
ತುಮಕೂರು: ವಿದ್ಯಾರ್ಥಿಗಳು ಇತಿಹಾಸದಲ್ಲಿ ಭೀಮ ಕೋರೆಂಗಾವ್ ನಂತಹ ಚರಿತ್ರೆಗಳನ್ನು ತಿಳಿದುಕೊಳ್ಳುತ್ತ ತಮ್ಮ ಅರಿವನ್ನ ಎಚ್ಚರಗೊಳಿಸಬೇಕು. ಅಸಮಾನತೆ ಎನ್ನುವುದು ವ್ಯವಸ್ಥೆಯ ಕಣ ಕಣದಲ್ಲೂ ಅಡಗಿದೆ ಅದನ್ನು ನಿರ್ಮೂಲನೆ ಮಾಡಲು ಮುಂದಾಗಬೇಕು. ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಬಯಲು ರಂಗಮ0ದಿರದಲ್ಲಿ ಡಿಸೆಂಬರ್ ೩೧ರಂದು ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ, ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ತರಬೇತಿ, ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ಚಾರಿತ್ರಿಕ ಭೀಮ ಕೋರೆಂಗಾವ್ ವಿಜಯೋತ್ಸವದ ಅಂಗವಾಗಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ರವರ ಪರಿವರ್ತನಾ ಗೀತ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಡಾ. ಬಸವರಾಜು ಈ ದಿನವನ್ನು ಶೌರ್ಯದ ದಿನ, ಸಮಾನತೆಯ ಹೋರಾಟದ ದಿನ, ಒಗ್ಗಟ್ಟಿನ ದಿನ ಎಂದು ಆಚರಿಸಬೇಕು. ಯಾವುದೇ ಶೋಷಣೆಯಿರಲಿ ಅದನ್ನು ಸಂಪೂರ್ಣವಾಗಿ ತೊಡೆದುಹಾಕುವವರೆಗೆ ಎದುರಿಸಬೇಕು. ನಿರಂತರವಾಗಿ ನಡೆಯುವ ಶೋಷಣೆಯ ಹಂತ ಮೀರಿದರೆ ಹೇಗೆ ಪರಿಣಾಮಕಾರಿಯಾಗಿ ಬದಲಾವಣೆಯಾಗುತ್ತದೆ ಎಂಬುದಕ್ಕೆ ೧೮೧೮ ರಲ್ಲಿ ಪೇಶ್ವೆಗಳ ವಿರುದ್ಧ ನಡೆದ ಭೀಮ ಕೋರೆಂಗಾವ್ ಯುದ್ಧವೇ ಸಾಕ್ಷಿಯಾಗಿದೆ. ಯುವಕರು ಸಾಮಾಜಿಕ ಜವಾಬ್ದಾರಿ, ನೈತಿಕತೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಸ0ವಿಧಾನ ವಿಚಾರವಾಗಿ ಪ್ರಬಂಧ ಮತ್ತು ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾಗಿದ್ದ ದಿಲೀಪ್, ಪ್ರಿಯದರ್ಶಿನಿ, ಪ್ರೀತಿ, ಗೀತಾ ಅವರಿಗೆ ಅಭಿನಂದಿಸಲಾಯಿತು. ನಿರ್ಮಲ ತಂಡದವರು ಅಂಬೇಡ್ಕರ್ ರವರ ಪರಿವರ್ತನಾ ಗೀತಾ ಗಾಯನ ಹಾಡಿದರು. ಕಾರ್ಯಕ್ರಮದಲ್ಲಿ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಪ್ರೊ. ಪರಶುರಾಮ ಕೆ. ಜಿ., ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಎಂ. ಕೊಟ್ರೇಶ್, ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಕೇಶವ, ಚಿಕ್ಕಣ್ಣ, ಮಹಾಲಿಂಗ ಇನ್ನಿತರರು ಉಪಸ್ಥಿತರಿದ್ದರು.



