
ತುಮಕೂರು: ಎತ್ತಿನ ಹೊಳೆ ಯೋಜನೆಯ ಸುಮಾರು ೨೫೨ ಕಿ.ಮಿ. ನಾಲಾ ಕಾಮಗಾರಿಯಲ್ಲಿ ೨೩೫ ಕಿಮಿ ಕಾಮಗಾರಿ ಪೂರ್ಣಗೊಂಡಿದ್ದು, ಹಾಸನ ಜಿಲ್ಲೆ ಬೇಲೂರು ತಾಲೂಕಿನ ಆರು ಕಿ.ಮಿ.ಅರಣ್ಯ ಜಾಗದಲ್ಲಿ ನಾಲಾ ಕಾಮಗಾರಿ ಪೂರ್ಣಗೊಂಡರೆ ಮುಂದಿನ ೨೦೨೬ರ ಜೂನ್ ವೇಳೆಗೆ ತುಮಕೂರು ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಯಲಿದೆ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಎತ್ತಿನಹೊಳೆ ಯೋಜನೆಯ ಮುಖ್ಯ ಇಂಜಿನಿಯರ್ ಆನಂದ ಸ್ಪಷ್ಟನೆ ನೀಡಿದ್ದಾರೆ.
ನಗರದ ಅಮರಜೋತಿ ನಗರದಲ್ಲಿರುವ ವಿಶ್ವೇಶ್ವರಯ್ಯ ಜಲನಿಗಮದ ಕಚೇರಿ ಎದುರು ಎತ್ತಿನಹೊಳೆ ಯೋಜನೆ ನಮ್ಮದಾಗಲಿ ಎಂಬ ಘೋಷವಾಕ್ಯದೊಂದಿಗೆ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ನೇತೃತ್ವದಲ್ಲಿ ಪಕ್ಷಾತೀತವಾಗಿ ಹಮ್ಮಿಕೊಂಡಿದ್ದ ಎತ್ತಿನಹೊಳೆ ಅಭಿಯಾನದಲ್ಲಿ ಪ್ರತಿಭಟನಾಕಾರರ ಪ್ರಶ್ನೆಗಳಿಗೆ ಉತ್ತರಿಸಿದ ಅಧಿಕಾರಿಗಳು,ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಅರಬ್ಬಿ ಸಮುದ್ರ ಸೇರುವ ಮಳೆಯ ನೀರನ್ನು ಸಂಗ್ರಹಿಸಿ, ಪೂರ್ವದಲ್ಲಿ ರುವ ಬಯಲು ಸೀಮೆಯ ೭ ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಹರಿಸುವ ಯೋಜನೆ ಇದಾಗಿದೆ ಎಂದರು.
ಎತ್ತಿನಹೊಳೆಗೆ ಈ ಯೋಜನೆಯಿಂದ ಒಟ್ಟು ೨೪.೭೮ ಟಿ.ಎಂ.ಸಿ ನೀರು ಹಾಸನ, ಚಿತ್ರದುರ್ಗ, ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ,ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನಿಗಧಿ ಪಡಿಸಿದಂತೆ ಹರಿಸಲು ಎಲ್ಲಾ ರೀತಿಯ ಯೋಜನೆಗಳನ್ನು ಮಾಡಿಕೊಳ್ಳಲಾಗಿದೆ.ಈಗಾಗಲೇ ೦೬-೦೯-೨೦೨೪ರಲ್ಲಿ ಒಂದು ಹಂತದಲ್ಲಿ ನೀರನ್ನು ಲಿಫ್ಟ್ ಮಾಡಿ, ವಾಣಿವಿಲಾಸ ಡ್ಯಾಂ ತುಂಬಿಸಲಾಗಿದೆ.ಪಶ್ಚಿಮಘಟ್ಟದಿAದ ನೀರು ತೆಗೆಯಲಾಗಿದೆ.ಕೇಂದ್ರ ಅರಣ್ಯ ಇಲಾಖೆ ಅಕ್ಷೇಪ ವ್ಯಕ್ತಪಡಿಸಿರುವ ಆರು ಕಿ.