
ತುಮಕೂರು: ಭೌತಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಅದರೊಂದಿಗೆ ಶಿವಜ್ಞಾನದ ಅರಿವು ಮತ್ತು ಆಚರಣೆ ಮುಖ್ಯ. ಚಿಂತೆ ಚಿಂತನಗೊ0ಡಾಗ ಬಾಳು ವಿಕಾಸಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸೋಮವಾರ ನಗರದ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾಭವನದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್(ರಿ) ಆಶ್ರಯದಲ್ಲಿ ಜರುಗಿದ ಧನುರ್ಮಾಸದ ಇಷ್ಟಲಿಂಗ ಮಹಾಪೂಜಾ-ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಈಶ ನಿರ್ಮಿತವಾದ ಈ ಪ್ರಪಂಚದಲ್ಲಿ ಇರುವುದೆಲ್ಲವೂ ಅಮೂ ಲ್ಯ ಸಂಪತ್ತು. ಚಿನ್ನವಿಲ್ಲದೇ ಬದುಕಬಹುದು. ಆದರೆ ಅನ್ನವಿಲ್ಲದೇ ಬದುಕಲಾಗದು. ಶ್ರದ್ಧಾವಂತರಾದ ಭಾರತೀಯರು ಮಣ್ಣು, ನೀರು, ಗಾಳಿ, ಬೆಂಕಿ, ಕಲ್ಲುಗಳಲ್ಲಿ ದೇವರನ್ನು ಕಂಡು ಪೂಜಿಸಿದವರು. ದೇವರ ಮೇಲಿನ ನಂಬಿಕೆ ಶಾಶ್ವತ ನಂದಾದೀಪ. ನಂಬಿಗೆ ವಿಶ್ವಾಸಗಳನ್ನು ಎಂದಿಗೂ ಕಳೆದುಕೊಳ್ಳಬಾರದು. ಮನಸ್ಸೆಂಬ ಚಂಚಲ ಅಲೆಗಳ ಹೊಯ್ದಾಟವನ್ನು ಶಾಂತ ಪ್ರಶಾಂತಗೊಳಿಸುವ ಮಾರ್ಗವೇ ಆಧ್ಯಾತ್ಮವಾಗಿದೆ ಎಂದು ಶ್ರೀ ಜಗದ್ಗುರು ರೇಣುಕಾ ಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ನಿರೂ ಪಿಸಿದ್ದಾರೆ. ಮನುಷ್ಯನಿಗೆ ಏನೆಲ್ಲ ಸಂಪತ್ತು ಸಂಪನ್ಮೂಲ ಸೌಲಭ್ಯ ಗಳಿದ್ದರೂ ಬದುಕು ಹರ್ಷದಾಯಕವಾಗಿಲ್ಲ. ಜ್ಯೋತಿ ಉರಿದು ಬೆಳಕು ಕೊಡುವಂತೆ ಸಂತ ಮಹಂತರು ಬದುಕಿ ಬಾಳುವ ಜನ ಸಮುದಾಯಕ್ಕೆ ಆದರ್ಶ ವಿಚಾರ ಧಾರೆಗಳನ್ನು ಕೊಟ್ಟಿದ್ದಾರೆ. ಅವರು ತೋರಿದ ದಾರಿಯಲ್ಲಿ ನಡೆದರೆ ಸಾಕು. ಜೀವನ ಸಾರ್ಥಕಗೊಳ್ಳುತ್ತದೆ. ತುಮಕೂರು ನಗರದಲ್ಲಿ ಧನುರ್ಮಾಸ ನಿಮಿತ್ಯ ಐದು ದಿನಗಳ ಕಾರ್ಯಕ್ರಮ ಸಂಯೋಜಿಸಿರುವುದು ತಮಗೆ ಹರುಷ ತಂದಿದೆ ಎಂದರು.
ಸಮಾರ0ಭ ಉದ್ಘಾಟಿಸಿದ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಮಾತನಾಡಿ ಸಂಘರ್ಷದಿ0ದ ಕೂಡಿದ ಮನುಷ್ಯನ ಬಾಳಿಗೆ ನೆಮ್ಮದಿ ಶಾಂತಿ ದೊರಕಲು ಆಧ್ಯಾತ್ಮ ಚಿಂತನಗಳು ಅವಶ್ಯಕ. ಭಾರತೀಯ ಉತ್ಕೃಷ್ಟ ಸಂಸ್ಕೃತಿಯನ್ನು ನಾಡಿನ ಪೀಠ ಮಠಗಳು ಬೆಳೆಸುತ್ತಾ ಬಂದಿವೆ. ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿದ ಶ್ರೀ ರಂಭಾಪುರಿ ಪೀಠದ ಲಿಂ.ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳವರ ದೂರದೃಷ್ಟಿ ಮತ್ತು ವಿಶಾಲ ಚಿಂತನಗಳು ನಮ್ಮೆಲ್ಲರ ಬಾಳಿಗೆ ಬೆಳಕು ತೋರುತ್ತಿವೆ. ಇಂದಿನ ಜಗದ್ಗುರುಗಳು ನಿರಂತರ ಶ್ರಮಿಸಿ ನಾಡು ನುಡಿ ಧರ್ಮ ಕಟ್ಟಿ ಬೆಳೆಸುವ ಕಾರ್ಯ ಮಾಡುತ್ತಿರುವುದು ಸಂತೋಷ ಉಂಟು ಮಾಡುತ್ತದೆ ಎಂದರು.
