ಹುಳಿಯಾರು: ಕೈಯಲ್ಲಿ ಬಲವಾದ ಸಂದೇಶ, ಎದೆಯಲ್ಲಿ ಅಚಲವಾದ ಛಲ! ಮೈಸೂರಿನ ಸಾಹಸಿ ವ್ಯಕ್ತಿ ರಾಜೇಂದ್ರ ಅವರು ಮೈಸೂರಿನಿಂದ ಮಹಾರಾಷ್ಟçದ ಪ್ರಸಿದ್ಧ ಪುಣ್ಯಕ್ಷೇತ್ರ ಶಿರಡಿಗೆ ಕೈಗೊಂಡಿರುವ ಬರೋಬ್ಬರಿ ೧,೦೦೦ ಕಿಲೋಮೀಟರ್‌ಗಳ ಸುದೀರ್ಘ ಸೈಕಲ್ ಯಾತ್ರೆ ದಾರಿಯುದ್ದಕ್ಕೂ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಯಾವುದೇ ಸ್ವಾರ್ಥವಿಲ್ಲದೆ, ಸಮಾಜಕ್ಕೆ ಪ್ರಸ್ತುತ ಅಗತ್ಯವಿರುವ ಪ್ರಮುಖ ಕಾಳಜಿಗಳನ್ನು ಹೊತ್ತು ಅವರು ಈ ಸಾಹಸಕ್ಕೆ ಕೈಹಾಕಿದ್ದಾರೆ. ಸಂವಿಧಾನದ ಉಳಿವು, ನಿರುದ್ಯೋಗ ಸಮಸ್ಯೆಯ ಶೀಘ್ರ ನಿವಾರಣೆ, ತಾರತಮ್ಯವಿಲ್ಲದ ಕಾನೂನು ಜಾರಿ ಹಾಗೂ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವುದು ಈ ಸೈಕಲ್ ಯಾತ್ರೆಯ ಪ್ರಮುಖ ಉದ್ದೇಶವಾಗಿದೆ.
ಯಾತ್ರೆಯ ಹಾದಿ ಜನಸಾಮಾನ್ಯರ ಬಾಂಧವ್ಯ: ದಿನಕ್ಕೆ ಸರಾಸರಿ ೭೫ ಕಿಲೋಮೀಟರ್ ಸಂಚರಿಸುವ ರಾಜೇಂದ್ರ ಅವರು, ದಾರಿಯಲ್ಲಿ ಸಿಗುವ ಜನಸಾಮಾನ್ಯರು ಪ್ರೀತಿಯಿಂದ ಕೊಡುವ ತಿಂಡಿ-ಊಟವನ್ನೇ ಸ್ವೀಕರಿಸುತ್ತಿದ್ದಾರೆ. ರಾತ್ರಿಯ ವೇಳೆಯಲ್ಲಿ ದೇವಸ್ಥಾನ, ಮಠಗಳು ಅಥವಾ ಆತ್ಮೀಯರ ಮನೆಗಳಲ್ಲಿ ವಾಸ್ತವ್ಯ ಹೂಡುತ್ತಾ ತಮ್ಮ ಪಯಣವನ್ನು ಮುಂದುವರಿಸಿದ್ದಾರೆ.
ಸಾಹಸ ಹೊಸದೇನಲ್ಲ!: ರಾಜೇಂದ್ರ ಅವರಿಗೆ ಈ ರೀತಿಯ ಸುದೀರ್ಘ ಯಾತ್ರೆ ಹೊಸದೇನಲ್ಲ. ಈ ಹಿಂದೆ ಸಾಹಸಮಯವಾಗಿ ಶಬರಿಮಲೆ ಹಾಗೂ ಅಯೋಧ್ಯೆಗೂ ಸೈಕಲ್ ಮೂಲಕವೇ ಯಾತ್ರೆ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಹುಳಿಯಾರಿನಲ್ಲಿ ಭವ್ಯ ಸ್ವಾಗತ ಹಾಗೂ ಆತಿಥ್ಯ: ಸಾಹಸಿ ರಾಜೇಂದ್ರ ಅವರು ಗುರುವಾರ ಹುಳಿಯಾರು ಪಟ್ಟಣಕ್ಕೆ ಆಗಮಿಸಿದಾಗ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡರು.
ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಮೋಹನ್ ಕುಮಾರ್ ರೈ, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಮೆಡಿಕಲ್ ಚನ್ನಬಸವಯ್ಯ, ಕೆಆರ್‌ಎಸ್ ಪಕ್ಷದ ಮಲ್ಲಿಕಾರ್ಜುನ್, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ರಾಘವೇಂದ್ರ ಸೇರಿದಂತೆ ಹಲವು ಪ್ರಮುಖರು ಅವರನ್ನು ಭೇಟಿಯಾಗಿ, ಯೋಗಕ್ಷೇಮ ವಿಚಾರಿಸಿದರು. ಮುಂಜಾನೆಯ ಆತಿಥ್ಯ ನೀಡಿ, ರಾಜೇಂದ್ರ ಅವರ ಈ ಉದಾತ್ತ ಉದ್ದೇಶದ ಯಾತ್ರೆಗೆ ಶುಭ ಕೋರಿ, ಮುಂದಿನ ಪ್ರಯಾಣಕ್ಕೆ ಹಾರೈಸಿ ಕಳುಹಿಸಿಕೊಟ್ಟರು.
(Visited 1 times, 1 visits today)





