
ಪಾವಗಡ: ತಾಲೂಕಿನ ವೈ.ಈ.ರಂಗಯ್ಯ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ‘ನಶೆ ಮುಕ್ತ ಕರ್ನಾಟಕ’ ಅಭಿಯಾನ ಕಾರ್ಯಕ್ರಮವನ್ನು ಕಾಲೇಜಿನ ಐಕ್ಯೂಎಸಿ ಹಾಗೂ ಪಾವಗಡ ಪೊಲೀಸ್ ಠಾಣೆಯ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪಾವಗಡ ಪೊಲೀಸ್ ಠಾಣೆಯ ಸಿಪಿಐ ಸುರೇಶ್ ಮಾತನಾಡಿ, ಇಡೀ ತುಮಕೂರು ಜಿಲ್ಲೆಯಲ್ಲಿ ಪಾವಗಡ ತಾಲೂಕಿನಲ್ಲಿ ಅತಿ ಹೆಚ್ಚು ಮಾದಕ ದ್ರವ್ಯ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು. ಇತ್ತೀಚಿನ ವರ್ಷಗಳಲ್ಲಿ ಯುವ ಸಮೂಹ ದುಶ್ಚಟಗಳಿಗೆ ದಾಸರಾಗುತ್ತಿರುವುದು ಆತಂಕಕಾರಿ ವಿಷಯವಾಗಿದ್ದು, ಸಮಾಜದಲ್ಲಿ ವ್ಯಸನಿಗಳ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಇಲಾಖೆಗೆ ತಿಳಿಸಬೇಕು ಎಂದು ಮನವಿ ಮಾಡಿದರು. ಮಾಹಿತಿ ನೀಡುವವರ ಹೆಸರನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲಾಗುವುದು ಎಂದು ಭರವಸೆ ನೀಡಿದರು. ಜೊತೆಗೆ ‘ನಶೆ ಮುಕ್ತ ಕರ್ನಾಟಕ’ ಆಪ್ ಅಭಿವೃದ್ಧಿಪಡಿಸಲಾಗಿದ್ದು, ಆಪ್ ಮೂಲಕವೂ ಮಾಹಿತಿ ನೀಡಬಹುದಾಗಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ವಿ.ಎನ್. ಮುರುಳಿಧರ್ ಮಾತನಾಡಿ, ಯುವಕರು ಮಾದಕ ದ್ರವ್ಯಗಳ ದುಶ್ಚಟಕ್ಕೆ ಬಲಿಯಾಗಬಾರದು ಎಂದು ಎಚ್ಚರಿಸಿದರು. ಮಾದಕ ವಸ್ತುಗಳ ಬಳಕೆಯು ತೀವ್ರ ಮಾನಸಿಕ, ಸಾಮಾಜಿಕ ಹಾಗೂ ದೈಹಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಹೇಳಿದರು. ಭಾರತ ಸರ್ಕಾರವು ೨೦೨೦ರಿಂದ ‘ನಶೆ ಮುಕ್ತ ಭಾರತ’ ಅಭಿಯಾನವನ್ನು ಆರಂಭಿಸಿರುವುದನ್ನು ಅವರು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಶ್ರೀಧರ್ ಎನ್, ಐಕ್ಯೂಎಸಿ ಸಂಚಾಲಕರಾದ ಗಿರೀಶ್ ಕೆ.ಆರ್., ಲಿಂಗರಾಜು ಪಿ., ಶ್ರೀನಿವಾಸ್ ಎಲ್., ಮಹಾಲಕ್ಷ್ಮಿ ಎನ್., ಕೃಷ್ಣ ಎಂ. ಉಪಸ್ಥಿತರಿದ್ದರು.