ದಿನದರ್ಶಿನಿ ಬಿಡುಗಡೆ ಮಾಡಿದ ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ ಮಾತನಾಡಿ ಸತ್ಕಾರ್ಯಗಳ ಮೂಲಕ ಮನುಷ್ಯ ಮುನ್ನಡೆದಾಗ ಎಲ್ಲೆಡೆ ಶಾಂತಿ ಸಮಾಧಾನ ನೆಲೆಗೊಳ್ಳಲು ಸಾಧ್ಯ. ಸತ್ಯ ಶುದ್ಧ ಕಾಯಕದಿಂದ ಬದುಕಿಗೆ ನಿಜವಾದ ಬೆಲೆ ಬರುತ್ತದೆ. ಶ್ರೀ ರಂಭಾಪುರಿ ಜಗದ್ಗುರುಗಳ ಶ್ರಮ ಸಂಚಾರ ಮತ್ತು ಬೋಧಾಮೃತ ನಮ್ಮೆಲ್ಲರ ಉನ್ನತಿಗೆ ಪ್ರೇರಕ ಶಕ್ತಿಯಾಗಿದೆ ಎಂದು ಹರುಷ ವ್ಯಕ್ತಪಡಿಸಿದರು. ಡಾ. ಎಸ್.ಪರಮೇಶ, ಟಿ.ಬಿ.ಹರೀಶ, ಎನ್.ಬಿ. ಪ್ರದೀಪಕುಮಾರ, ನಿಖಿಲ ರಾಜಣ್ಣ, ಸಿ.ಪಿ.ವಿಜಯ, ಎನ್.ಸಿ.ಸಚಿನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕೆ.ಬಿ.ಜಯಣ್ಣ, ಕೆ.ಜಿ.ಜಗದೀಶ ಮತ್ತು ಶಂಕರ್ ಮೋಹನ್ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು.
ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮನುಷ್ಯ ಜೀವನದಲ್ಲಿ ಚತುರ್ವಿಧ ಪುರುಷಾ ರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸದೇ ಇದ್ದರೆ ಜೀವನ ವ್ಯರ್ಥ. ಸುಖ ಶಾಂತಿಯ ಬದುಕಿಗೆ ಧರ್ಮವೊಂದೇ ಆಶಾಕಿರಣ. ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆಗಳು ಸರ್ವರಿಗೂ ಅವಶ್ಯಕವಾಗಿವೆ ಎಂದರು. ನೇತೃತ್ವ ವಹಿಸಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮಾನವ ಜೀವನದ ಉನ್ನತಿಗೆ ಮತ್ತು ಶ್ರೇಯಸ್ಸಿಗೆ ಧರ್ಮವೇ ಮೂಲ. ಸುಖ ಬಯಸುವ ಮನುಷ್ಯ ಧರ್ಮ ಪಾಲನೆ ಮಾಡುತ್ತಿಲ್ಲ. ಧರ್ಮ ರಕ್ಷಿಸಿದರೆ ಧರ್ಮ ನಮ್ಮೆಲ್ಲರನ್ನು ಕಾಪಾಡುತ್ತದೆ. ಧನುರ್ಮಾಸದ ಜ್ಞಾನಯಜ್ಞ ಸಕಲರ ಬಾಳಿಗೆ ಬೆಳಕು ತೋರಲೆಂದರು. ಅಂಕನಹಳ್ಳಿ ಮಠದ ಶಿವರುದ್ರ ಶಿವಾಚಾರ್ಯರು, ಅಂಬಲದೇವರಹಳ್ಳಿ ಮಠದ ಉಜ್ಜನೀಶ್ವರ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು.
ಬಾಳೆಹೊನ್ನೂರು ಶ್ರೀ ಜಗದ್ಗುರು ರೇಣುಕಾಚಾರ್ಯ ಗುರು ಕುಲದ ಸಾಧಕರಿಂದ ವೇದಘೋಷ ಜರುಗಿತು. ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟಿನ ಅಧ್ಯಕ್ಷ ಟಿ.ಆರ್ .ಸದಾಶಿವಯ್ಯ ಸ್ವಾಗತಿಸಿದರು. ಸಹಕಾರ್ಯದರ್ಶಿ ಜಿ.ಎಸ್. ಸಿದ್ಧರಾಜು ನಿರೂಪಣೆ ಮಾಡಿದರು. ಸಮಾರಂಭದ ನಂತರ ಪ್ರಸಾದ ವಿನಿಯೋಗ ಜರುಗಿತು. ಧನುರ್ಮಾಸದ ನಿಮಿತ್ಯ ಪ್ರಾತ:ಕಾಲದಲ್ಲಿ ಶ್ರೀ ರಂಭಾ ಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನಡೆಯಿತು.



