ತುಮಕೂರು: ತಾಲ್ಲೂಕಿನ ಬೆಳ್ಳಾವಿ ಗ್ರಾಮ ಪಂಚಾಯಿತಿ ಟಿ ಗೊಲ್ಲಹಳ್ಳಿ ಗ್ರಾಮದಲ್ಲಿ ಇಂದು, ಗ್ರಾಮೀಣ ಪ್ರದೇಶದ ಅರ್ಹ ಕುಟುಂಬಗಳಿಗೆ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುವ ಹಾಗೂ ಜೀವನೋಪಾಯವನ್ನು ಬಲಪಡಿಸುವ ಉದ್ದೇಶದಿಂದ ವಿಶೇಷ ರೋಜ್ಗಾರ್ ದಿನಾಚರಣೆಯನ್ನು ಆಯೋಜಿಸಿ, ವಿಬಿಜಿ ರಾಮ್ ಜಿ ಯೋಜನೆ ಕುರಿತು ಸಾರ್ವಜನಿಕರಿಗೆ ವ್ಯಾಪಕ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಗೆ ಯೋಜನೆಯಡಿ ಲಭ್ಯವಿರುವ ಉದ್ಯೋಗಾವಕಾಶಗಳು, ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ವಿಧಾನ, ಜಾಬ್ ಕಾರ್ಡ್ನ ಮಹತ್ವ, ಕೂಲಿ ಪಾವತಿ ವ್ಯವಸ್ಥೆ, ಮಹಿಳೆಯರಿಗೆ ದೊರೆಯುವ ಆದ್ಯತೆ ಹಾಗೂ ಗ್ರಾಮಾಭಿವೃದ್ಧಿ ಕಾಮಗಾರಿಗಳ ಕುರಿತು ವಿವರವಾಗಿ ತಿಳಿಸಲಾಯಿತು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇದಾ ವತಿ.ಒ ಮಾತನಾಡಿ, ಗ್ರಾಮೀಣ ಕುಟುಂಬಗಳು ಯೋಜನೆಯ ಸದುಪಯೋಗ ಪಡೆದುಕೊಂಡು ಉದ್ಯೋಗವನ್ನು ಪಡೆದು ತಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಯೋಜನೆಯಡಿ ಅರ್ಹ ಕುಟುಂಬಗಳಿಗೆ ವರ್ಷಕ್ಕೆ ೧೨೫ ಮಾನವ ದಿನಗಳ ಉದ್ಯೋಗ ಒದಗಿಸುವ ಅವಕಾಶವಿದ್ದು, ನಿಗದಿತ ದಿನಗೂಲಿ ಪಾವತಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ, ಅವರ ಪ್ರಶ್ನೆಗಳಿಗೆ ಉತ್ತರ ನೀಡಲಾಯಿತು. ಯೋಜನೆಯ ಕುರಿತು ಕರಪತ್ರಗಳನ್ನು ವಿತರಿಸಿ, ಪ್ರತಿಯೊಬ್ಬ ಅರ್ಹ ಕುಟುಂಬವೂ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ತಾಲ್ಲೂಕು ಐಇಸಿ ಸಂಯೋಜಕರಾದ ಶಿವಕುಮಾರ್, ಡಿಇಓ ಗ್ರಾಮ ಪಂಚಾಯಿತಿ ಸಿಬ್ಬಂದಿ, ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

(Visited 1 times, 1 visits today)