ಹುಳಿಯಾರು: ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಅಭಾವ ದಿನದಿಂದ ದಿನಕ್ಕೆ ಭೀಕರ ರೂಪ ತಾಳುತ್ತಿದ್ದು, ಹುಳಿಯಾರು ಹೋಬಳಿಯ ಹೊಯ್ಸಲಕಟ್ಟೆ ಪಂಚಾಯತಿ ವ್ಯಾಪ್ತಿಗೆ ಒಳಪಡುವ ತಿಮ್ಮಪ್ಪನಟ್ಟಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಅನುಭವಿಸುತ್ತಿರುವ ಯಾತನೆ ಬಣ್ಣಿಸಲಸಾಧ್ಯವಾಗಿದೆ.
ಸುಮಾರು ೧೦೦ ಮನೆಗಳಿರುವ ಈ ಸಣ್ಣ ಹಳ್ಳಿಯಲ್ಲಿ ಈಗ ನೀರಿನ ಅಭಾವ ತಾಂಡವವಾಡುತ್ತಿದ್ದು, ಜನ ಸಾಮಾನ್ಯರು ಹಾಗೂ ವಿಶೇಷವಾಗಿ ಮಹಿಳೆಯರು ದಿನಪೂರ್ತಿ ಕೆಲಸ-ಕಾರ್ಯಗಳನ್ನು ಬದಿಗೊತ್ತಿ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಲಾ ಆವರಣವೇ `ನೀರಿನ ಕದನ ರಂಗ’!: ಗ್ರಾಮದಲ್ಲಿ ಮನೆ ಮನೆಗೆ ನಲ್ಲಿ ಸಂಪರ್ಕಗಳಿದ್ದರೂ ನಲ್ಲಿಗಳಲ್ಲಿ ನೀರು ಬರುತ್ತಿಲ್ಲ. ಈ ಹಿಂದೆ ಗ್ರಾಮದಲ್ಲಿದ್ದ ಎರಡು ಕೊಳವೆಬಾವಿಗಳಲ್ಲಿ (ಬೋರ್‌ವೆಲ್) ಒಂದು ಪೂರ್ತಿಯಾಗಿ ಕೆಟ್ಟು ಹೋಗಿದೆ. ಉಳಿದ ಮತ್ತೊಂದು ಕೊಳವೆಬಾವಿಯಲ್ಲಿ ಅತ್ಯಂತ ಸಣ್ಣ ಪ್ರಮಾಣದಲ್ಲಿ ನೀರು ಬರುತ್ತಿದೆ. ಹಾಗಾಗಿ ಶಾಲಾ ಆವರಣದಲ್ಲಿ ಒಂದೇ ನಲ್ಲಿಯಲ್ಲಿ ಇಡೀ ಊರಿಗೆ ನೀರು ಹಿಡಿದುಕೊಳ್ಳವ ವ್ಯವಸ್ಥೆ ಮಾಡಿ ಪಂಚಾಯ್ತಿ ಕೈ ತೊಳೆದುಕೊಂಡಿದೆ.
ಶಾಲೆ ಆವರಣದಲ್ಲಿರುವ ಈ ನಲ್ಲಿಗೆ ಇಡೀ ಗ್ರಾಮದ ೧೦೦ ಮನೆಗಳ ಜನರೂ ಬಿಂದಿಗೆ, ಕೊಡ ಹಿಡಿದು ಮುಗಿಬೀಳುತ್ತಿದ್ದಾರೆ. ಬೆಳಿಗ್ಗೆ ೬ ಗಂಟೆಯಿAದ ಸಾಯಂಕಾಲ ೬ ಗಂಟೆಯವರೆಗೆ, ಅಂದರೆ ಇಡೀ ದಿನ ಬಿಂದಿಗೆಗಳನ್ನು ಸಾಲಾಗಿಟ್ಟು ನೀರಿಗಾಗಿ ಕಾಯುವುದು ಇಲ್ಲಿನ ನಿತ್ಯ ಕಾಯಕವಾಗಿದೆ. ಪರಿಣಾಮವಾಗಿ ಶಾಲೆಗೆ ಬರುವ ಮಕ್ಕಳಿಗೆ ಪಾಠ-ಪ್ರವಚನ ಮಾಡಲು, ಶಾಲಾ ವಾತಾವರಣದಲ್ಲಿ ಶಾಂತಿ ಕಾಪಾಡಲು ಸಾಧ್ಯವಾಗದಂತೆ ಶಾಲಾ ಅಂಗಳವೇ ನೀರಿನ ಜಗಳ ಮತ್ತು ಗಲಾಟೆಯ ರಂಗಸ್ಥಳವಾಗಿ ಪರಿಣಮಿಸಿದೆ.
ಸ್ಪಂದಿಸದ ಅಧಿಕಾರಿಗಳು, ಜನಪ್ರತಿನಿಧಿಗಳು: ಗ್ರಾಮದಲ್ಲಿ ನೀರಿನ ಸಮಸ್ಯೆ ತಾಂಡವವಾಡುತ್ತಿದ್ದರೂ ಪಂಚಾಯತಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆಯೇ ಹೊರತು ಶಾಶ್ವತ ಪರಿಹಾರ ಕಲ್ಪಿಸಿಲ್ಲ. “ಹೊಸ ಬೋರ್‌ವೆಲ್ ಕೊರೆಸುತ್ತೇವೆ, ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡುತ್ತೇವೆ” ಎಂದು ಅಧಿಕಾರಿಗಳು ಭರವಸೆ ನೀಡಿ ತೆರಳಿದ್ದಾರೆಯೇ ವಿನಃ, ದಿನಗಳು ಕಳೆದರೂ ಯಾವುದೇ ಕಾರ್ಯರೂಪದ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇರಬೇಕಾದ ಕನಿಷ್ಠ ಸೌಲಭ್ಯ. ಸಂಬAಧಪಟ್ಟ ಶಾಸಕರು, ತಾಲೂಕು ಆಡಳಿತ, ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ತಿಮ್ಮಪ್ಪನಟ್ಟಿ ಗ್ರಾಮಕ್ಕೆ ಟ್ಯಾಂಕರ್ ಮೂಲಕ ತಕ್ಷಣದ ನೀರು ಪೂರೈಕೆ ಮಾಡುವುದರ ಜೊತೆಗೆ, ನೂತನ ಕೊಳವೆಬಾವಿ ಕೊರೆಸಿ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಬೇಕಿದೆ.





