ಪಾವಗಡ: ಸಾರ್ವಜನಿಕರು ತಮ್ಮ ಕುಂದುಕೊರತೆಗಳು ಹಾಗೂ ವಿವಿಧ ಕೆಲಸ-ಕಾರ್ಯಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳು ‘ಪ್ರಜಾಸೇವಾ ಆಂದೋಲನ’ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದು ತಹಶೀಲ್ದಾರ್ ವೈ ರವಿ ಯವರು ತಿಳಿಸಿದರು
ತಾಲ್ಲೂಕು ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಜಾಸೇವಾ ಆಂದೋಲನಾ ಕಾರ್ಯಕ್ರಮ ಪ್ರತಿ ತಿಂಗಳ ಒಂದನೇ ಮತ್ತು ಮೂರನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಕಾರ್ಯಕ್ರಮ ಹಾಗೂ ಉಳಿದ ದಿನಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಹೋಬಳಿ ಮಟ್ಟದ ಕಾರ್ಯಕ್ರಮಗಳು ನಡೆಯಲಿವೆ,ಈ ಯೋಜನೆಯಡಿ ಎರಡು ಪ್ರತ್ಯೇಕ ಪೋರ್ಟಲ್‌ಗಳನ್ನು ಸಜ್ಜುಗೊಳಿಸಲಾಗಿದೆ,
ಮೊದಲನೇ ಪೋರ್ಟಲ್ ಸಾರ್ವಜನಿಕರು ತಮ್ಮ ಕುಂದುಕೊರತೆ ಹಾಗೂ ದೂರುಗಳನ್ನು ನೇರವಾಗಿ ಅಪ್‌ಲೋಡ್ ಮಾಡಲು ಅವಕಾಶವಿದೆ,ಎರಡನೇ ಪೋರ್ಟಲ್ ಸಾರ್ವಜನಿಕರು ಈ ಹಿಂದೆ ಸಲ್ಲಿಸಿರುವ ಅರ್ಜಿಗಳ ಸ್ವೀಕೃತಿ ಸಂಖ್ಯೆಯನ್ನು ಅಪ್‌ಲೋಡ್ ಮಾಡಿ, ಬಾಕಿ ಇರುವ ಕೆಲಸಗಳಿಗೆ ತ್ವರಿತ ಪರಿಹಾರ ಕಂಡುಕೊಳ್ಳಬಹುದು
ಹೋಬಳಿ ಮಟ್ಟದಲ್ಲಿ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ‘ಪ್ರಜಾಸೇವಾ ಆಂದೋಲನ’ ಹಮ್ಮಿಕೊಳ್ಳಲು ಸೂಚನೆ ಬಂದಿದೆ. ಅದರಂತೆ ನಮ್ಮ ತಾಲೂಕಿನ ಮೊದಲ ಪ್ರಜಾಸೇವಾ ಆಂದೋಲನ ಕಾರ್ಯಕ್ರಮವನ್ನು ದಿನಾಂಕ ೦೫-೦೯-೨೦೨೬ ರ ಶನಿವಾರದಂದು ವೈ ಎನ್ ಹೊಸಕೋಟೆ ಹೋಬಳಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಭೆಯಲ್ಲಿ ಸಾರ್ವಜನಿಕರಿಂದ ಸ್ವೀಕೃತವಾಗುವ ಅರ್ಜಿಗಳನ್ನು ಪ್ರತಿ ಬುಧವಾರ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪರಿಶೀಲಿಸಲಾಗುವುದು. ತಾಲೂಕು ಮಟ್ಟದಲ್ಲಿ ಇತ್ಯರ್ಥವಾಗುವ ಕೆಲಸಗಳನ್ನು ತಕ್ಷಣ ಮಾಡಿಕೊಡಲಾಗುವುದು ಹಾಗೂ ಉನ್ನತ ಮಟ್ಟದ ನಿರ್ಧಾರ ಅಗತ್ಯವಿರುವ ದೂರುಗಳನ್ನು ಮೇಲಾಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಪ್ರಜಾಸೇವಾ ಆಂದೋಲನ ಕಾರ್ಯಕ್ರಮಕ್ಕೆ ಎಲ್ಲಾ ಇಲಾಖೆಗಳ ತಾಲೂಕು ಮಟ್ಟದ ಮುಖ್ಯ ಅಧಿಕಾರಿಗಳೇ ಕಡ್ಡಾಯವಾಗಿ ಭಾಗವಹಿಸಬೇಕು. ಯಾವುದೇ ಕಾರಣಕ್ಕೂ ತಮ್ಮ ಬದಲಿಗೆ ಆಧೀನ ಅಧಿಕಾರಿಗಳನ್ನು ಕಳುಹಿಸಿಕೊಡಲು ಅವಕಾಶವಿಲ್ಲ ಎಂದು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ,ಕಾರ್ಯಕ್ರಮದ ಕುರಿತು ಸಾರ್ವಜನಿಕರಿಗೆ ಮಾಹಿತಿ ತಲುಪಿಸಲು ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು, ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಾರ್ವಜನಿಕರ ಮನೆ ಮನೆಗೆ ತೆರಳಿ ಮುಖ್ಯಮಂತ್ರಿಗಳ ಸಂದೇಶ ಮತ್ತು ಅರ್ಜಿ ನಮೂನೆಗಳನ್ನು ತಲುಪಿಸುತ್ತಿದ್ದಾರೆ. ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಈ ಕಾರ್ಯಕ್ರಮಕ್ಕೆ ಆಗಮಿಸಿ ಇದರ ಸೌಲಭ್ಯ ಪಡೆಯಬೇಕು ಎಂದು ತಹಶೀಲ್ದಾರ್ ವೈ ರವಿ ಯವರು ತಿಳಿಸಿದರು.
(Visited 1 times, 1 visits today)



