
ಹುಳಿಯಾರು: ಹುಳಿಯಾರು-ಚಿಕ್ಕನಾಯಕನಹಳ್ಳಿ ೧೫೦ ಎ ರಾಷ್ಟಿçÃಯ ಹೆದ್ದಾರಿಯ ಬಳ್ಳೆಯಕಟ್ಟೆ ಬಳಿ ತಿಮ್ಮನಹಳ್ಳಿ ಸಿಸಿ ರಸ್ತೆ ಕಾಮಗಾರಿ ನೆಪದಲ್ಲಿ ನಿಯಮ ಬಾಹಿರವಾಗಿ ಸ್ಥಾಪಿಸಲಾಗಿದ್ದ ಆರ್.ಎಂ.ಸಿ (ರೆಡಿ ಮಿಕ್ಸ್ ಕಾಂಕ್ರೀಟ್) ಪ್ಲಾಂಟ್‌ನ ಅಕ್ರಮಗಳ ಕುರಿತು ಪತ್ರಿಕೆಯಲ್ಲಿ ಪ್ರಕಟಿಸಿದ್ದ ವಿಶೇಷ ವರದಿಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಎಚ್ಚೆತ್ತುಕೊಂಡಿದ್ದಾರೆ. ವರದಿ ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತ ಘಟಕದ ನಿರ್ವಹಣಾಗಾರರು ಸಾರ್ವಜನಿಕರ ದೂರಿಗೆ ಸ್ಪಂದಿಸಿ, ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಮುಂದಾಗಿದ್ದಾರೆ.
ಹೆದ್ದಾರಿ ಬದಿಯಲ್ಲಿ ಎತ್ತರದ ಶಾಶ್ವತ ತಡೆಗೋಡೆ!: ಆರ್.ಎಂ.ಸಿ ಪ್ಲಾಂಟ್‌ನಿAದ ಏಳುತ್ತಿದ್ದ ಸಿಮೆಂಟ್ ಮಿಶ್ರಿತ ಧೂಳು ಹೆದ್ದಾರಿ ಪ್ರಯಾಣಿಕರ ಕಣ್ಣು ಕತ್ತಲಿಸಿ, ಉಸಿರಾಟದ ತೊಂದರೆ ಉಂಟುಮಾಡುತ್ತಿರುವ ಬಗ್ಗೆ ಪತ್ರಿಕೆ ಸವಿಸ್ತಾರವಾಗಿ ಬೆಳಕು ಚೆಲ್ಲಿತ್ತು. ಹಿಂದೆ ಹಾಕಲಾಗಿದ್ದ ಶೆಡ್ ನೆಟ್ ಮೆಸ್ ಹರಿದು ಹೋಗಿದ್ದನ್ನು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದರ ಫಲಶ್ರುತಿಯಾಗಿ, ಈಗ ಗುತ್ತಿಗೆದಾರರು ಎಚ್ಚೆತ್ತುಕೊಂಡು ಧೂಳು ರಸ್ತೆಯ ಕಡೆಗೆ ಹರಡದಂತೆ ತಡೆಯಲು ರಸ್ತೆಯ ಬದಿಯಲ್ಲಿ ಎತ್ತರದ ಶಾಶ್ವತ ತಡೆಗೋಡೆಯನ್ನು ನಿರ್ಮಿಸಿದ್ದಾರೆ. ಇದರಿಂದಾಗಿ ಹೆದ್ದಾರಿಯಲ್ಲಿ ಓಡಾಡುವ ಬೈಕ್ ಸವಾರರು ಹಾಗೂ ಪಾದಚಾರಿಗಳು ನಿಟ್ಟುಸಿರು ಬಿಡುವಂತಾಗಿದೆ.