ಮಿ. ಅರಣ್ಯ ಭೂಮಿಯಲ್ಲಿ ನಾಲೆ ಮಾಡಲು ಅನುಮೋಧನೆ ದೊರೆತರೆ ನಿಗದಿಯಂತ ನೀರು ಹರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಕೇAದ್ರ ಅರಣ್ಯ ಸಚಿವಾಲಯದ ಆಕ್ಷೇಪಣೆಗಳಿಗೆ ತಕ್ಕಂತೆ ಉತ್ತರ ನೀಡಿದಲ್ಲದೆ, ಅವರ ಸಲಹೆಯಂತೆ ನಾವು ಬಳಕೆ ಮಾಡಿಕೊಂಡಿರುವ ಅರಣ್ಯ ಭೂಮಿಗೆ ಬದಲಾಗಿ, ಹೆಚ್ಚುವರಿಯಾಗಿಯೇ ಪರ್ಯಾಯ ಭೂಮಿಯನ್ನು ನೀಡಲಾಗಿದೆ.ಅಲ್ಲದೆ ಕೇಂದ್ರದ ಸೂಚನೆಯಂತೆ ಇಡುವಳಿ ಭೂಮಿಗೂ ೪೯.೯೩ ಕೋಟಿ ರೂ ಪರಿಹಾರವನ್ನು ನೀಡಲಾಗಿದೆ.ಕಾಮಗಾರಿ ನಡೆದಿರುವ ಅರಣ್ಯ ಭೂಮಿಗೆ ಬದಲಾಗಿ ಅದರ ಹತ್ತು ಪಟ್ಟು ಪ್ರದೇಶದಲ್ಲಿ ಅರಣ್ಯ ಬೆಳೆಸಲಾಗಿದೆ.ಆದರೂ ಸಹ ಕೇಂದ್ರದ ಅರಣ್ಯ ಸಚಿವಾಲಯ, ಹಸಿರು ಪೀಠ ಈ ಯೋಜನೆಗೆ ಅನುಮತಿ ನೀಡಲು ಹಿಂದೇಟು ಹಾಕುತ್ತಿದೆ.ನಾವು ಕೂಡ ಐದು ಬಾರಿ ಅಧಿಕಾರಿಗಳನ್ನು ಭೇಟಿಯಾಗಿ ಎಲ್ಲಾ ನಿಖರ ಮಾಹಿತಿಯೊಂದಿಗೆ ಸಮಜಾಯಿಸಿ ನೀಡಿದ್ದೇವೆ. ಎರಡು ದಿನಗಳ ಹಿಂದೆಯೂ ಹೋಗಿ ಮತ್ತೊಮ್ಮೆ ಮನವಿ ಮಾಡಿದ್ದೇವೆ. ಎಷ್ಟು ಬೇಗ ಅನುಮತಿ ದೊರೆಯುತ್ತದೆಯೋ ಅಷ್ಟು ಬೇಗ ನೀರು ತುಮಕೂರು ಮತ್ತು ಯೋಚಿತ ಪ್ರದೇಶಗಳಿಗೆ ಹರಿಯಲಿದೆ.ವಿಶ್ವೇಶ್ವರಯ್ಯ ಜಲನಿಗಮದಿಂದ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಸಿಇ ಆನಂದ ಸ್ಪಷ್ಟನೆ ನೀಡಿದರು.
ಇದಕ್ಕೂ ಮೊದಲು ಮಾತನಾಡಿದ ಕೌಶಲ್ಯಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ,ಎತ್ತಿನಹೊಳೆ ಯೋಜನೆ ಬಯಲು ಸೀಮೆಯ ಜೀವ ಜಲದ ಯೋಜನೆ. ಈಗಾಗಲೇ ಶೇ೯೦ ರಷ್ಟು ಕೆಲಸ ಮುಗಿದಿದ್ದರೂ ಯೋಜನೆಗೆ ಅನಗತ್ಯ ಅಕ್ಷಪಣೆಗಳನ್ನು ಕೇಂದ್ರ ಸರಕಾರ ಸಲ್ಲಿಸುತ್ತಿದೆ.ಇದು ಒಪ್ಪುವಂತಹದಲ್ಲ. ಈಗಾಗಲೇ ಕೇಂದ್ರದ ಮಲತಾಯಿ ಧೋರಣೆಯಿಂದ ಮೇಕೆದಾಟು,ಕಳಸ-ಬಂಡೂರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ.ಈ ಯೋಜನೆಯೂ ಅದೇ ರೀತಿಯಾದರೆ ಇಡೀ ಬಯಲು ಸೀಮೆ ಒಂದು ಹನಿ ಕುಡಿಯುವ ನೀರಿಗೂ ಪರದಾಡಬೇಕಾಗುತ್ತದೆ.ಹಾಗಾಗಿ ಯೋಜನೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ಜನರು ಕೇಂದ್ರದ ಮಲತಾಯಿ ಧೋರಣೆ ವಿರುದ್ದ ದ್ವನಿ ಎತ್ತಬೇಕಿದೆ.ಹಾಗೆಯೇ ಜಿಲ್ಲೆಯ ಸಂಸದರು, ಯೋಜನೆಯ ಪರವಾಗಿ ಕೇಂದ್ರದಲ್ಲಿ ಮಾತನಾಡಿ, ಪರಿಸರ ಇಲಾಖೆಯ ಅನುಮತಿ ಕೊಡಿಸಬೇಕು ಎಂದು ಆಗ್ರಹಿಸಿದರು.
ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಅಧಿವೇಶನದಲ್ಲಿ ಭಾಗವಹಿಸಿದ್ದು, ಅಧಿವೇಶನ ಮುಗಿದ ನಂತರ ಅಂದರೆ ಸೋಮವಾರ ಎತ್ತಿನಹೊಳೆ ಯೋಜನೆಯ ಅಧಿಕಾರಿಗಳು, ರೈತರು ಮತ್ತು ಜನಪ್ರತಿನಿಧಿಗಳ ಸಭೆಯನ್ನು ನಡೆಸಲಿದ್ದಾರೆ. ಸಭೆಯ ನಂತರ ಕೇಂದ್ರ ಸರಕಾರದ ಮೇಲೆ ಮತ್ತಷ್ಟು ಒತ್ತಡ ಹಾಕಲು ಅನುಕೂಲವಾಗುವಂತೆ ಹೋರಾಟ ರೂಪಿಸಲಾಗುವುದು ಎಂದು ಮುರುಳೀಧರ ಹಾಲಪ್ಪ ತಿಳಿಸಿದರು.
ಮುಖಂಡರಾದ ಎಸ್.ಷಪಿಅಹಮದ್,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ,ತುಮುಲ್ ನಿರ್ದೇಶಕರಾದ ಭಾರತಿ ಶ್ರೀನಿವಾಸ್,ಮಾಜಿ ಶಾಸಕರಾದ ಗಂಗಹನುಮಯ್ಯ, ಸಿದ್ದಲಿಂಗೇಗೌಡ,ಇಕ್ಬಾಲ್ ಅಹಮದ್,ಪುಟ್ಟಕಾಮಣ್ಣ ಸೇರಿದಂತೆ ಹಲವರು ಮಾತನಾಡಿ,ಎತ್ತಿನಹೊಳೆ ಯೋಜನೆಗೆ ಅಡ್ಡಿಪಡಿಸುತ್ತಿರುವ ಕೇಂದ್ರ ಸರಕಾರದ ಮಲತಾಯಿ ಧೋರಣೆಯನ್ನು ಖಂಡಿಸಿದರಲ್ಲದೆ,ಜಿಲ್ಲೆಯ ಸಂಸದರು, ಕೇಂದ್ರ ಸಚಿವ ರಾಗಿರುವ ವಿ.ಸೋಮಣ್ಣ, ಜಿಲ್ಲೆಯ ಜನರ ಪರವಾಗಿ ನಿಂತು ಯೋಜನೆಗೆ ಅನುಮೋಧನೆ ಕೊಡಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ತಿಪಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಂತರಾಜು, ತಿಪಟೂರು ಟೌನ್ ಅಧ್ಯಕ್ಷ ಪ್ರಕಾಶ್, ತುರುವೇಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು, ಸಿ.ಎಸ್.ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜು, ಚಿಕ್ಕನಾಯಕನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್, ಹುಳಿಯಾರು ಚಿಕ್ಕಣ್ಣ,ಗುಬ್ಬಿ ವೆಂಕಟೇಶ್, ತುಮಕೂರು ಗ್ರಾಮಾಂತರ ಪ್ರಕಾಶ್, ವಿಜಯಲಕ್ಷಿö್ಮ,ಭಾಗ್ಯ, ಸೌಭಾಗ್ಯಮ್ಮ, ಸುಜಾತ,ಪಿ.ಶಿವಾಜಿ, ಕೆಂಚಮಾರಯ್ಯ, ವಾಲೆಚಂದ್ರಯ್ಯ, ಪಿ.ಎನ್.ರಾಮಯ್ಯ,ಜೈನ್ ಷೇಕ್ ಮಹಮದ್,ವೆಂಕಟೇಶ್, ಜಯರಾಂ, ಮಹೇಶ್ ಸೇರಿದಂತೆ ನೂರಾರು ಜನರು, ರೈತ ಸಂಘದ ಮುಖಂಡರುಗಳು ಪಾಲ್ಗೊಂಡಿದ್ದರು.
ಅಧಿಕಾರಿಗಳು ಎತ್ತಿನಹೊಳೆ ಯೋಜನೆ ಕುರಿತು ಆಸಕ್ತ ರೈತರು ಮತ್ತು ಮುಖಂಡರುಗಳಿಗೆ ಪಿಪಿಟಿ ಮೂಲಕ ವಿಸ್ಕೃತ ವರದಿಯನ್ನು ನೀಡಿದರು.



