ವೈ.ಎನ್.ಹೊಸಕೋಟೆ: ಒಂಟಿ ಮಹಿಳೆಯರಿಗೆ ಬೈಕ್‌ನಲ್ಲಿ ಡ್ರಾಪ್ ಕೊಡುವುದಾಗಿ ನಂಬಿಸಿ ಕರೆದುಕೊಂಡು ಹೋಗಿ ಚಿನ್ನಾಭರಣಗಳನ್ನು ಸುಲಿಗೆ ಮಾಡುತ್ತಿದ್ದ ಕುಖ್ಯಾತ ಅಂತರರಾಜ್ಯ ಆರೋಪಿ ಯನ್ನು ಬಂಧಿಸಿ, ಆತನಿಂದ ರೂ. ೩.೨೦ ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಬೈಕನ್ನು ಪೋಲೀಸರು ವಶ ಪಡಿಸಿಕೊಂಡಿದ್ದಾರೆ.
ಆರೋಪಿಯು ಆಂಧ್ರಪ್ರದೇಶ ಅನಂತಪುರ0 ಪಟ್ಟಣ ಸಮೀಪದ ಸೋಮಲದೊಡ್ಡಿ ಗ್ರಾಮದ ಬಂಡಿ ಸುಬ್ರಮಣ್ಯಂ ಆಗಿದ್ದು ಹಣ ಗಳಿಕೆಗೆ ಈ ದರೋಡೆ ಮಾರ್ಗವನ್ನು ಅನುಸರಿಸಿರುವುದು ತಿಳಿದು ಬಂದಿದೆ. ದಿನಾಂಕ ೨೩-೧೧-೨೦೨೫ ರಂದು ಸೂಲನಾಯಕನಹಳ್ಳಿ ಗೇಟ್‌ನಿಂದ ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದ ದುರ್ಗಮ್ಮ ಎಂಬಾಕೆಗೆ ಡ್ರಾಪ್ ಕೊಡುವುದಾಗಿ ನಂಬಿಸಿ ಬೈಕಿನಲ್ಲಿ ಹತ್ತಿಸಿಕೊಂಡು ರಸ್ತೆ ಪಕ್ಕದ ಜಮೀನಿನೊಳಗೆ ಬೈಕನ್ನು ಓಡಿಸಿಕೊಂಡು ಹೋಗಿ, ಆಕೆಯ ಚಿನ್ನದ ವಡವೆಗಳನ್ನು ಬಿಚ್ಚಿ ಕೊಡುವಂತೆ ಹೆದರಿಸಿ, ನಿರಾಕರಿಸಿದಾಗ ಕಿವಿಯಲ್ಲಿನ ಓಲೆಗಳನ್ನು ಕಿತ್ತು ರಕ್ತ ಗಾಯಪಡಿಸಿ ಪರಾರಿಯಾಗಿದ್ದನು. ಅದರಂತೆ ದಿನಾಂಕ ೦೮-೧೨-೨೦೨೫ ರಂದು ಪಳವಳ್ಳಿ ಕಟ್ಟೆಯ ಮೇಲೆ ಊರಿಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದ ದೊಡ್ಡಹಳ್ಳಿಯ ಗುಂಡಮ್ಮ ಎಂಬುವರನ್ನು ಬೈಕಿನಲ್ಲಿ ಡ್ರಾಪ್ ಕೊಡುವುದಾಗಿ ನಂಬಿಸಿ ಕೂರಿಸಿಕೊಂಡು ರಸ್ತೆ ಪಕ್ಕದ ಜಮೀನಿನೊಳಗೆ ಬೈಕನ್ನು ಓಡಿಸಿಕೊಂಡು ಹೋಗಿ ಆಕೆಯ ಕೊರಳಲ್ಲಿನ ಮಾಂಗಲ್ಯ ಸರದಲ್ಲಿ ಅರ್ಧ ಸರವನ್ನು ಕಿತ್ತುಕೊಂಡು ಹೋಗಿದ್ದನು. ಈ ಬಗ್ಗೆ ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಆರೋಪಿ ಪತ್ತೆಕಾರ್ಯಕ್ಕೆ ತಂಡವನ್ನು ನೇಮಕ ಮಾಡಿದ್ದ ಮಧುಗಿರಿ ಉಪವಿಭಾಗದ ಡಿ.