ಅಕ್ರಮ ವಿದ್ಯುತ್ ಕಟ್: ಈಗ ಜನರೇಟರ್ ಬಳಕೆ: ಸಮೀಪದ ಗ್ರಾಮದ ಟಿಸಿಯಿಂದ ತಾತ್ಕಾಲಿಕ ಮೀಟರ್ ಹೆಸರಿನಲ್ಲಿ ಅಪಾಯಕಾರಿ ರೀತಿಯಲ್ಲಿ ತಂತಿಗಳನ್ನು ಎಳೆದುಕೊಂಡು ವಾಣಿಜ್ಯ ಬಳಕೆಗೆ ಅಕ್ರಮವಾಗಿ ವಿದ್ಯುತ್ ಪಡೆದುಕೊಳ್ಳಲಾಗುತ್ತಿತ್ತು. ಪತ್ರಿಕೆಯಲ್ಲಿ ಈ ಬಗ್ಗೆ ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಬೆಸ್ಕಾಂ ಅಧಿಕಾರಿಗಳ ಸೂಚನೆ ಅಥವಾ ಕಾನೂನು ಕ್ರಮದ ಭೀತಿಯಿಂದಾಗಿ, ಮೋಟಾರ್ ಲೈನ್‌ಗೆ ಹಾಕಿದ್ದ ಅಕ್ರಮ ವಿದ್ಯುತ್ ಸಂಪರ್ಕವನ್ನು ಸಂಪೂರ್ಣವಾಗಿ ಡಿಸ್‌ಕನೆಕ್ಟ್ (ಕಡಿತ) ಮಾಡಲಾಗಿದೆ. ಪ್ರಸ್ತುತ ಪ್ಲಾಂಟ್‌ನ ನಿರ್ವಹಣೆಗೆ ಜನರೇಟರ್‌ಗಳನ್ನು ಬಳಸಲಾಗುತ್ತಿದೆ.
ಚಾನೆಲ್ ನೀರಿಗೂ ಬ್ರೇಕ್: ಟ್ಯಾಂಕರ್ ಮೂಲಕ ನೀರು ಸರಬರಾಜು: ಕೃಷಿಕರ ಕೆಂಗಣ್ಣಿಗೆ ಗುರಿಯಾಗಿದ್ದ ಚಾನೆಲ್ ನೀರಿನ ಅಕ್ರಮ ಬಳಕೆಯೂ ಈಗ ನಿಂತಿದೆ. ಚಾನೆಲ್‌ನಿಂದ ನೇರವಾಗಿ ಮೋಟಾರ್ ಇಟ್ಟು ನೀರನ್ನು ಎತ್ತುತ್ತಿದ್ದ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಅದರ ಬದಲಾಗಿ, ಈಗ ಕಟ್ಟೆ ನೀರನ್ನು ಮೋಟಾರ್ ಮೂಲಕ ಎತ್ತಿ, ಟ್ಯಾಂಕರ್‌ಗಳ ಮುಖಾಂತರ ಪ್ಲಾಂಟ್‌ಗೆ ತಂದು ನೀರು ಹೊಡೆಸಲಾಗುತ್ತಿದೆ. ಇದರಿಂದಾಗಿ ಸ್ಥಳೀಯ ರೈತರ ಮತ್ತು ಕೃಷಿ ಭೂಮಿಯ ನೀರಿನ ಹಕ್ಕಿಗೆ ಧಕ್ಕೆಯಾಗುವುದು ತಪ್ಪಿದೆ.
ಮಾಧ್ಯಮವೊಂದು ಸಮಾಜದ ಲೋಪದೋಷಗಳನ್ನು ಎತ್ತಿ ತೋರಿಸಿದಾಗ ವ್ಯವಸ್ಥೆ ಹೇಗೆ ಸರಿಹೋಗುತ್ತದೆ ಎಂಬುದಕ್ಕೆ ಬಳ್ಳೆಯಕಟ್ಟೆಯ ಈ ಘಟನೆಯೇ ಸಾಕ್ಷಿ. ಕಾಮಗಾರಿಗಳ ಹೆಸರಿನಲ್ಲಿ ನಿಯಮ ಉಲ್ಲಂಘಿಸುವವರಿಗೆ ಈ ಇಂಪ್ಯಾಕ್ಟ್ ವರದಿ ಒಂದು ಎಚ್ಚರಿಕೆಯ ಗಂಟೆಯಾಗಿದೆ.

