
ಶಿರಾ: ನಗರದ ಅಮರಾಪುರ ರಸ್ತೆಯ ಪ್ರೆಸಿಡೆನ್ಸಿ ಕಾಲೇಜು ಸಮೀಪದ ‘ಬೇಕ್ ಪಾಯಿಂಟ್’ ರಸ್ತೆ ತಿರುವಿನಲ್ಲಿ ಬುಧವಾರ ರಾತ್ರಿ ಸುಮಾರು ೯.೩೦ಕ್ಕೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಶಿವಕುಮಾರ್ (೫೦) ಮೃತಪಟ್ಟಿದ್ದಾರೆ.
ಶಿವಕುಮಾರ್ ಅವರು ರಸ್ತೆ ದಾಟುತ್ತಿದ್ದ ವೇಳೆ ಎದುರಿನಿಂದ ಶಿರಾ ಕಡೆಗೆ ವೇಗವಾಗಿ ಬರುತ್ತಿದ್ದ ಆಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಗಂಭೀರವಾಗಿ ಗಾಯಗೊಂಡರು. ತಕ್ಷಣ ಅವರನ್ನು ಶಿರಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ತುಮಕೂರಿಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಶಿವಕುಮಾರ್ ಅವರು ಮೊಟ್ಟೆ ವ್ಯಾಪಾರ ಮಾಡುತ್ತಿದ್ದರು. ಎಂದಿನAತೆ ರಾತ್ರಿ ವ್ಯಾಪಾರ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಂಬುಲೆನ್ಸ್ ಡ್ರೆöÊವರ್ ವಾಹನ ನಿಲ್ಲಿಸದೆ ಪರಾರಿಯಾಗಿರುತ್ತಾನೆ. ಮೃತರಿಗೆ ಮೂವರು ಪುತ್ರರು ಇದ್ದು, ಅಂತ್ಯಕ್ರಿಯೆಯನ್ನು ಚನ್ನನಕುಂಟೆಯಲ್ಲಿರುವ ಅವರ ಸ್ವಂತ ಜಮೀನಿನಲ್ಲಿ ನೆರವೇರಿಸಲಾಯಿತು.
ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಅಪಘಾತದ ಬಳಿಕ ಮಾತನಾಡಿದ ಸ್ಥಳೀಯರು ಗುತ್ತಿಗೆದಾರರ ನಿರ್ಲಕ್ಷ÷್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಶಿರಾ ನಗರದ ಐಬಿ ವೃತ್ತದಿಂದ ಕಲ್ಲುಕೋಟೆ ರಸ್ತೆಯವರೆಗೆ ನಡೆಯುತ್ತಿರುವ ದಾಂಬರೀಕರಣ ಕಾಮಗಾರಿಯ ವೇಳೆ ರಸ್ತೆಯಲ್ಲಿದ್ದ ವೇಗ ನಿಯಂತ್ರಕ ಉಬ್ಬು ತಡೆಗಳನ್ನು ತೆರವುಗೊಳಿಸಿರುವುದರಿಂದ ವಾಹನಗಳು ಅತಿವೇಗದಲ್ಲಿ ಸಂಚರಿಸುತ್ತಿದ್ದು, ಪದೇಪದೇ ಅಪಘಾತಗಳು ಸಂಭವಿಸುತ್ತಿವೆ ಎಂದು ಆರೋಪಿಸಿದರು. ಇದೇ ಕಾರಣದಿಂದ ಮತ್ತೊಂದು ಅಮಾಯಕ ಜೀವ ಬಲಿಯಾಗಿರುವುದಾಗಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾಮಗಾರಿ ನಡೆಯುತ್ತಿರುವ ಈ ರಸ್ತೆಯಲ್ಲಿ ಖಾಸಗಿ ಹಾಗೂ ಸರ್ಕಾರಿ ಶಾಲೆಗಳು, ಕಾಲೇಜುಗಳು ಇರುವುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ರಸ್ತೆಯ ವಿವಿಧೆಡೆ ತಡೆಗೋಡೆಗಳನ್ನು (ಬ್ಯಾರಿಕೇಡ್) ಅಳವಡಿಸಿ ವಾಹನಗಳ ವೇಗ ನಿಯಂತ್ರಿಸಬೇಕು. ಗುತ್ತಿಗೆದಾರರು ತಕ್ಷಣ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಇನ್ನಷ್ಟು ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಇದೇ ವೇಳೆ ಐಬಿ ವೃತ್ತದಿಂದ ದರ್ಗಾ ವೃತ್ತದವರೆಗೆ ಪಾದಚಾರಿ ಮಾರ್ಗಗಳಲ್ಲೇ ಫುಟ್‌ಪಾತ್ ವ್ಯಾಪಾರಿಗಳು ಅಂಗಡಿ ನಡೆಸುತ್ತಿರುವುದರಿಂದ ವಾಹನ ಸಂಚಾರಕ್ಕೂ, ಪಾದಚಾರಿಗಳಿಗೂ ತೀವ್ರ ತೊಂದರೆಯಾಗುತ್ತಿದ್ದು, ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ದೂರಿದರು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನಗರಸಭೆ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ಪಾದಚಾರಿ ಮಾರ್ಗಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿ, ಫುಟ್‌ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿದರು.

