಾಗಬೇಕು ಎಂದರು.
ಸ್ಥಳೀಯವಾಗಿ ಕಂಡು ಬಂದಿರುವ ನೀರಿನ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಿ, ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸ್ಥಳದಲ್ಲೇ ನಿರ್ದೇಶನ ನೀಡಿದರು. ಹಾಗೆಯೇ ಅಣ್ಣೆ ತೋಟದ ನಿವಾಸಿ ಅಂಗವಿಕಲ ತೆಯಿಂದ ಬಳಲುತ್ತಿರುವ ಶ್ರೀನಿವಾಸ್ ಅವರ ರಸ್ತೆ ಸಮಸ್ಯೆಗೆ ಸಂಬ0ಧಿಸಿದ0ತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಯೋಗಾನಂದ, ಇಂಜಿನಿಯರ್ ವಿನಯ್ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.



