
ತುಮಕೂರು: ತುಮಕೂರು ನಗರ, ದಿಬ್ಬೂರು ಜನತಾ ಕಾಲೋನಿ, ಭೀಮಸಂದ್ರ ಬಡಾವಣೆ, ಸೇರಿದಂತೆ ೬ನೇ ವಾರ್ಡಿನಲ್ಲಿ ಕಳೆದ ೫೦-೬೦ ವರ್ಷಗಳಿಂದ ಹಲವಾರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕುಟುಂಬಗಳು ವಾಸ ಮಾಡುತ್ತಿದ್ದು, ಬಹುತೇಕರಿಗೆ ಇಂದಿಗೂ ಸಹ ಸರಿಯಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಇಂದು ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ವತಿಯಿಂದ ಮನವಿಯನ್ನು ಸಲ್ಲಿಸಿದರು.
ಮನವಿ ಪತ್ರ ಸಲ್ಲಿಸಿದ ಬಳಿಕ ಸುದ್ಧಿಗಾ ರರೊಂದಿಗೆ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಇಂದ್ರಕುಮಾರ್ ಡಿ.ಕೆ. ಮಾತನಾಡುತ್ತಾ ಕಳೆದ ೫೦-೬೦ ವರ್ಷಗಳಿಂದ ಹಲವಾರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕುಟುಂಬಗಳು ವಾಸ ಮಾಡುತ್ತಿದ್ದು, ಬಹುತೇಕರಿಗೆ ಇಂದಿಗೂ ಸಹ ಸರಿಯಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಅಧಿಕಾರಿ ವರ್ಗವು ವಿಫಲವಾಗಿದ್ದಾರೆ, ಇಲ್ಲಿನ ನಿವಾಸಿಗಳ ಪರಿಸ್ಥಿತಿ ಅತಂತ್ರದಲ್ಲಿದೆ ಈ ಭಾಗದಲ್ಲಿ ವಾಸ ಮಾಡುತ್ತಿರುವವರು ಪರಿಶಿಷ್ಟ ಜಾತಿ ಅದರಲ್ಲಿಯೂ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು ಹಲವಾರು ಜನರು ದಿನಗೂಲಿ ನೌಕರರು, ಪೌರಕಾರ್ಮಿಕರು, ಸೇರಿದಂತೆ ಅತ್ಯಂತ ಕಡು ಬಡುವರಾಗಿದ್ದಾರೆ, ಇವರುಗಳು ವಾಸ ಮಾಡುತ್ತಿರುವ ಎಲ್ಲಾ ಜಾಗವು ಸರ್ಕಾರಿ ಹಾಗೂ ಇನಾಮು ಜಾಗವಾಗಿದ್ದು, ಜೀವನದ ಭದ್ರತೆಯಿಲ್ಲದೇ ಪ್ರತಿನಿತ್ಯ ಜೀವನ ಸಾಗಿಸುವಂತಹ ಸ್ಥಿತಿಯಲ್ಲಿದ್ದು ಇವರುಗಳ ಜೀವನದ ಭದ್ರತೆ ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವುದರ ನಿಟ್ಟಿನಲ್ಲಿ ಸ್ಥಳ ಪರಿವೀಕ್ಷಣೆ ಮಾಡಿ ವಾಸ ಮಾಡುತ್ತಿರುವವರಿಂದ ಸೂಕ್ತ ದಾಖಲೆಗಳು, ವಂಶವೃಕ್ಷ, ಜಾತಿ ದೃಢೀಕರಣ ಪತ್ರ ಸೇರಿದಂತೆ ಈ ಭಾಗದ ಜನರಲ್ಲಿ ಪ್ರಸ್ತುತ ಇರುವಂತಹ ದಾಖಲಾತಿಗಳ ಆಧಾರದ ಮೇಲೆ ನೆಲೆಯನ್ನು ಕಲ್ಪಿಸಿಕೊಟ್ಟು, ಮಹಾನಗರ ಪಾಲಿಕೆಯ ವತಿಯಿಂದ ದಾಖಲಾತಿಗಳನ್ನು ಒದಗಿಸಿಕೊಡಬೇಕೆಂದು ಮನವಿಯನ್ನು ಸಲ್ಲಿಸಿದ್ದೇವೆ, ಅದಕ್ಕೆ ಇತ್ತೀಚೆಗೆ ಪಾಲಿಕೆಗೆ ಆಗಮಿ ಸಿರುವ ನೂತನ ಆಯುಕ್ತರು ಸಹ ಸ್ಪಂದನೆ ನೀಡಿದ್ದು, ಆದಷ್ಟು ಶೀಘ್ರವಾಗಿ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಶ್ರೀಮಹರ್ಷಿ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾಧ್ಯಕ್ಷರು ರಾಮಾಂಜಿನಯ್ಯ, ದಲಿತ ಪ್ರಜಾ ಸೇನೆ ರಾಜ್ಯ ಉಪಾಧ್ಯಕ್ಷರಾದ ಮೂರ್ತಣ್ಣ, ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾ ಉಪಾಧ್ಯಕ್ಷರಾದ ಲಕ್ಷಿ÷್ಮನಾರಾಯಣ, ನಗರ ಸಭೆಯ ಮಾಜಿ ಉಪಾಧ್ಯಕ್ಷರಾದ ಹನುಮಂತರಾಯಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