ವೈ.ಎಸ್.ಪಿ. ಮಂಜುನಾಥ್, ಪಾವಗಡ ಗ್ರಾಮಾಂತರ ವೃತ್ತದ ಸಿಪಿಐ ಗಿರೀಶ್, ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆಯ ಸಿಬ್ಬಂದಿಯಾದ ಶೌಖತ್‌ಲಾಲ್ ಕುರಿ ಮತ್ತು ಸದ್ದಾಂಸಾಹೇಬ್ ರವರುಗಳು ಸಿ.ಸಿ.ಟಿ.ವಿ. ಪೂಟೇಜ್ ಆಧರಿಸಿ ಪಾವಗಡ ಟೌನ್ ಕಲ್ಯಾಣದುರ್ಗ ರಸ್ತೆ ಪಕ್ಕದ ನಲದಿಗಲಬಂಡೆ ಕ್ರಾಸ್ ಬಳಿಯಿರುವ ಬಸ್ ಶೆಲ್ಟರ್ ಬಳಿ ನಿಂತಿದ್ದ ಆರೋಪಿಯಾದ ಬಂಡಿ ಸುಬ್ರಮಣ್ಯಂ ಬಂಧಿಸಿ ಆಂದ್ರಪ್ರದೇಶದ ಕಲ್ಯಾಣದುರ್ಗ ಮುತ್ತೂಟ್ ಪೈನಾನ್ಸ್ನಲ್ಲಿ ಗಿರಿವಿಯಿಟ್ಟಿದ್ದ ೨೨ ಗ್ರಾಂ ತೂಕದ ಎರಡು ಜೊತೆ ಚಿನ್ನದ ಓಲೆಗಳು ಮತ್ತು ಅರ್ಧ ಸರವನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿರುವ ಬೈಕ್‌ನ್ನು ವಶಪಡಿಸಿಕೊಂಡಿರುತ್ತಾರೆ. ಆರೋಪಿಯು ಕೃತ್ಯಕ್ಕೆ ಉಪಯೋಗಿಸಿರುವ ಬೈಕ್‌ನ್ನು ದೊಡ್ಡಬಳ್ಳಾಪುರದಲ್ಲಿ ಕಳ್ಳತನ ಮಾಡಿರುವುದಾಗಿ ಮತ್ತು ಸದರಿ ಬೈಕಿಗೆ ನಕಲಿ ನಂಬರ್ ಬರೆಸಿ ಕೃತ್ಯದ ವೇಳೆಯಲ್ಲಿ ಉಪಯೋಗಿಸಿರುವುದು ತಿಳಿದು ಬಂದಿದೆ.
ತುಮಕೂರು ಜಿಲ್ಲಾ ಎಸ್.ಪಿ. ಅಶೋಕ್.ಕೆ.ವಿ. ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಪುರುಷೋತ್ತಮ್ ಹಾಗೂ ಗೋಪಾಲ್ ಹಾಗೂ ಮಧುಗಿರಿ ಉಪವಿಭಾಗದ ಡಿ.ವೈ.ಎಸ್.ಪಿ. ಮಂಜುನಾಥ್ ಪಾವಗಡ ಗ್ರಾಮಾಂತರ ಸಿಪಿಐ ಗಿರೀಶ್, ಪಿ.ಎಸ್.ಐ.ಗಳಾದ ರಾಮಚಂದ್ರ, ವಿಜಯ್‌ಕುಮಾರ್, ರಾಜೇಂದ್ರ ಹಾಗೂ ಅಪರಾಧ ಸಿಬ್ಬಂದಿಗಳಾದ ಗೋವಿಂದರಾಜು, ಸೋಮಶೇಖರ್, ಶ್ರೀಕಾಂತ್, ಸಂತೋಷ್, ನರಸಿಂಹರಾಜು, ಜಗದೀಶ್ ರವರು ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
(Visited 1 times, 1 visits today)


