ತುಮಕೂರು: ದೇಶಕ್ಕೆ ಸ್ವಾತಂತ್ರ ಬಂದು ೭೮ ವರ್ಷ ಕಳೆದರು ಸಂವಿಧಾನದ ಅರ್ಟಿಕಲ್ ೨೧(ಎ)ಅಡಿಯಲ್ಲಿ ದೇಶದ ಮಕ್ಕಳಿಗೆ ಉಚಿತ ಗುಣಮಟ್ಟದ ಶಿಕ್ಷಣ ನೀಡಲಾಗದೆ ಸರಕಾರಗಳ ವಿರುದ್ದ ಹಾಗೂ ಕೆ.ಪಿ.ಎಸ್ ಮ್ಯಾಗ್ನೇಟ್ ಶಾಲೆಯ ಹೆಸರಿನಲ್ಲಿ ೪೧ ಸಾವಿರ ಸರಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವ ಸರಕಾರದ ಕ್ರಮವನ್ನು ಖಂಡಿಸಿ, ಜನವರಿ ೨೬ರ ಗಣರಾಜೋತ್ಸವ ದಿನದೊಂದು ಕರ್ನಾಟಕ ರಾಜ್ಯ ರೈತ ಹಾಗೂ ಎಸ್.ಡಿ.ಎಂ.ಸಿ ಸಂಘದವತಿಯಿAದ ಕಪ್ಪು ಬಾವುಟದೊಂದಿಗೆ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ರೈತ ಸಂಘದ ಬಿ.ಆರ್.ಯೋಗೀಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಶಿಕ್ಷಣದಲ್ಲಿ ಖಾಸಗೀಕರಣಕ್ಕೆ ಅವಕಾಶ ಮಾಡಿಕೊಟ್ಟ ಪರಿಣಾಮ ಉಳ್ಳವರಿಗೆ ಒಂದು ರೀತಿ ಶಿಕ್ಷಣ, ಇಲ್ಲದವರಿಗೆ ಒಂದು ರೀತಿಯ ಶಿಕ್ಷಣ ಎಂಬುವ0ತಾಗಿದೆ.ಇದಕ್ಕೆ ಸರಕಾರದ ನೀತಿಗಳೇ ಕಾರಣವಾಗಿದ್ದು, ಸರಕಾರ ಎಚ್ಚೆತ್ತುಕೊಂಡು,ಎಲ್ಲಾ ಮಕ್ಕಳಿಗೆ ಉಚಿತ ಗುಣಮಟ್ಟದ ಶಿಕ್ಷಣ ಖಚಿತ ಪಡಿಸದಿದ್ದಲ್ಲಿ, ೨೦೨೬ರ ಜನವರಿ ೨೬ರ ಗಣರಾಜೋತ್ಸವ ದಿನದಂದು ರೈತ ಸಂಘದ ಕಾರ್ಯಕರ್ತರು ಹಾಗೂ ಎಸ್.ಡಿ.ಎಂ.ಸಿ ಸಂಘದ ಸದಸ್ಯರುಗಳು ಬಲಗೈಯಲ್ಲಿ ತ್ರಿವರ್ಣ ದ್ವಜ ಹಾಗೂ ಎಡಗೈಯಲ್ಲಿ ಕಪ್ಪು ಬಾವುಟ ಹಿಡಿದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡಸಲು ತೀರ್ಮಾನಿಸಲಾಗಿದೆ ಎಂದರು.

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಖಾಸಗಿ ಶಾಲೆಗಳನ್ನು ರಾಜಕಾರಣಿಗಳು ಮತ್ತು ಅವರ ಹಿಂಬಾಲಕರು ನಡೆಸುತ್ತಿದ್ದಾರೆ.ಹಾಗಾಗಿ ಸರಕಾರದ ಯಾವ ನಿಯಮಗಳಿಗೆ ಅವರ ಬಳಿ ಬೆಲೆ ಇಲ್ಲದಂತಾಗಿದೆ.ಇದರ ಪರಿಣಾಮ ಎಲ್.ಕೆ.ಜಿ. ಶಿಕ್ಷಣಕ್ಕೆ ಲಕ್ಷ ಗಟ್ಟಲೆ ಶುಲ್ಕ ಕಟ್ಟುವಂತಾಗಿದೆ.ಬಡ ಮತ್ತು ಮಧ್ಯಮ ವರ್ಗದ ಜನರು ಸರಕಾರಿ ಶಾಲೆಗಳ ನಿರ್ಲಕ್ಷತನಕ್ಕೆ ಬೇಸತ್ತು ಸಾಲ,ಸೋಲ ಮಾಡಿ ತಮ್ಮ ಮಕ್ಕಳನ್ನು ದೊಡ್ಡ ಶಾಲೆಗಳಿಗೆ ಸೇರಿಸಿ,ಫೀ ಹೊಂದಿಸಲಾಗದೆ ಪರದಾಡುವಂತಹ ಸ್ಥಿತಿ ಇದೆ.ಹಾಗಾಗಿ ಸರಕಾರ ಸಂವಿಧಾನದ ಅರ್ಟಿಕಲ್ ೨೧(ಎ)ಪ್ರಕಾರ ಎಲ್ಲಾ ಮಕ್ಕಳಿಗೆ ಯಾವುದೇ ತಾರತಮ್ಯವಿಲ್ಲದೆ ಗುಣಮಟ್ಟದ ಉಚಿತ ಶಿಕ್ಷಣವನ್ನು ಖಚಿತ ಪಡಿಸಬೇಕು ಎಂಬುದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಎಸ್.ಡಿ.ಎಂ.ಸಿ ಸಂಘದ ಒತ್ತಾಯವಾಗಿದೆ.ಸರಕಾರ ತ್ವರಿತವಾಗಿ ಕ್ರಮ ಕೈಗೊಳ್ಳದಿದ್ದರೆ ಈಗಾಗಲೇ ಕರೆ ನೀಡಿರುವಂತೆ ಗಣರಾಜೋತ್ಸವ ದಿನದಂದು ಕಪ್ಪು ಬಾವುಟದೊಂದಿಗೆ ಪ್ರತಿಭಟನೆ ಅನಿವಾರ್ಯ ಎಂದು ಯೋಗೀಶ್ ತಿಳಿಸಿದರು.

