
ತುಮಕೂರು: ಸ್ತನ ಕ್ಯಾನ್ಸರ್ ಎಂಬುದು ಸ್ತನ ಜೀವಕೋಶಗಳಲ್ಲಾಗುವ ಅನಿಯಂತ್ರಿತ ಬೆಳವಣಿಗೆ ಯಾಗಿದ್ದು, ಆರಂಭಿಕ ಪತ್ತೆ ಹಾಗೂ ಸೂಕ್ತ ಚಿಕಿತ್ಸೆಯಿಂದ ಇದನ್ನು ಗುಣಪಡಿಸಬಹುದು ಎಂದು ಬೆಂಗಳೂರಿನ ಅಪೋಲೋ ಆಸ್ಪತ್ರೆಯ ಅಂತರಾಷ್ಟ್ರೀಯ ಖ್ಯಾತಿಯ ಸ್ತನ ಕ್ಯಾನ್ಸರ್ ತಜ್ಞೆ ಡಾ. ಜಯಂತಿ ಅವರು ಅಭಿಪ್ರಾ ಯಪಟ್ಟರು.
ತುಮಕೂರಿನ ಚಿಕ್ಕಪೇಟೆಯ ಸುಪ್ರಸಿದ್ಧ ವೈದಿಕ ವಿದ್ವಾಂಸರಾಗಿದ್ದ ದಿವಂಗತ ಸಭಾಮುದ್ರೆ ಶಾಮಣ್ಣರವರ ಮೊಮ್ಮಗಳಾದ ಡಾ. ಜಯಂತಿ ಅವರು ತುಮಕೂರಿನ ಎಂ.ಜಿ.ರಸ್ತೆಯ ಮಹಿಳಾ ಸಮಾಜದಲ್ಲಿ ಮಹಿಳಾ ಸಮಾಜ ಟ್ರಸ್ಟ್ ವತಿಯಿಂದ ಮಾರ್ಚ್ ೨೩ ರಂದು ಏರ್ಪಟ್ಟಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾ ಚರಣೆಯನ್ನು ಉದ್ಘಾಟಿಸಿ, ‘ಸ್ತನ ಕ್ಯಾನ್ಸರ್ ಬಗ್ಗೆ ಮುಂಜಾಗ್ರತೆ ಹಾಗೂ ವೈದ್ಯಕೀಯ ಸಲಹೆಗಳು’ ಕುರಿತು ಮಾತನಾಡುತ್ತಿದ್ದರು.
ಕಂಕುಳು ಅಥವಾ ಸ್ತನದ ಭಾಗದಲ್ಲಿ ನೋವಿಲ್ಲದ ಊತ, ಗಡ್ಡೆ ಬೆಳೆಯುವುದು, ಸ್ರನದ ಆಕಾರ, ಗಾತ್ರದಲ್ಲಿ ಗಮನಾರ್ಹ ವ್ಯತ್ಯಾಸ, ನಿಪ್ಪಲ್‌ನಲ್ಲಿ ದ್ರವರೂಪದ ಸ್ರಾವ, ಊತ, ಸ್ತನ ಅಥವಾ ತೊಟ್ಟಿನಲ್ಲಿ ನೋವು, ಚರ್ಮದ ಬದಲಾವಣೆ ಸ್ತನ ಕ್ಯಾನ್ಸರ್‌ನ ಮುಖ್ಯ ಲಕ್ಷಣಗಳಾಗಿವೆ. ಅನುವಂಶಿಕತೆ, ಮಿತಿಮೀರಿದ ತೂಕ, ಬೊಜ್ಜು, ವ್ಯಾಯಾಮರಹಿತ ಜೀವನ, ಧೂಮಪಾನ ಮತ್ತು ಮದ್ಯಪಾನ, ದೈಹಿಕ ಚಟುವಟಿಕೆಯ ಕೊರತೆ ಹಾಗೂ ಋತುಚಕ್ರದ ಸಮಯದಲ್ಲಿ ಹಾರ್ಮೋನ್‌ಗಳಲ್ಲಾಗುವ ಏರುಪೇರಿನಿಂದಲೂ ಸ್ತನ ಕ್ಯಾನ್ಸರ್ ಬರುವ ಎಲ್ಲ ಸಾಧ್ಯತೆಗಳಿವೆ. ಮಹಿಳೆಯರಿಗೆ ೪೦ ವರ್ಷ ವಯಸ್ಸಿನ ನಂತರ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚಾಗುವ ಲಕ್ಷಣಗಳು ಕಂಡುಬರುತ್ತವೆ. ಮ್ಯಾಮೋಗ್ರಾಂ ಪರೀಕ್ಷೆಯ ಮೂಲಕ ಈ ಅಪಾಯವನ್ನು ಆರಂಭದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಿ ನಿವಾರಿಸಬಹುದು ಎಂದು ಅನೇಕ ಉದಾಹರಣೆಗಳೊಂದಿಗೆ ವಿಶ್ಲೇ಼ಷಿಸಿದರು.
ಮಹಿಳಾ ಸಮಾಜದ ಅಧ್ಯಕ್ಷೆ ಉಷಾ ಅನಂತರಾಮಯ್ಯ ಮಾತನಾಡಿ ಮಹಿಳೆ ಇಂದು ಅಡುಗೆಮನೆಯಿಂದ ಆಗಸದವರೆಗೂ ಎಲ್ಲ ಕ್ಷೇತ್ರಗಳಲ್ಲೂ ತನ್ನದೇ ಆದ ಛಾಪು ಮೂಡಿಸಿದ್ದಾಳೆ ಎಂದರು.
ಮಹಿಳಾ ಸಮಾಜ ಟ್ರಸ್ಟ್ ಅಧ್ಯಕ್ಷೆ ಶೀಲವತಿ ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಕಾರ್ಯದರ್ಶಿ ಸುಭಾಷಿಣಿ ರವೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರ ಸರ್ಮತೋಮುಖ ಅಭಿವೃದ್ಧಿಗಾಗಿ ಹಾಗೂ ಸ್ವಾವಲಂ ಬಿಯಾಗಿ ಜೀವಿಸಲು ಟ್ರಸ್ಟ್ ವತಿಯಿಂದ ಹಲವಾರು ಕೌಶಲ್ಯಾಧಾರಿತ ಕಾರ್ಯಕ್ರಮಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಮಹಿಳಾ ದಿನದ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಾಜದ ಸದಸ್ಯೆಯರಿಂದ ಹಾಡು, ನೃತ್ಯ ಹಾಗೂ ಕಿರುನಾಟಕ ಪ್ರದರ್ಶನ ನಡೆಯಿತು.
ಸ್ಮಿತಾ ಶ್ರೀನಿವಾಸ್ ಮತ್ತು ರೋಹಿಣಿ ಶ್ರೀಧರ್ ಪ್ರಾರ್ಥಿಸಿದರು. ಸುಭಾಷಿಣಿ ರವೀಶ್ ಸ್ವಾಗತಿಸಿ, ವಂದಿಸಿದರು. ಮಂಜುಳಾದೇವಿ ನಿರೂಪಿಸಿದರು.