ಎಸ್.ಡಿ.ಎಂ.ಸಿ ಸಂಘದ ಅಧ್ಯಕ್ಷ ಶಿವರಾಜು ಮಾತನಾಡಿ,ಸರಕಾರಿ ಶಾಲೆಗಳು ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಿದ್ದ0ತೆ, ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಸರಕಾರಿ ಶಾಲೆಗಳು ಉಳಿಯಬೇಕು. ಈ ನಿಟ್ಟಿನಲ್ಲಿ ಎಸ್.ಡಿ.ಎಂ.ಸಿ ಸದಸ್ಯರುಗಳ ಸಂಘ ಕೆಪಿಎಸ್ ಮ್ಯಾಗ್ನಟ್ ಶಾಲೆಯ ಹೆಸರಿನಲ್ಲಿ ವಿಲೀನಗೊಳಿಸಲು ಹೊರಟಿರುವ ೪೧ ಸಾವಿರ ಸರಕಾರಿ ಶಾಲೆಗಳನ್ನು ಉಳಿಸಲು ಕಳೆದ ಡಿಸೆಂಬರ್ ೧೭-೧೮ ಮತ್ತು ೧೯ ರಂದು ಮೂರು ದಿನಗಳ ಕಾಲ ಮೈಸೂರಿನಲ್ಲಿ ಧರಣಿ ನಡೆಸಿ, ಸರಕಾರಿ ಶಾಲೆಗಳ ಉಳಿವಿಗೆ ಕ್ರಮ ಕೈಗೊಳ್ಳಲು ಡಿಸೆಂಬರ್ ೩೧ ರವರೆಗೆ ಗಡುವು ನೀಡಿದ್ದರೂ ಸರಕಾರ ಈ ನಿಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ.ಸರಕಾರದ ಈ ನಿರ್ಲಕ್ಷವನ್ನು ಖಂಡಿಸಿ, ಸಂವಿಧಾನದ ಅರ್ಟಿಕಲ್ ೨೧(ಎ) ಅನ್ವಯ ಎಲ್ಲಾ ಮಕ್ಕಳಿಗೆ ಗುಣಮಟ್ಟದ ಉಚಿತ ಶಿಕ್ಷಣಕ್ಕೆ ಆಗ್ರಹಿಸಿ ಸರಕಾರಕ್ಕೆ ಎಚ್ಚರಿಕೆ ನೀಡುತಿದ್ದೆವೆ.ಸರಕಾರ ಎಚ್ಚೆತ್ತು  ಸರಕಾರಿ ಶಾಲೆಗಳ ಉಳಿವಿಗೆ ಪ್ರಯತ್ನಿಸದಿದ್ದರೆ ೨೦೨೬ರ ಜನವರಿ ೨೬ ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬಲಗೈಯಲ್ಲಿ ಭಾರತದ ತ್ರಿವರ್ಣ ದ್ವಜ, ಎಡಗೈಯಲ್ಲಿ ಪ್ರತಿಭಟನೆಯ ಸಂಕೇತವಾದ ಕಪ್ಪು ಬಾವುಟ ಹಿಡಿದು ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ನಾಗರತ್ನಮ್ಮ,ಮಂಜುನಾಥ್, ಮಾ.ನ,ಕರಿಬಸವಪ್ಪ, ಕೆ.ಚಂದ್ರಶೇಖರ್, ತುರುವೇಕೆರೆ, ಚಿಕ್ಕನಾಯಕನಹಳ್ಳಿಯ ಚಂದ್ರಣ್ಣ, ರಾಮಚಂದ್ರಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

(Visited 1 times, 1 visits today)